ಕೊರಗ ಕುಟುಂಬದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಪೊಲೀಸ್ ದೌರ್ಜನ್ಯ: ಶಿಸ್ತುಕ್ರಮ ಜರುಗಿಸಲು ಸಚಿವ ಕೋಟ ಸೂಚನೆ

0
302

ಸನ್ಮಾರ್ಗ ವಾರ್ತೆ

ಬೆಂಗಳೂರು: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದಲ್ಲಿ ಕೊರಗ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗರ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು.

ಮದುವೆ ಸಮಾರಂಭಕ್ಕೆ ನುಗ್ಗಿದ್ದ ಪೊಲೀಸರು ಮದುಮಗನ ಸಹಿತ ಕೊರಗ‌ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು. ಘಟನೆ ಕುರಿತು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಹಾಗೂ ಪಶ್ಚಿಮ ವಲಯ ಐಜಿಪಿಯಂದಿಗೆ ಸಚಿವರು ಚರ್ಚಿಸಿದರು. ಘಟನೆಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಜರುಗಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

ಬ್ರಹ್ಮಾವರ ತಾಲ್ಲೂಕಿನ ಕೋಟ ಪೊಲೀಸ್ ಠಾಣೆಯ ಪೊಲೀಸರು ಕೊರಗ ಜನಾಂಗಕ್ಕೆ ಸೇರಿದವರ ಮದುವೆ ಸಂದರ್ಭದಲ್ಲಿ ನಡೆಸಿರುವ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಎಎಸ್​ಐ ಸಂತೋಷ್ ಸೇರಿದಂತೆ ಐವರು ಸಿಬ್ಬಂದಿಗೆ ಮುಂದಿನ ಸೂಚನೆಯವರೆಗೆ ಕರ್ತವ್ಯಕ್ಕೆ ಹಾಜರಾಗದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಸೂಚನೆ ನೀಡಿದ್ದಾರೆ. ಕೊರಗ ಜನಾಂಗದ ಮದುವೆ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿದರು ಎನ್ನುವ ಕಾರಣಕ್ಕೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದ್ದರು. ಘಟನೆ ಬಗ್ಗೆ ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಪ್ರಕರಣ ಸಂಬಂಧ ಉಡುಪಿಯಲ್ಲಿ ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಎಸ್​ಪಿ ಎನ್.ವಿಷ್ಣುವರ್ಧನ, ವಿಚಾರಣೆ ಮುಗಿಯುವ ತನಕ ಕೋಟ ಠಾಣೆಯ ಪೊಲೀಸರನ್ನು ಬೇರೆಡೆಗೆ ನಿಯೋಜಿಸಲಾಗುವುದು. ಉಡುಪಿ ಡಿವೈಎಸ್​ಪಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ನಾಳೆ ಸಂಜೆಯ ಒಳಗೆ ತನಿಖೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾತ್ರಿ 10 ಗಂಟೆಯ ನಂತರವೂ ಲೌಡ್ ​ಸ್ಪೀಕರ್ ಚಾಲು ಇದ್ದ ಕಾರಣ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಬ್ಬಂದಿಯೊಬ್ಬರು ಶಬ್ದ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದರು. ಮತ್ತೆ 11 ಗಂಟೆಗೆ ದೂರು ಬಂದ ಕಾರಣ ಪಿಎಸ್ಐ ಸ್ಥಳಕ್ಕೆ ಭೇಟಿ‌ ನೀಡಿದ್ದರು. ಹಲ್ಲೆ ನಡೆದಿರುವುದು ನಿಜವಾಗಿದ್ದಲ್ಲಿ ಸಿಬ್ಬಂದಿ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಇಲಾಖೆ ಬಗ್ಗೆ ನಂಬಿಕೆ ಇರಲಿ ಎಂದು ವಿನಂತಿಸಿದರು.