ಸನ್ಮಾರ್ಗ ವಾರ್ತೆ
ಅರೇಹಳ್ಳಿ: “ಪ್ರವಾದಿ ಮುಹಮ್ಮದ್(ಸ) ರನ್ನು ಅರಿಯೋಣ” ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಅರೇಹಳ್ಳಿಯ ವತಿಯಿಂದ ಹಿರಾ ಸೆಂಟರಿನಲ್ಲಿ ಸೀರತ್ ಪ್ರವಚನ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಪ್ರವಚನಕಾರರಾಗಿ ಜ|ಇಸ್ಹಾಕ್ ಪುತ್ತೂರು(ಚಾರ್ಟರ್ಡ್ ಅಕೌಂಟಂಟ್ ಹಾಗೂ ಹಿರಾ ಮೀಡಿಯಾ ಅಧ್ಯಕ್ಷರು) ಆಗಮಿಸಿದ್ದರು ಗೌರವ ಅತಿಥಿಗಳಾಗಿ ಸಿ.ಎಸ್.ಸುರೇಶ್ (ಆರಕ್ಷಕ ಉಪನಿರೀಕ್ಷಕರು ಪೋಲೀಸ್ ಠಾಣೆ ಅರೇಹಳ್ಳಿ), ಮುಹಮದ್ ನದೀಮ್ ಇಕ್ವಾಲ್(ಅಧ್ಯಕ್ಷರು ರೋಟರಿ ಕ್ಲಬ್ ಅರೇಹಳ್ಳಿ), ಯು.ಎಮ್, ತೇಜ್ ಪಾಲ್ (ಅಧ್ಯಕ್ಷರು ವೀರಶೈವ ಸಂಘ, ಅರೇಹಳ್ಳಿ ಹೋಬಳಿ), ಮಂಜುನಾಥ್ ಶೆಟ್ಟಿ (ಅಧ್ಯಕ್ಷರು ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ), ರಾಜೇಶ್ (ಸಂಚಾಲಕರು, ಆದರ್ಶ ಗ್ರಾಮ ಸಮಿತಿ ಅರೇಹಳ್ಳಿ), ಚಾಮರಾಜ್ (ಅಧ್ಯಕ್ಷರು ಲಯನ್ಸ್ ಕ್ಲಬ್ ಅರೇಹಳ್ಳಿ) ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಅರೇಹಳ್ಳಿಯ ಸ್ಥಾನೀಯ ಅಧ್ಯಕ್ಷರಾದ ಮುಜೀಬುರ್ರಹ್ಮಾನ್ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮಖ್ಯ ಪ್ರವಚನಕಾರರು ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ “ಪ್ರವಾದಿ ಮುಹಮ್ಮದ್(ಸ)ರ ಸಂದೇಶಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲೆಡೆ
ಪ್ರಚಾರ ಪಡಿಸಬೇಕಾದ ಅನಿವಾರ್ಯತೆಯಿದೆ. ಮಾನವ ಕಲ್ಯಾಣದ ಸಂದೇಶಗಳನ್ನು ಒಳಗೊಂಡ ಅವರ ಚಿಂತನೆ ಹಾಗೂ ತತ್ವಾದರ್ಶಗಳಿಗೆ ಯಾವುದೇ ಗಡಿ ಅಥವಾ ಕಟ್ಟುಪಾಡುಗಳಿರಲಿಲ್ಲವಾದ್ದರಿಂದ ವಿಶ್ವದ ಮೂಲೆ ಮೂಲೆಗೂ ಅವರ ವಿಚಾರಧಾರೆಗಳು ಹರಿದವು. ಆದರೆ ವಿಪರ್ಯಾಸವೆಂದರೆ ಪ್ರವಾದಿಗಳ ಕುರಿತು ವಿಕೃತವಾದ ಸುದ್ದಿಯನ್ನು ಪ್ರಚಾರ ಮಾಡಲು ಕೆಲವರ್ಗಗಳು ಪ್ರಯತ್ನ ಮಾಡುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು. “ಮೈಕಲ್ ಹಾರ್ಟ್ ಎಂಬ ಸಾಹಿತಿ ಬಿಡುಗಡೆ ಮಾಡಿದ ಕೃತಿಯಲ್ಲಿ ವಿಶ್ವದ ನೂರು ಮಹಾನ್ ಪ್ರಭಾವ ಶಾಲಿ ವ್ಯಕ್ತಿಗಳ ಸಾಲಿನಲ್ಲಿ ಪ್ರವಾದಿ ಮುಹಮ್ಮದರ(ಸ) ಮೊದಲ ಸ್ಥಾನ ಪಡೆದಿರುವುದು ಅವರು ಸಮಾಜಕ್ಕೆ ಸಲ್ಲಿಸಿದ ನಿಷ್ಪಕ್ಷಪಾತ ಸೇವೆಗೆ ಹಿಡಿದ ಕೈಗನ್ನಡಿ” ಎಂದರು. ಗೌರವ ಅತಿಥಿಗಳೂ ಕೂಡ ಸೀರತ್ ಅಭಿಯಾನದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರವಾದಿ ಮುಹಮ್ಮದ(ಸ)ರ ಕುರಿತು ಶಾಂತಿ ಪ್ರಕಾಶನ ಪ್ರಕಟಿಸಿರುವ “ಪ್ರವಾದಿ ಮುಹಮ್ಮದ್(ಸ) ಸಮಗ್ರ ವ್ಯಕ್ತಿತ್ವ” ಮತ್ತು “ಪ್ರವಾದಿ ಮುಹಮ್ಮದ್(ಸ) ವಿವಾಹಗಳು ಮತ್ತು ವಿಮರ್ಶೆಗಳು” ಎಂಬೆರಡು ಪುಸ್ತಕಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಬಿಡುಗಡೆಗೊಳಿಸಿಲಾಯಿತು.
















