ಸನ್ಮಾರ್ಗ ವಾರ್ತೆ
ವಿರಾಜಪೇಟೆ: ಧರ್ಮದ ಹೆಸರಿನಲ್ಲಿ ಅಧರ್ಮ ಮಾಡುವುದು ಧರ್ಮಗಳನ್ನು ನೀಡಿದಂತಹ ದೇವನಿಗೆ ಮಾಡುವ ಅವಮಾನವಾಗಿದೆ’ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಷರಲಿ ಉಡುಪಿ ಹೇಳಿದರು. ವಿರಾಜಪೇಟೆಯ ಸರಕಾರಿ ಪ್ರಥಮ ಕಾಲೇಜಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯವ್ಯಾಪಿಯಾಗಿ ನಡೆಸಿದ್ದ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ” ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತರಿಗೆ, ಶಿಕ್ಷಕರುಗಳಿಗೆ ಹಾಗೂ ವಕೀಲರುಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
“ಧರ್ಮಗಳು ಮನುಷ್ಯನಿಗೆ ಬದುಕನ್ನು ಕಲಿಸುತ್ತದೆ. ಧರ್ಮಗಳು ಮನುಷ್ಯನನ್ನು ದೇವನೊಂದಿಗೆ ಜೋಡಿಸುತ್ತವೆ. ನೈಜ ಧಾರ್ಮಿಕ ವಿಶ್ವಾಸಿಗಳು ಎಂದೂ ಅಧರ್ಮಕ್ಕೆ ಕೈಹಾಕುವುದಿಲ್ಲ. ಪ್ರವಾದಿ ಮುಹಮ್ಮದ್(ಸ) ರವರು ಕೇವಲ ಮುಸಲ್ಮಾನರ ಪ್ರವಾದಿಯಲ್ಲ. ಅವರು ಇಡೀ ಮಾನವಕುಲಕ್ಕೆ ಮಾರ್ಗದರ್ಶಕರಾಗಿ ದೇವನಿಂದ ಅವತೀರ್ಣಗೊಂಡ ಅಂತಿಮ ಪ್ರವಾದಿಯಾಗಿದ್ದರು”.ಎಂದರು. ಸಂತ ಅನ್ನಮ್ಮ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರೂ ಧರ್ಮಗುರುಗಳೂ ಆದ ರೆ | ಫಾ||ಮದುಲೈ ಮುತ್ತು ಮಾತನಾಡಿ, “ಎಲ್ಲಿ ಧರ್ಮವಿರುವುದಿಲ್ಲವೋ ಅಲ್ಲಿ ಅಧರ್ಮ ಪಾರಮೈತೆಯನ್ನು ಮೆರೆಯುತ್ತದೆ. ಧರ್ಮದ ಅಭಾವದಲ್ಲಿ ಅನೈತಿಕತೆ , ಅರಾಜಕತೆ, ಮೌಲ್ಯಗಳ ಕೊರತೆ ಮತ್ತು ಅಶಾಂತಿ ಮನುಷ್ಯನ ಮೇಲೆ ಹಿಡಿತ ಸಾಧಿಸುತ್ತವೆ. ಅರಿಣಾಮವಾಗಿ ಅಸಮಾನತೆಯ ಮತ್ತು ನೆಮ್ಮದಿ ರಹಿತ ಸಮಾಜ ನಿರ್ಮಾಣವಾಗುತ್ತದೆ. ಧರ್ಮಗಳಿಂದ ಮಾತ್ರ ನೆಮ್ಮದಿ ಪೂರ್ಣ ಸಮಾಜ ನಿರ್ಮಾಣ ಸಾಧ್ಯ” ಎಂದರು.
ಬಾಳಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ||.ಜೆ.ಸೋಮಣ್ಣ ಮಾತನಾಡಿ, ‘ತನ್ನ ಧರ್ಮವನ್ನು ಗೌರವಿಸುವಂತೆ ಇತರ ಧರ್ಮವನ್ನು ಗೌರವಿಸುವಾತನು ದೇವನ ಮುಂದೆ ಆದರಣೀಯನಾಗುತ್ತಾನೆ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ನಮ್ಮ ಸಂವಿಧಾನದ ಪ್ರಮುಖ ವಿಶೇಷತೆಯಾಗಿದೆ. ನಮ್ಮ ರಾಷ್ಟ್ರವು ಬಹು ಸಂಸ್ಕಂತಿಯ ಮತ್ತು ಬಹುಜಾತೀಯ ರಾಷ್ಟ್ರವಾಗಿದೆ. ದೇಶದ ಏಕತೆ ಬಹುದೊಡ್ಡ ಶಕ್ತಿಯಾಗಿದೆ. ಸಂವಿಧಾನದ ವಿಶೇಷತೆಗಳನ್ನು ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು’ ” ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಕೆ.ಬೋಪಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯೆ ಬೊವೈರಿಯಂಡ ಸುಬ್ಬಯ್ಯ ಮಾತನಾಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ಪತ್ರಕರ್ತರ ವಿಭಾಗದಲ್ಲಿ ಕೊಡಗು ಒಳಗೊಂಡ ಮಂಗಳೂರು ವಲಯಕ್ಕೆ ವಿರಾಜಪೇಟೆಯ ಹವ್ಯಾಸೀ ಪತ್ರಕರ್ತೆ ಉಷಾ ಪ್ರೀತಮ್ ಪ್ರಥಮ ಬಹುಮಾನವಾದ 15ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡರು. ವಕೀಲರ ವಿಭಾಗದಲ್ಲಿ ಕುಶಾಲನಗರದ ಎಂ.ಆರ್.ಜಯರಾಮ್ ದ್ವಿತೀಯ ಹಾಗೂ ವಿರಾಜಪೇಟೆಯ ಸಿ.ಕೆ.ರಶೀದಾ ತೃತೀಯ ಬಹುಮಾನವನ್ನು ಪಡೆದುಕೊಂಡರು. ಶಿಕ್ಷಕರ ವಿಭಾಗದಲ್ಲಿ ಕಲ್ಲುಬಾಣೆ ಬದ್ರಿಯಾ ಪ್ರೌಢಶಾಲೆಯ ಶಿಕ್ಷಕ ರಂಜಿತ್ ಹೆಚ್.ಎಂ.ತೃತೀಯ ಬಹುಮಾನವನ್ನು ಪಡೆದುಕೊಂಡರು. ಇದೇ ವಿಭಾಗದಲ್ಲಿ ಮೂಲತಃ ವಿರಾಜಪೇಟೆಯವರಾದ ಪ್ರಸಕ್ತ ಸುಳ್ಯದಲ್ಲಿ ಉಪನ್ಯಾಸಕರಾಗಿರುವ ಚಾಲ್ಸ್ ಡಿಸೋಜ ಪ್ರಥಮ ಬಹುಮಾನ ಪಡೆದುಕೊಂಡಿದ್ದರು. ಅವರು ತಾರೀಕು 18ರಂದು ಬಿ.ಸಿ.ರೋಡ್ನ ಕಲ್ಲಡ್ಕ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನವನ್ನು ಸ್ವೀಕರಿಸಿದ್ದರು. ಮಡಿಕೇರಿಯ ವಕೀಲ ಅಬೂ ತಾಹಿರ್ ರವರು ಸಮಾಧಾನಕರ ಬಹುಮಾನಕ್ಕೆ ಹಾಗೂ ಕೂಡಿಗೆಯ ಸಾಹಿತಿ ಭಾರದ್ವಾಜ್ ಆನಂದತೀರ್ಥರರು ತೀರ್ಪುಗಾರರ ಮೆಚ್ಚುಗೆಯ ಬಹುಮಾನಕ್ಕೆ ಭಾಜನರಾದರು. ವಿದ್ಯಾರ್ಥಿನಿ ಝಿಯಾ ಲಾಮ್ರವರ ಕುರ್ಆನ್ ಪಠಣದೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ.ಅಬ್ದುಲ್ ರೆಹಮಾನ್ ನಿರೂಪಣೆ ಮಾಡಿದರು.













