ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ವಿದ್ಯಾವಂತ ಯುವಕ-ಯುವತಿಯರು ಅಂತರ್ಜಾತಿ ವಿವಾಹವಾಗುವ ಮೂಲಕ ಭಾರತದಲ್ಲಿ ಜಾತಿ ಮತ್ತು ಸಮುದಾಯಗಳ ನಡುವಿನ ಕೋಮು ದ್ವೇಷವನ್ನು ಕಡಿಮೆ ಮಾಡಲು ಮುಂದಿನ ದಾರಿ ನೋಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪೊಂದರಲ್ಲಿ ಅಭಿಪ್ರಾಯಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.
“ವಿದ್ಯಾವಂತ ಕಿರಿಯ ಹುಡುಗರು ಮತ್ತು ಹುಡುಗಿಯರು ತಮ್ಮ ಜೀವನ ಸಂಗಾತಿಗಳನ್ನು ತಾವೇ ಆರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ನಮ್ಮ ಸಮಾಜದಲ್ಲಿ ಮದುವೆಯ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವ ಜಾತಿ ಮತ್ತು ಸಮುದಾಯಗಳ ಬಗ್ಗೆ ಭೀತಿ ದೂರವಾಗುತ್ತದೆ. ಬಹುಶಃ, ಅಂತರ್ಜಾತಿ ವಿವಾಹಗಳಿಂದ ಕೋಮು ದ್ವೇಷ ಕಡಿಮೆಯಾಗಬಹುದು” ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಇತ್ತೀಚಿನ ತೀರ್ಪಿನಲ್ಲಿ ತಿಳಿಸಿದೆ.
ನಮ್ಮ ದೇಶದ ಜಾತಿ ಸಮಸ್ಯೆಗೆ ನಿಜವಾದ ಪರಿಹಾರಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆಯ ಬಗೆಗಿನ ಮಾತನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಕೌಲ್ ಅವರು, ಅಂತರ್ಜಾತಿ ವಿವಾಹದಿಂದ ಮುಂದಿನ ಪೀಳಿಗೆಗೆ ರಕ್ತಸಂಬಂಧಿ ಎಂಬ ಭಾವನೆಯನ್ನು ಉಂಟು ಮಾಡುತ್ತದೆ ಮತ್ತು ಈ ರಕ್ತ ಸಂಬಂಧದ ಭಾವನೆ, ಬಂಧುಬಳಗದವನು ಅತ್ಯುನ್ನತವಾದರೆ, ಪ್ರತ್ಯೇಕತೆಯ ಭಾವನೆ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಕೌಲ್ ಫೆಬ್ರವರಿ 8 ರಂದು ನೀಡಿದ ತೀರ್ಪಿನಲ್ಲಿ “ಇಬ್ಬರು ವಯಸ್ಕ ವ್ಯಕ್ತಿಗಳು ಪರಸ್ಪರ ಒಂದಾಗಲು ಒಪ್ಪಿಕೊಂಡ ನಂತರ ಕುಟುಂಬ ಅಥವಾ ಸಮುದಾಯ ಅಥವಾ ಕುಲದ ಒಪ್ಪಿಗೆ ಅಗತ್ಯವಿಲ್ಲ. ವಿವಾಹದ ಬಳಿಕ ಅವರಿಗೆ ಪ್ರಾಮುಖ್ಯತೆ ನೀಡಬೇಕು ” ಎಂದು ಹೇಳಿದ್ದಾರೆ.
ಜಾತಿ ಮತ್ತು ಸಮುದಾಯದ ನಿಯಮಗಳನ್ನು ಮೀರಿ ಮದುವೆಯಾಗಲು ಹೊರಡುವ ಯುವ ಜೋಡಿಗಳು ಹಿರಿಯರಿಂದ ಬೆದರಿಕೆಗಳನ್ನು ಎದುರಿಸುತ್ತಿದೆ ಎಂಬುದನ್ನೂ ಗಮನಿಸಿದ ನ್ಯಾಯಮೂರ್ತಿಯವರು, “ನ್ಯಾಯಾಲಯಗಳು ಈ ಯುವ ಜೋಡಿಗಳ ನೆರವಿಗೆ ಬರುತ್ತವೆ” ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.












