ಫೆಲಸ್ತೀನ್‌ ಹಕ್ಕುಗಳ ಹೋರಾಟಕ್ಕೆ ಮತ್ತೊಮ್ಮೆ ಬೆಂಬಲ ಘೋಷಿಸಿದ ಕತರ್

0
916

ಸನ್ಮಾರ್ಗ ವಾರ್ತೆ

ದೋಹ: ಅಲ್ ಅಕ್ಸಾದ ಮಸೀದಿಯಲ್ಲಿ ಆರಾಧನೆ ನಡೆಸುತ್ತಿದ್ದ ವಿಶ್ವಾಸಿಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯಗಳು ವರದಿಯಾದ ಬೆನ್ನಲ್ಲೇ ಫೆಲಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‍ರೊಂದಿಗೆ ಕತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್‍ಥಾನಿ ಫೋನ್ ಕರೆ ಮಾಡಿ ಪ್ರಸ್ತಕ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು ಎಂದು ಕತರ್ ಸುದ್ದಿ ಸಂಸ್ಥೆ ತಿಳಿಸಿದೆ.

ಜೆರುಸಲೇಮ್ ನಿವಾಸಿಗಳ ಅಸಹಾಯಕತೆ ಮತ್ತು, ಶೇಕ್ ಜರ್ರಾಹ್ ಪ್ರದೇಶದಲ್ಲಿ ಇಸ್ರೇಲ್ ನಿಯಂತ್ರಣದ ಕುರಿತು ಪ್ರೆಸಿಡೆಂಟ್ ಅಬ್ಬಾಸ್ ಕತರ್ ಅಮೀರ್‌ಗೆ ತಿಳಿಸಿದರು. ಇದು ಅಂತಾರಾಷ್ಟ್ರೀಯ ಕಾನೂನು ಮತ್ತು ಫೆಲೆಸ್ತೀನಿಯನ್ ಜನರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಬ್ಬಾಸ್ ಹೇಳಿದರು.

ಫೆಲಸ್ತೀನಿಯರ ಕಾನೂನಾತ್ಮಕ ಹಕ್ಕು ಮರುಸ್ಥಾಪಿಸುವ ಯತ್ನಗಳಿಗೆ ಕತರ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಶೇಕ್ ತಮೀಮ್ ಅಲ್ ಥಾನಿ ಹೇಳಿದರು. ಫೆಲಸ್ತೀನಿಯರ ಎಲ್ಲ ಹಕ್ಕು ಹೋರಾಟಗಳಿಗೆ ಯಾವುದೇ ಶರತ್ತುಗಳಿಲ್ಲದೇ ಬೆಂಬಲ ಸೂಚಿಸುವುದಾಗಿ ಹೇಳಿದ ಕತರ್ ಅಮೀರ್‌ರ ನಿಲುವನ್ನು ಫೆಲಸ್ತೀನಿ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‌ರವರು ಪ್ರಶಂಸಿಸಿ ಕೃತಜ್ಞತೆ ಸಲ್ಲಿಸಿದರು.