“ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯೋಣ”: ಜಮಾಅತೆ ಇಸ್ಲಾಮಿ ಹಿಂದ್ ಬೀದರ ವತಿಯಿಂದ ವಿಚಾರ ಗೋಷ್ಠಿ

0
453

ಸನ್ಮಾರ್ಗ ವಾರ್ತೆ

ದಿನಾಂಕ: ಬೀದರನ ಡಾ. ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬೀದರ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ “ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯೋಣ” ಸೀರತ್ ಅಭಿಯಾನದ ಪ್ರಯುಕ್ತ ರವಿವಾರ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಹಮ್ಮದ್ ಕುಂಞಿಯವರು, ಪ್ರವಾದಿ ಮುಹಮ್ಮದ್ ಅತೀ ಹೆಚ್ಚು ಸಂಕಷ್ಟ ಎದುರಿಸಿದ ಹಾಗೂ ಅಷ್ಟೇ ಅತ್ಯಂತ ಸಂತೃಪ್ತಿ ಜೀವನ ಸಾಧಿಸಿದ ಪ್ರವಾದಿಯಾಗಿದ್ದಾರೆ ಎಂದರು. ಜನರು ತನಗಿಂತ ಕೆಳಗಿನವರ ಜೀವನ ನೋಡಿ, ಜೀವನ ಸಾಗಿಸಿದ್ದೇ ಆದರೆ ಸಂತೃಪ್ತಿಯ ಜೀವನ ಸಾಗಿಸುವನು ಎಂದು ಪ್ರವಾದಿ ವಚನವನ್ನು ವಿವರಿಸಿದರು.

ಪ್ರಭು ಮಾನವನ ಮೂಲಭೂತ ಬೇಡಿಕೆ, ಅದನ್ನು ಈಡೇರಿಸಬೇಕಾದರೆ ಮಾನವ ಪ್ರಭುವಿನ ಪರಿಚಯ ಮಾಡಿಕೊಳ್ಳಬೇಕು. ಈ ಮೂಲಭೂತ ಬೇಡಿಕೆಯನ್ನು ಪ್ರವಾದಿಯವರು ಈಡೇರಿಸಿದ್ದಾರೆ. ಪ್ರಭುವಿನ ಸ್ಪಷ್ಟ ಪರಿಚಯ ಮಾನವನಿಗೆ ಮಾಡಿಸಿದ್ದಾನೆ. ನಾವು ನ್ಯಾಯದ ಪರ ನಿಲ್ಲಬೇಕು, ಅದು ನಮ್ಮ ಕುಟುಂಬದ ಸದಸ್ಯರ ವಿರುದ್ಧವೇ ಆಗಿದ್ದರೂ ಸರಿ ಎಂದು ಹೇಳಿ ನ್ಯಾಯದ ಪರ ನಿಲ್ಲಲು ಜನರಿಗೆ ಕರೆ ನೀಡಿದರು. ಪ್ರವಾದಿಯವರು ಕೋಮುವಾದಿ ನನ್ನ ಸಮುದಾಯದವನಲ್ಲ ಎಂದು ಹೇಳಿ, ಕೋಮುವಾದಿಯನ್ನು ಹಳಿದಿದ್ದಾರೆ. ಪ್ರವಾದಿಯವರ ಸಂಗಾತಿ ಒಬ್ಬನು ತನ್ನ ಸಮುದಾಯವನ್ನು ಪ್ರೀತಿಸುವುದು ಕೋಮುವಾದವೇ ಎಂದು ಪ್ರಶ್ನಿಸಿದಾಗ ಅಲ್ಲ ಎಂದರು ಪ್ರವಾದಿ. ಒಂದು ಸಮುದಾಯ ಅಕ್ರಮ, ಅನ್ಯಾಯ, ದಬ್ಬಾಳಿಕೆ ಮಾಡುತ್ತಿರುವಾಗ ಅದರ ಪರವಾಗಿ ನಿಲ್ಲುವವನು ಕೋಮುವಾದಿ ಎಂದು ಪ್ರವಾದಿ ಹೇಳಿದ್ದಾರೆ ಎಂದು ಕೋಮುವಾದದ ನಿಜ ಅರ್ಥ ತಿಳಿಸಿದರು.

ವೈವಿಧ್ಯತೆ ನಿಸರ್ಗದ ಸೊಬಗು, ಮನುಷ್ಯನ ಬೆರಳಿನ ಗುರುತು ಮತ್ತು ಕಣ್ಣುಗಳು ಒಬ್ಬರನ್ನೊಬ್ಬರ ಹೋಲಿಕೆಯಾಗುವುದಿಲ್ಲ. ವೈವಿಧ್ಯತೆ ಅನಿವಾರ್ಯ ಅದನ್ನು ಗೌರವಿಸಬೇಕೆಂದು ಹೇಳಿದರು. ಉದಾರವಾದಿ ಎಂದರೆ, ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದಾಗಿದೆ ಎಂದರು. ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೇವು ಎಂಬ ಕುರ್‌ಆನ್ ವಾಕ್ಯವನ್ನು ಉಚ್ಛರಿಸುತ್ತಾ, ಮಾನವ ಗೌರವಾನ್ವಿತನಾಗಿದ್ದಾನೆ, ಅವನನ್ನು ಪ್ರೀತಿಸುವುದಷ್ಟೇ ಅಲ್ಲ, ಅವನಿಗೆ ಮರ್ಯಾದೆ, ಗೌರವ ಕೊಡಬೇಕೆಂದು ಹೇಳಿದರು. ಒಬ್ಬ ವ್ಯಕ್ತಿಯ ಕುರಿತು ತಪ್ಪಾಭಿಪ್ರಾಯ ಹೊಂದುವುದು ಅಪರಾಧವಾಗಿದೆ. ಧರ್ಮ ಮನುಷ್ಯತ್ವದ ಪಾಠ ನೀಡುತ್ತದೆ. ಸಿಟ್ಟು ಧರ್ಮದ ಲಕ್ಷಣವಲ್ಲ, ನಗುವ, ಪ್ರೀತಿಯ ಗುಣ ಧರ್ಮಕ್ಕಿದೆ ಎಂದು ಹೇಳಿ, ಸಿಟ್ಟಿನಿಂದ ದೂರವಿರಲು ತಿಳಿಸಿದರು. ಜನರನ್ನು ನೋಡಿ ಮುಗುಳ್ನಗೆ ನಗುವುದು, ದಾನವಾಗಿದೆ ಎಂದು ಪ್ರವಾದಿಯವರು ಹೇಳಿ, ಜನರ ಜೊತೆ ಪ್ರೀತಿಯಿಂದ ವರ್ತಿಸಬೇಕೆಂದು ಹೇಳಿದರು.

ನಿಮ್ಮ ದೇಹದಲ್ಲಿ ಮಾಂಸದ ತುಂಡೊಂದು ಇದೆ, ಅದು ಒಳ್ಳೆಯದಾದರೆ ಇಡೀ ಶರೀರವೇ ಒಳ್ಳೆಯದಾಗಿರುತ್ತದೆ. ಅದು ಕೆಟ್ಟರೆ ಇಡೀ ಶರೀರವೇ ಕೆಟ್ಟು ಹೋಗುವುದು. ಅದುವೇ ಹೃದಯ ಎಂದು ಪ್ರವಾದಿ ವಚನ ಹೇಳಿ, ಆತ್ಮ, ಸಂಸ್ಕರಣೆ ಮಾಡಿಕೊಂಡು, ಉತ್ತಮವಾಗಿ ವರ್ತಿಸಬೇಕೆಂದು ಹೇಳಿದರು. ದೇವ ಇಷ್ಟಪಡುವ ವ್ಯಕ್ತಿ ಯಾರು ಎಂದು ಒಬ್ಬ ವ್ಯಕ್ತಿ ಪ್ರವಾದಿಯವರನ್ನು ಪ್ರಶ್ನಿಸಿದಾಗ ಜನರಿಗೆ ಹೆಚ್ಚು ಉಪಕಾರ ಮಾಡುವವನು ಎಂದು ಹೇಳಿದ್ದನ್ನು ನೆನಪಿಸುತ್ತಾ, ಜನರಿಗೆ ಉಪಕಾರ ಮಾಡುವವರಾಗಬೇಕೆಂದು ಜನರಿಗೆ ಕರೆ ನೀಡಿದರು. ಆಧ್ಯಾತ್ಮಿಕತೆ ಇತರರನ್ನು ದ್ವೇಷಿಸುವುದನ್ನು ಕಲಿಸುವುದಿಲ್ಲ, ಪರಸ್ಪರ ಕರುಣೆ ತೋರುವುದು ಧರ್ಮವಾಗಿದೆ ಎಂದರು. ನಮ್ಮ ಅರ್ಹತೆ ಪರೀಕ್ಷಿಸಲು ನಾವು ದೇವನೊಡನೆ ದೇವಾ ನನ್ನ ಮಕ್ಕಳಿಗೆ ನನ್ನ ಬುದ್ಧಿವಂತಿಕೆ ಕೊಡು ಎಂದು ಪ್ರಾರ್ಥಿಸಬೇಕು ಎಂದು ಹೇಳಿ, ತಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಕರೆ ನೀಡಿದರು. ಮಾನವ ಮಾನವನ ಶತ್ರು ಅಲ್ಲ, ಪಿಶಾಚಿ ಮಾನವರ ಶತ್ರು ಎಂದು ಹೇಳಿ, ಮಾನವ ಏಕತೆಯ ಸಂದೇಶ ನೀಡಿದರು.

ಸದ್ಭಾವನಾ ಮಂಚ್‌ನ ಅಧ್ಯಕ್ಷರಾದ ಗುರುನಾಥ ಗಡ್ಡೆ ತಮ್ಮ ವಿಚಾರ ಮಂಡನೆಯನ್ನು ಮಾಡುತ್ತಾ, ಪ್ರವಾದಿ ಮುಹಮ್ಮದರು ಒಬ್ಬ ಮಹಾನ ದಾರ್ಶನಿಕ ಹಾಗೂ ಮಹಾನ್ ಸಮಾಜ ಸುಧಾರಕ ಎಂದು ಬಣ್ಣಿಸಿದರು. ಏಕ ದೇವೋಪಾಸನೆ ಏಕ ಮಾನವ ಕುಲ, ಸಮಾನತೆ, ಧಾರ್ಮಿಕ ಸೌಹಾರ್ದತೆ, ಮಹಿಳೆಯರಿಗೆ ಎಲ್ಲಾ ತರಹದ ಬಂಧನದಿಂದ ಮುಕ್ತಿ ಇವು ಮುಹಮ್ಮದರು ಸಮಾಜಕ್ಕೆ ನೀಡಿದ ಕೊಡುಗೆಗಳು ಎಂದು ಸ್ಮರಿಸಿಸಿದರು. ಸಂಜೀವಕುಮಾರ ಅತಿವಾಳೆ ಹಾಗೂ ವಿಠಲದಾಸ ಪ್ಯಾಗೆ ತಮ್ಮ ವಿಚಾರಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಬೀದರ ಶಾಸಕ ಶ್ರೀ ರಹೀಂ ಖಾನ್ ತಮ್ಮ ಅಮೃತಹಸ್ತದಿಂದ ಶಾಂತಿ ಪ್ರಕಾಶನ ಹೊಸದಾಗಿ ಮುದ್ರಿಸಿದ ಪುಸ್ತಕ “ಪ್ರವಾದಿ ಮುಹಮ್ಮದ್ (ಸ)ರ ಸಮಗ್ರ ವ್ಯಕ್ತಿತ್ವ” ಹಾಗೂ ಶ್ರೀಮತಿ ಶಿವಕಾಂತಾ ಚತುರೆ “ಪ್ರವಾದಿ ಮುಹಮ್ಮದ್ (ಸ)ರ ವಿವಾಹಗಳು ಮತ್ತು ವಿಮರ್ಶೆಗಳು” ಎನ್ನುವ ಪುಸ್ತಕ ಬಿಡುಗಡೆ ಮಾಡಿದರು.

ವಿಚಾರ ಗೋಷ್ಠಿಯ ಉದ್ಘಾಟನೆ ಮುಹಮ್ಮದ್ ಸನಾವುಲ್ಲಾ ಪವಿತ್ರ ಕುರ್‌ಆನ್ ಪಠಣದ ಮೂಲಕ ಮಾಡಿದರು. ಅದರ ಕನ್ನಡ ಅನುವಾದ ರಫೀಕ ಅಹ್ಮದ ಓದಿದರು, ಮುಹಮ್ಮದ್ ನಿಝಾಮುದ್ದೀನ್ ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಭಾಷಣ ಮಾಡಿದರು. ವೇದಿಕೆಯ ಮೇಲೆ ಡಾ. ಅಬ್ದುಲ ಖದೀರ್, ಶ್ರೀ ಬಿ.ಜಿ. ಶೆಟಕಾರ, ಫಾದರ ವಿಲ್ಸನ್ ಫರ್ನಾಂಡಿಸ್, ಮೌಲಾನಾ ಅಬ್ದುಲ ವಹಿದ ಕಾಸ್ಮಿ, ಜೋಹರ್ ಕಾಸಿಫ್, ಶಿವರಾಜ ಪಾಟೀಲ, ಮನ್ಸೂರ ಖಾದ್ರಿ, ಮೌಲಾನಾ ನಜ್‌ಮುದ್ದೀನ್ ಉಮ್ರಿ, ಮೌಲಾನಾ ಮುಹಮ್ಮದ ಅಯ್ಯುಬ್ ಸಲೀಂ, ಮುಹಮ್ಮದ ಆಸೀಫುದ್ದಿನ್, ಮುಹಮ್ಮದ ಅಕ್ರಮ್ ಅಲಿ, ಶ್ರೀಮತಿ ತೌಹೀದ್ ಸಿಂಧೆ, ಶ್ರೀಮತಿ ನಸಿಮುನ್ನಿಸಾ, ಡಾ. ಹರಮೈನ್ ಷರ್‌ಫೈನ್, ಶ್ರೀ ಶೇಷರಾವ ಎಸ್. ಬೆಳಕುಣಿಕರ್, ಶ್ರೀ ಜಿ.ಎಂ. ಕುದರೆ, ಮುಬಶ್ಶಿರ ಸಿಂಧೆ, ಡಾ. ಸಿ. ಆನಂದರಾವ, ಮೌಲಾನಾ ಮುಹಮ್ಮದ್ ಮೋನಿಸ್ ಕಿರ್ಮಾನಿ, ಶೇಕ್ ಮುಜೀಬರ‍್ರಹಮಾನ ಕಾಸ್ಮೀ, ಇಂಜಿನೀಯರ್ ಸೈಯ್ಯದ್ ಅಬ್ದುಲ್ ಸತ್ತಾರ ಮುಂತಾದವರು ಇದ್ದರು.