ಭಾರತದ ‘ಟ್ರಂಪ್ ಭಕ್ತ’ ಹೃದಯಾಘಾತದಿಂದ ನಿಧನ

0
815

ಸನ್ಮಾರ್ಗ ವಾರ್ತೆ

ಹೈದರಾಬಾದ್,ಅ.12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನದಿಂದ ಗುಣಮುಖರಾಗಲೆಂದು ಪ್ರಾರ್ಥನೆ ಹರಕೆ ಹೊತ್ತು ಊಟವನ್ನೇ ತೊರೆದು ಉಪವಾಸ ಹಿಡಿದಿದ್ದ ಭಾರತದ ಟ್ರಂಪ್ ಭಕ್ತ ನಿಧನ ಹೊಂದಿದ್ದಾನೆ. ದಕ್ಷಿಣ ತೆಲಂಗಾಣದ ಕೊನೊಯ್ ಗ್ರಾಮದ ರೈತ ಬೂಸ ಕೃಷ್ಣರಾಜು ರವಿವಾರ ಮಧ್ಯಾಹ್ನ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ತನ್ನ ಆರಾಧನಾ ಮೂರ್ತಿಗೆ ಕೊರೋನ ಬಂದುದು ಬೂಸ ಕೃಷ್ಣರಾಜುಗೆ ನೋವುಂಟು ಮಾಡಿತ್ತು ಎಂದು ಆತನ ಗೆಳೆಯರು ಹೇಳಿದರು. ಈತ ಹಲವು ದಿನಗಳಿಂದ ನಿದ್ದೆಯನ್ನು ಮಾಡಲಿಲ್ಲ. ಕಳೆದ ಮೂರ್ನಾಲ್ಕು ದಿವಸಗಳಿಂದ ಟ್ರಂಪ್‍ಗಾಗಿ ಉಪವಾಸ ಪ್ರಾರ್ಥನೆಯಲ್ಲಿದ್ದ ಎಂದು ಗೆಳೆಯರು ತಿಳಿಸಿದರು.

ಟ್ರಂಪ್‍ರ ಅಭಿಮಾನಿಯಾದ ಬುಸ ಕೃಷ್ಣರಾಜು ಮನೆಯ ಹತ್ತಿರ ಆರಡಿ ಎತ್ತರದ ಟ್ರಂಪ್‍ರ ಮೂರ್ತಿ ಸ್ಥಾಪಿಸಿದ್ದ. ಇದಕ್ಕೆ ನಿತ್ಯ ಪೂಜೆ ಮಾಡಿ ಪ್ರಾರ್ಥಿಸುತ್ತಿದ್ದ. ಮನೆಯ ಗೊಡೆಗಳಲ್ಲಿ ಹಲವು ಕಡೆಗಳಲ್ಲಿ ಟ್ರಂಪ್‍ರ ಹೆಸರನ್ನು ಬರೆದಿಡಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್‍ರ ಕನಸು ಬಿದ್ದ ಮೇಲೆ ಆತ ಟ್ರಂಪ್‍ರ ಭಕ್ತನಾಗಿ ಮಾರ್ಪಟ್ಟಿದ್ದ. ನಂತರ ಸಣ್ಣ ಮನೆಯನ್ನು ಟ್ರಂಪ್ ಆರಾಧಾನಾಲಯವನ್ನಾಗಿ ಮಾಡಿದ್ದ. ಬೂಸ ಕೃಷ್ಣನ ಟ್ರಂಪ್ ಭಕ್ತಿಯಿಂದ ಅವರ ಸಂಬಂಧಿಕರು ನೊಂದುಕೊಂಡಿದ್ದರು.