ಲೇಖನ: ಸಲೀಮ್ ಬೋಳಂಗಡಿ
ಉತ್ತರ ಪ್ರದೇಶದ ಚುನಾವಣೆಯ ರಣಭೂಮಿ ಸಿದ್ಧವಾಗಿದೆ. ಬಿಜೆಪಿಯ ಹಲವಾರು ನಾಯಕರು, ಶಾಸಕರ ಪಕ್ಷಾಂತರ ಪರ್ವಕ್ಕೆ ನಾವು ಸಾಕ್ಷಿಯಾದೆವು, ಆರ್.ಪಿ.ಎನ್. ಸಿಂಗ್ ರನ್ನು ಕಾಂಗ್ರೆಸ್ನ ಸ್ಟಾರ್ ಪ್ರಚಾರಕನೆಂದು ಘೋಷಿಸಿದ ಮರು ದಿನವೇ ಅವರು ಬಿಜೆಪಿ ಪಾಳಯಕ್ಕೆ ಜಿಗಿದು ಬಿಟ್ಟರು. ಮತ್ತೊಂದೆಡೆ ಕಾಂಗ್ರೆಸ್ ಸ್ಟಾರ್ ಪ್ರಚಾರಕ ಚಿತ್ರ ನಟ ರಾಜ್ ಬಬ್ಬರ್ ಕೂಡಾ ಸಮಾಜವಾದಿ ಪಕ್ಷಕ್ಕೆ ಸೇರುತ್ತಿದ್ದಾರೆ. ಮುಲಾಯಮ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಪಾಳಯಕ್ಕೆ ಜಿಗಿದರು. ಹೀಗೆ ಚುನಾವಣೆ ಆಸನ್ನವಾದ ಕೂಡಲೇ ಎಂದಿ ನಂತೆ ಪಕ್ಷಾಂತರ ಪರ್ವ ನಡೆಯಿತು. ಚುನಾವಣೆ ಮುಗಿದ ಬಳಿಕವೂ ತ್ರಿಶಂಕು ರೀತಿಯ ಫಲಿ ತಾಂಶ ಬಂದ ಕೂಡಲೇ ಕುದುರೆ ವ್ಯಾಪಾರವೂ ಶತಸಿದ್ದ. ಶಾಸಕರ ಖರೀದಿ ರೆಸಾರ್ಟ್ ರಾಜಕೀಯ ಮಾಮೂಲಿಯಾಗಿದೆ. ಅಂದರೆ ಪ್ರಸಕ್ತ ರಾಜಕಾರಣಿಗಳ ಪ್ರಾಮಾಣಿಕತೆ ಎಷ್ಟಿದೆಯೆಂಬುದನ್ನು ಅರ್ಥೈಸಬಹುದು. ಮತದಾರ ಯಾರನ್ನೇ ಚುನಾಯಿಸಲಿ ಯಾರೂ ನಂಬಿಕೆಗೆ ಅರ್ಹರಲ್ಲ ಎಂಬ ಕಳವಳಕಾರಿಯಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಸರಕಾರ ಎಂತಹ ಕಳಪೆ ಕರಾಳ ಆಡಳಿತ ನೀಡಿತ್ತು ಎಂಬುದು ಇಲ್ಲಿನ ಪ್ರಜ್ಞಾ ವಂತರಿಗೆ ಮನವರಿಕೆಯಾಗಿದೆ. ಆದರೂ ನಾವು ಜನರ ಭರವಸೆ ಈಡೇರಿಸಿದ್ದೇವೆ ಎನ್ನುತ್ತಾ ಬಿಜೆಪಿ ಮತ ಯಾಚಿಸುತ್ತಿದೆ. ಇಲ್ಲಿ ನಡೆದ ಅತ್ಯಾಚಾರಗಳಿಗೆ ಮಿತಿಯುಂಟೇ? ಸರಕಾರದ ವೈಫಲ್ಯವನ್ನು ನಮ್ಮ ಮಾಧ್ಯಮಗಳು ಮರೆ ಮಾಚುತ್ತಿವೆ. ಬಡತನ, ನಿರುದ್ಯೋಗ, ಕೋಮು ವೈಷಮ್ಯ ಮುಂತಾದ ಸಮಸ್ಯೆಗಳಿಂದ ಜನರು ಕಂಗಾಲಾಗಿ ಹೋಗಿದ್ದಾರೆ. ಆದರೂ ಪುನಃ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಪಹಪಿಸು ತ್ತಿದೆ. ಆದರೆ ಅವರಲ್ಲಿ ಹೇಳಿಕೊಳ್ಳುವ ಸಾಧನೆ ಏನಿದೆ ಹೇಳಿ? ಬ್ರಾಹ್ಮಣ ಶಾಹಿತ್ವದ ಆಡಳಿತ ದಿಂದ ರೋಸಿ ಹೋದ ಹಿಂದುಳಿದ ವರ್ಗಗಳ ಶಾಸಕರು ಮಂತ್ರಿಗಳು ಪಕ್ಷ ಬಿಟ್ಟು ಹೊರ ನಡೆಯುತ್ತಿರುವುದು ಬಿಜೆಪಿಗೆ ಕಳವಳವುಂಟು ಮಾಡಿದೆ. ರಾಜ್ಯದಲ್ಲಿ ಶೇಕಡಾ 44ರಷ್ಟು ಜನ ಸಂಖ್ಯೆ ಹಿಂದುಳಿದ ವರ್ಗಗಳದ್ದಾದರೂ ಬ್ರಾಹ್ಮಣ ಶಾಹಿತ್ವವೇ ಅಲ್ಲಿ ಮೇರೆ ಮೀರಿತ್ತು. ಉದ್ಯೋಗ ರಂಗ, ಪೊಲೀಸು ಠಾಣೆಗಳಲ್ಲಿ ಹೀಗೆ ಎಲ್ಲಾ ರಂಗಗಳಲ್ಲಿಯೂ ಮೇಲ್ಜಾತಿಯವರದ್ದೇ ಪ್ರಭಾವ ವಿತ್ತು. ಕೆಳವರ್ಗದವರನ್ನು ಕಡೆಗಣಿಸಲಾಗಿತ್ತು. ಮತ್ತೆ ಮತದಾರರ ಕಣ್ಣಿಗೆ ಮಣ್ಣೆರಚುವುದರಲ್ಲಿದ್ದಾರೆ.
ಜನರ ಭಾವನೆ ಕೆರಳಿಸಿ ಕೋಮುಧ್ರುವೀ ಕರಣವನ್ನೇ ಅದು ಆಯುಧವನ್ನಾಗಿ ಬಳಸಿ ಕೊಳ್ಳುತ್ತಿದೆ. ಈ ಬಾರಿಯ ಚುನಾವಣೆಯು ಎಂಬತ್ತು ಶೇಕಡಾ ಜನರು ಮತ್ತು ಇಪ್ಪತ್ತು ಶೇಕಡಾ ಜನರ ನಡುವಿನ ಸ್ಪರ್ಧೆಯಾಗಿದೆ ಎಂದು ಅದು ಪ್ರಚಾರ ರಂಗಕ್ಕಿಳಿದಿದೆ, ಉತ್ತರ ಪ್ರದೇಶದಲ್ಲಿ ಶೇಕಡಾ ಇಪ್ಪತ್ತರಷ್ಟು ಮುಸ್ಲಿಮ್ ಜನಸಂಖ್ಯೆ ಇದೆ ಎಂಬುದು ಗಮನಾರ್ಹ. ಹಿಂದೂ-ಮುಸ್ಲಿಮರ ನಡುವಿನ ಚುನಾವಣಾ ಸ್ಪರ್ಧೆಯಾಗಿದೆಯೆಂದು ಯೋಗಿ ಆದಿತ್ಯನಾಥ್ ಬಿಂಬಿಸಲು ಹೊರಟಿದ್ದಾರೆ. ಮೊದಲ ಹಂತದ ಮತದಾನ ನಡೆಯುವ ಕೇಂದ್ರಗಳಲ್ಲಿ ಜಾಟ್ ಸಮುದಾಯದ ಮತವು ನಿರ್ಣಾಯಕವಾಗಿದೆ. 2013ರಲ್ಲಿ ಮುಝಫರ್ ನಗರದಲ್ಲಿ ಮುಸ್ಲಿಮ್ ಮತ್ತು ಜಾಟ್ ಸಮುದಾಯದ ನಡುವೆ ಗಲಭೆ ಎಬ್ಬಿಸಿ ಬಿಜೆಪಿ ಭಾರೀ ಲಾಭಗಿಟ್ಟಿಸಿ ಕೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಲೇಬೇಕು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿಯ ಆಡಳಿತವನ್ನು ಜಾಟ್ ಸಮುದಾಯ ಗಮನಿಸಿದೆ. ರೈತರ ಚಳುವಳಿ ಮುಂಚೂಣಿಯಲ್ಲಿದ್ದ ಜಾಟ್ ನಾಯಕರು ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಒಂದು ವರುಷಗಳ ಕಾಲ ನಡೆದ ಚಳವಳಿಯಿಂದ ಜಾಟ್ ಸಮುದಾಯ ಸಾಕಷ್ಟು ಪಾಠ ಕಲಿತಿದೆಯೇ ಎಂಬುದನ್ನು ಈ ಚುನಾವಣೆಯ ಫಲಿತಾಂಶ ಬಹಿರಂಗ ಗೊಳಿಸಲಿದೆ. ಈ ಚುನಾವಣೆಯನ್ನು ಭಯಪಟ್ಟು ಕೇಂದ್ರ ಸರಕಾರ ಕೃಷಿ ಕಾಯ್ದೆಯಿಂದ ಹಿಂದೆ ಸರಿಯಿತು ಎಂಬುದು ರಹಸ್ಯವಾಗಿ ಉಳಿದಿಲ್ಲ.
ರಾಷ್ಟ್ರೀಯ ಲೋಕದಳವನ್ನು ಮೈತ್ರಿಗೆ ಸೆಳೆದು ಕೊಳ್ಳಲು ಬಿಜೆಪಿ ವಿಫಲವಾಗಿತ್ತು. ರೈತ ಚಳುವಳಿಯಲ್ಲಿ ಬಲಿಯಾದ 700 ರೈತರ ಕುಟುಂಬದ ಜೊತೆ ನೀವು ಬಿಜೆಪಿಯನ್ನು ಬೆಂಬಲಿಸುತ್ತೀರಾ ಎಂದು ಕೇಳಿ ನೋಡಿ ಎನ್ನುತ್ತಾ ಬಿಜೆಪಿಗೆ ಆರ್.ಎಲ್.ಡಿ. ಅಧ್ಯಕ್ಷ ಜಯಂತ್ ಚೌಧುರಿಯವರು ಟಾಂಗ್ ನೀಡಿದ್ದು ಗಮನಾರ್ಹ. ಇಷ್ಟೆಲ್ಲಾ ನಡೆಯುತ್ತಿರುವಂತೆ ಹತಾಶರಾದ ಯೋಗಿ ಪಾಕಿಸ್ತಾನವನ್ನು ಎಳೆದು ತಂದು ಅಖಿಲೇಶ್ ಯಾದವ್ ಜಿನ್ನಾರ ಆರಾಧಕ ಎಂಬ ದಾಳ ಉರುಳಿಸಿದ್ದಾರೆ. ಮುಝಫ್ಫರ್ ನಗರಕ್ಕೆ ಅಖಿಲೇಶ್ ತೆರಳುವ ಹೆಲಿಕಾಪ್ಟರ್ಗೆ ಅನುಮತಿ ನಿರಾಕರಿಸಿದವರು ಬಿಜೆಪಿ ನಾಯಕರೊಬ್ಬರ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿಸಲಾಯಿತು ಎಂದು ಅಖಿಲೇಶ್ ಆರೋಪಿಸಿದ್ದನ್ನು ಸ್ಮರಿಸಲೇಬೇಕು.
ಶಾಲಾ ಗಣರಾಜ್ಯೋತ್ಸವ ದಿನ ದಂದು ಉತ್ತರ ಪ್ರದೇಶದ ಸೊಹ್ರಾತ್ಗಡದಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳು ರಾಷ್ಟ್ರಗೀತೆ ಹಾಡಿದ ಬಳಿಕ ಮೋದಿ ಮತ್ತು ಯೋಗಿಗೆ ಜಯಕಾರದ ಘೋಷಣೆಗಳನ್ನು ಹಾಕಿದ ವೀಡಿಯೋ ವೈರಲ್ ಆಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಿದ ನಂತರ ಯೋಗಿ ಮತ್ತು ಮೋದಿಗೆ ಜಯಕಾರ ಹಾಕಲು ಶಿಕ್ಷಕರು ಸೂಚಿಸಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ. ಹೀಗೇ ಅಡ್ಡ ದಾರಿಯಿಂದ ಯೋಗಿ ಅಧಿಕಾರ ಹಿಡಿಯಲು ಹೆಣಗಾಡುತ್ತಿದ್ದಾರೆ.
ಆದರೂ ಬಿಜೆಪಿ ಅಭ್ಯರ್ಥಿಗಳು ಮತ್ತು ಮುಖಂಡರ ವಿರುದ್ಧದ ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಝಾಫರ್ ನಗರದ ಕರೌಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಕ್ರಮ ಸೈನಿಯವರು ಮತ ಯಾಚಿಸಲು ಬಂದಾಗ ಗ್ರಾಮಸ್ಥರು ಅವರ ವಿರುದ್ಧ ಘೋಷಣೆ ಕೂಗಿ ಹಿಂದೆ ಕಳಿಸಿದ್ದರು. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಿಗೂ ಈ ಅನುಭವವಾಗಿದೆ. ಹಾಥರಸ್ ಘಟನೆಯಿಂದ ಕೆರಳಿದ್ದ ಯುವ ಸಮೂಹವು ಆಕ್ರೋಶ ವ್ಯಕ್ತಪಡಿಸಿತ್ತು. ಸಿವಾಲ್ವಾಸ್ ಕ್ಷೇತ್ರದ ಅಭ್ಯರ್ಥಿ ಮನೀಂದರ್ ಪಾಲ್ ಸಿಂಗ್ ಅವರು ಮನೆ ಮನೆ ಪ್ರಚಾರಕ್ಕೆ ತೆರಳಿದ್ದಾಗ ಜನರು ಅವರನ್ನು ಓಡಿಸಿದ್ದರು. ಅವರ ವಾಹನದ ಗಾಜುಗಳನ್ನು ಪುಡಿಗೈದಿದ್ದರು. ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯರಿಗೆ ಅವರದ್ದೇ ಆದ ಕ್ಷೇತ್ರದಲ್ಲಿ ಈ ಅನುಭವವಾಗಿತ್ತು. ಇಂತಹದ್ದೇ ಹತ್ತು ಹಲವಾರು ಘಟ ನೆಗಳು ಉತ್ತರ ಪ್ರದೇಶದಲ್ಲಿ ವರದಿಯಾಗುತ್ತಿದೆ. ಆಡಳಿತ ವಿರೋಧಿ ಅಲೆಗಳು ಬಿಜೆಪಿಗೆ ಮಾರಕವಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ. ಆಡಳಿತ ಉಳಿಸಿ ಕೊಳ್ಳಲು ಬಿಜೆಪಿ ಇನ್ನೂ ಕಸರತ್ತುಗಳನ್ನು ಮಾಡುತ್ತಲೇ ಇದೆ. ಅವು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡೋಣ.












