ಕೊರೋನಾ ಭಯ: ಪೊಲೀಸ್ ಕಮಿಷನರ್ ಗೆ ವಾಯ್ಸ್ ಮೆಸೇಜ್ ಕಳಿಸಿ ಆತ್ಮಹತ್ಯೆಗೆ ಶರಣಾದ ಮಂಗಳೂರಿನ ದಂಪತಿ

0
917

ಡೆತ್ ನೋಟ್ ನಲ್ಲಿ ಮಾಧ್ಯಮಗಳ ವರದಿ ಬಗ್ಗೆ ಉಲ್ಲೇಖ..!

ಸನ್ಮಾರ್ಗ ವಾರ್ತೆ

ಮಂಗಳೂರು : ಕೊರೋನ ಸೋಂಕು ತಗುಲಿದೆ ಎಂಬ ಭಯದಲ್ಲಿ ದಂಪತಿ ಪೊಲೀಸ್ ಆಯುಕ್ತರು ಸೇರಿದಂತೆ ಪರಿಚಯಸ್ಥರಿಗೆ ವಾಯ್ಸ್ ಮೆಸೇಜ್ ಕಳಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೈಕಂಪಾಡಿಯ ಚಿತ್ರಾಪುರದ ರೆಹೆಜಾ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಆರ್ಯ ಸುವರ್ಣ (45) ಮತ್ತು ಗುಣ ಸುವರ್ಣ ಎಂದು ತಿಳಿದು ಬಂದಿದೆ.

ಗುಣ ಸುವರ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದು, ನೋವು ಹೇಳಿಕೊಂಡಿದ್ದಾರೆ. ಸ್ವತಃ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಿನಕ್ಕೆ ಎರಡು ಇನ್ಸುಲಿನ್ ಇಂಜೆಕ್ಷನ್ ಪಡೆದುಕೊಂಡರೂ ಸುಗರ್ ಕಂಟ್ರೋಲ್ ಬರ್ತಾ ಇಲ್ಲ. ಜೊತೆಗೆ ಮೆಡಿಸಿನ್ ದೇಹಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಮಕ್ಕಳಾಗಿಲ್ಲ. ಎರಡು ಬಾರಿ ಗರ್ಭಿಣಿಯಾಗಿ ತೊಂದರೆ ಆಗಿತ್ತು. ಒಮ್ಮೆ ಮಗುವಾಗಿ 13 ದಿನದಲ್ಲಿ ತೀರಿಕೊಂಡಿತ್ತು. ನಾವು 2000 ಇಸವಿಯಲ್ಲಿ ಮದುವೆಯಾಗಿದ್ದು, ದೀರ್ಘ ಕಾಲದಿಂದ ನೋವು ಕಂಡಿದ್ದೇವೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಉಂಟಾಗಿತ್ತು ಎಂದು ಬರೆದಿದ್ದಾರೆ.

ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದಿದೆ. ಗಂಡನಿಗೂ ಅದೇ ರೀತಿಯ ಲಕ್ಷಣಗಳಿವೆ. ಟಿವಿಯಲ್ಲಿ ಬರುವ ಸುದ್ದಿಗಳನ್ನು ನೋಡಿ ಹೆದರಿದ್ದೇವೆ. ಹಾಗಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇವೆ. ಮನೆ ಒಳಗಿನ ವಸ್ತುಗಳನ್ನು ಬಡವರಿಗೆ ನೀಡಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಮೇಶ್ ಪೊಲೀಸ್ ಕಮೀಷನರ್, ಹಿಂದೂ ಸಂಘಟನೆ ಮುಖಂಡರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಬಳಿಕ ಶರಣ್ ಪಂಪ್ವೆಲ್, ಸತ್ಯಜಿತ್ ಸುರತ್ಕಲ್ ಗೂ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಪೊಲೀಸ್ ಕಮಿಷನರ್ ಆರ್ಯ ಅವರಿಗೆ ಪ್ರತಿಕ್ರಿಯಿಸಿ, ದುಡುಕಿನ ನಿರ್ಧಾರ ಮಾಡದಂತೆ ಮನವಿ ಮಾಡಿದ್ದರು.

ಅಂತ್ಯಕ್ರಿಯೆ ಮಾಡುವಂತೆ ವಾಯ್ಸ್ ಮೆಸೇಜ್‍ನಲ್ಲಿ ಮನವಿ ಮಾಡಿದ್ದು, ಅಂತ್ಯಕ್ರಿಯೆಗಾಗಿ ಒಂದು ಲಕ್ಷ ರೂಪಾಯಿ ಇಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲದೆ ಮನೆಯ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡಿದ್ದಾರೆ. ವಾಯ್ಸ್ ಮೆಸೇಜ್ ಬಂದ ತಕ್ಷಣ ಪೊಲೀಸ್ ಕಮೀಷನರ್ ಅಡ್ರೆಸ್ ಟ್ರ್ಯಾಕ್ ಮಾಡಿದ್ದು, ಪೊಲೀಸರು ಮನೆ ತಲುಪುವ ವೇಳೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.