ಅಮೆರಿಕದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಭಾರತೀಯ ದಂಪತಿ: ಬಾಲ್ಕನಿಯಲ್ಲಿ ಅಳುತ್ತಿದ್ದ 4 ವರ್ಷದ ಮಗಳು

0
917

ಸನ್ಮಾರ್ಗ ವಾರ್ತೆ

ಮುಂಬೈ: ಅಮೆರಿಕದ ನ್ಯೂಜೆಸಿರ್ಯಲ್ಲಿ ಭಾರತೀಯ ದಂಪತಿ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ನಾಲ್ಕು ವರ್ಷದ ಮಗಳು ಬಾಲ್ಕನಿಯಲ್ಲಿ ಅಳುವುದು ಕಂಡು ನೆರೆಯ ಮನೆಯವರು ಬಂದು ನೋಡಿದಾಗ ದಂಪತಿ ಇರಿತಕ್ಕೊಳಗಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಮೃತರನ್ನು ಬಾಲಾಜಿ ಭರತ್ ರುದ್ರವಾರ್(32) ಮತ್ತು ಪತ್ನಿ ಆರತಿ(30) ಗುರುತಿಸಲಾಗಿದ್ದು, ಇವರ ಅರ್ಲಿಂಗ್ಟನ್ಬರೊದ ಮನೆಯಲ್ಲಿ ಬುಧವಾರ ಘಟನೆ ನಡೆದಿದೆ.

ಆರತಿ ಏಳು ತಿಂಗಳ ಗರ್ಭಿಣಿಯಾಗಿದ್ದರು. ಬಾಲಾಜಿ ಪತ್ನಿಗೆ ಇರಿದದ್ದು ಮತ್ತು ಮನೆಯಲ್ಲಿ ಕಿತ್ತಾಟ ನಡೆದ ಸೂಚನೆಗಳಿವೆ ಎಂದು ಕೆಲವು ಅಮೆರಿಕ ಮಾಧ್ಯಮಗಳು ಬರೆದಿವೆ.
ಪೊಲೀಸರ ತನಿಖೆ ಮುಂದುವರಿದಿದ್ದು, ಪೋಸ್ಟ್ ಮಾರ್ಟಂ ವರದಿ ಬಂದ ಮೇಲೆಯೇ ಏನನ್ನಾದರೂ ಖಚಿತವಾಗಿ ಹೇಳಲು ಸಾಧ್ಯ ಎಂದು ಅಮೆರಿಕದ ತನಿಖಾಧಿಕಾರಿಗಳನ್ನು ಉದ್ದೇಶಿಸಿ ಮಾಧ್ಯಮಗಳು ವರದಿ ಮಾಡಿವೆ.

ಮೃತರಾದ ವಿಷಯ ನಮಗೆ ಗುರುವಾರ ಗೊತ್ತಾಗಿದ್ದು ಎಂದು ಬಾಲಾಜಿಯ ತಂದೆ ರುದ್ರವಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ನಾವು ಅವರ ಜೊತೆ ಅಮೆರಿಕದಲ್ಲಿದ್ದೆವು. ಪುನಃ ಅಲ್ಲಿಗೆ ಹೋಗುವ ಸಿದ್ಧತೆ ನಡೆಸುತ್ತಿದ್ದೆವು. ಅಷ್ಟರಲ್ಲಿ ಈ ದುರಂತ ಸುದ್ದಿ ಬಂತು. ತುಂಬ ಸಂತೋಷದಿಂದ ತನ್ನ ಮಗ ಮತ್ತು ಕುಟುಂಬ ಜೀವಿಸುತ್ತಿದ್ದರು. ಪ್ರೀತಿ ಪೂರ್ವಕರಾದ ನೆರೆಯವರ ನಡುವೆ ಅವರು ಇದ್ದರು. ಏನು ಆಗಿದೆ ಎಂದು ಗೊತ್ತಿಲ್ಲ ಎಂದು ಭರತ್ ರುದ್ರವಾರ್ ಹೇಳಿದರು.

ಎರಡು ವಾರಗಳಲ್ಲಿ ಎಲ್ಲ ಕ್ರಮಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಊರಿಗೆ ಕರೆ ತರಲಾಗುವುದು. ಸದ್ಯ ಮಗು ಈಗ ಬಾಲಾಜಿಯ ಗೆಳೆಯರ ಮನೆಯಲ್ಲಿದೆ ಎಂದು ರುದ್ರಾವರ್ ಹೇಳಿದರು.

ಸಾಫ್ಟ್ ಇಂಜಿನಿಯರ್‍ ಗಳಾದ ಆರತಿ ಮತ್ತು ಬಾಲಾಜಿ 2014ರಲ್ಲಿ ಮದುವೆಯಾಗಿದ್ದರು. 2015ರಲ್ಲಿ ಬಾಲಾಜಿಗೆ ಇಂಡಿಯನ್ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದರಿಂದ ಇಬ್ಬರೂ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು.