ಸನ್ಮಾರ್ಗ ವಾರ್ತೆ
ಮಂಗಳೂರು: ಇತ್ತೀಚೆಗೆ ಉಳ್ಳಾಲದ ದೇವಸ್ಥಾನವೊಂದರ ಕಾಣಿಕೆ ಹುಂಡಿಯಲ್ಲ ಕಾಂಡೋಮ್ ಮತ್ತಿತರ ವಸ್ತುಗಳನ್ನು ಹಾಕಿ ವಿಕೃತಿ ಮೆರೆದಂತಹ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸಮಸ್ತ ಮುಖಂಡ ಪ್ರಗತಿಪರ ಚಿಂತಕ ಮೌಲಾನಾ ಎಸ್.ಬಿ ದಾರಿಮಿ ಮುಲ್ಕಿ ಆಗ್ರಹಿಸಿದ್ದಾರೆ.
ದೇಶದಲ್ಲಿ ಬೇರೆ ಬೇರೆ ಜಾತಿ ಜನಾಂಗದ ಜನರು ಬಹಳ ಸೌಹಾರ್ದಯುತವಾಗಿ ಸಾವಿರಾರು ವರ್ಷಗಳಿಂದ ಬದುಕಿ ಬಾಳುತ್ತಿದ್ದು ಇಂತಹ ಶಾಂತಿಯ ವಾತಾವರಣವನ್ನು ಕಲುಷಿತಗೊಳಿಸಿ ಗಲಭೆ ಸೃಷ್ಟಿಸಿ ಈ ಮೂಲಕ ರಾಜಕೀಯ ಲಾಭ ಕೊಯ್ಯಲು ಹೂಡಿದ ಹುನ್ನಾರ ಇದಾಗಿರಬಹುದು ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.
ಯಾವುದೇ ಧರ್ಮದ ದೇವಸ್ಥಾನಗಳು ಅಥವಾ ಕಾಣಿಕೆ ಹುಂಡಿಗಳು ಇರಬಹುದು ಅವುಗಳನ್ನು ಅವಹೇಳನ ಮಾಡಿ ವಿಕೃತಿ ಮರೆಯುವುದು ಘನಘೋರ ಅಪರಾಧವಾಗಿದೆ. ಈ ಹಿಂದೆ ಮತ್ತೊಂದು ಕಡೆ ಇಂತಹದೇ ಕೃತ್ಯ ನಡೆದಿದ್ದು ಆ ಕೂಡಲೇ ಕಿಡಿಗೇಡಿಗಳನ್ನು ಬಲೆ ಬೀಸಿ ಬಂಧಿಸಿರುತ್ತಿದ್ದರೆ ಈಗ ಇಂತಹ ನೀಚ ಕೃತ್ಯ ಮತ್ತೊಮ್ಮೆ ಮರುಕಳಿಸುತ್ತಿರಲಿಲ್ಲ.
ಸಮಾಜದಲ್ಲಿ ಶಾಂತಿಭಂಗಕ್ಕೆ ಕಾರಣರಾಗುವ ಇಂತಹ ಕಿಡಿಗೇಡಿಗಳ ಜಾತಿ ಧರ್ಮವನ್ನು ನೋಡದೇ ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೊಳಪಡಿಸುವ ಮೂಲಕ ನಾಡಿನ ಕ್ಷೇಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.












