ನಮ್ಮಿಂದ ತಪ್ಪಾಗಿದೆ ಎಂದ ಕೋಲಾರದ ಐಫೋನ್ ಘಟಕ: ಕಾರ್ಮಿಕರಿಗೆ ನ್ಯಾಯ ನೀಡುವ ಭರವಸೆ

0
537

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಘಟಕದಲ್ಲಿರುವ ದೇಶದ ಏಕೈಕ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕವಾದ ವಿಸ್ಟ್ರಾನ್ ನಲ್ಲಿ ಕಾರ್ಮಿಕರು ನಡೆಸಿದ ದಾಂಧಲೆಗೆ ಸಂಬಂಧಿಸಿ ವಾರದ ಬಳಿಕ ಹೇಳಿಕೆ ನೀಡಿರುವ ಕಂಪೆನಿಯು, ನಮ್ಮಿಂದ ತಪ್ಪು ನಡೆದಿದ್ದು. ಅದಕ್ಕಾಗಿ ಕಾರ್ಮಿಕರಲ್ಲಿ ಕ್ಷಮೆ ಕೋರುತ್ತೇವೆ ಎಂದು ಒಪ್ಪಿಕೊಂಡಿದೆ.

ಅಲ್ಲದೇ, ಭಾರತದ ಉನ್ನತ ಅಧಿಕಾರಿಯಾಗಿ ನೇಮಕಗೊಳಿಸಿದ್ದ ಉಪಾಧ್ಯಕ್ಷನನ್ನೂ ಕೂಡಾ ಹುದ್ದೆಯಿಂದ ವಜಾ ಮಾಡಿರುವುದಾಗಿ ವಿಸ್ಟ್ರಾನ್ ಕಂಪನಿ ತಿಳಿಸಿದೆ.

ಕೆಲವು ಕಾರ್ಮಿಕರಿಗೆ ಸರಿಯಾಗಿ ಅಥವಾ ಸಮಯಕ್ಕೆ ಸರಿಯಾಗಿ ಸಂಬಳ ನೀಡಿಲ್ಲ ಎಂದು ಈ ಘಟನೆಯ ತನಿಖೆಯಿಂದ ತಿಳಿದುಬಂದಿದೆ ಎಂದು ಅದು ಹೇಳಿದ್ದು, “ನಾವು ಇದನ್ನು ತೀವ್ರವಾಗಿ ವಿಷಾದಿಸುತ್ತೇವೆ ಮತ್ತು ನಮ್ಮ ಎಲ್ಲ ಕಾರ್ಮಿಕರೊಂದಿಗೆ ಕ್ಷಮೆ ಯಾಚಿಸುತ್ತೇವೆ” ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಯ ನಂತರ ಶಿಸ್ತು ಕ್ರಮವಾಗಿ, ವಿಸ್ಟ್ರಾನ್ ಇನ್ಫೋಕಾಮ್ ಉತ್ಪಾದನಾ ಭಾರತದ ಉಪಾಧ್ಯಕ್ಷ (ನಾವೀನ್ಯತೆ ವ್ಯವಹಾರ ಗುಂಪು) ವಿನ್ಸೆಂಟ್ ಲೀ ಅವರನ್ನು ತೆಗೆದುಹಾಕಲಾಗಿದೆ. ಈ ಸಮಸ್ಯೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಪ್ರಕ್ರಿಯೆಗಳನ್ನು ಹೆಚ್ಚಿಸುತ್ತಿದೆ ಮತ್ತು ಕಂಪನಿಯು ತಂಡಗಳನ್ನು ಪುನರ್ ರಚಿಸುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ‌.

ಎಲ್ಲಾ ಕಾರ್ಮಿಕರಿಗೆ ತಕ್ಷಣವೇ ಸಂಪೂರ್ಣ ಪರಿಹಾರವನ್ನು ನೀಡಲಾಗುವುದು ನಮ್ಮ ಆದ್ಯತೆಯಾಗಿದೆ ಮತ್ತು ಅದನ್ನು ಸಾಧಿಸಲು ನಾವು ಶ್ರಮಿಸುತ್ತಿದ್ದೇವೆ. ಮತ್ತೆ ಇಂತಹ ಘಟನೆಗಳು ಸಂಭವಿಸದಂತೆ ನಾವು ಸೂಕ್ತ ರೀತಿಯ ಕ್ರಮ ಕೈಗೊಳ್ಳುವುದಾಗಿ ಕಂಪನಿಯು ಕಾರ್ಮಿಕರಿಗೆ ನ್ಯಾಯ ನೀಡುವ ಭರವಸೆ ನೀಡಿದೆ.