ಉತ್ತರ ಪ್ರದೇಶ: ದೇಗುಲ ಸ್ಥಳಾಂತರಿಸಲು ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ

0
285

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹನುಮಾನ್ ಮಂದಿರದ ಭವ್ಯ ವಿಸ್ತರಣೆಗೆ ಭೂಮಿಯನ್ನು ದಾನ ಮಾಡಿದ್ದಾರೆ. ಶಹಜಹಾನ್‌ಪುರದ ತಿಲ್ಹಾರ್ ಪಟ್ಟಣದ ಕಚ್ಚಿಯಾನಿ ಖೇಡದಲ್ಲಿರುವ ಹನುಮಾನ್ ದೇವಸ್ಥಾನವನ್ನು ರಸ್ತೆ ಅಗಲೀಕರಣದ ಕಾರಣ ಸ್ಥಳಾಂತರಿಸಬೇಕಿತ್ತು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ದೇಗುಲವನ್ನು ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು. ಹಾಗಾಗಿ ದೇಗುಲ ಸ್ಥಳಾಂತರಿಸಲು ಬಾಬು ಅಲಿ ಎಂಬುವವರು ತಮ್ಮ ಜಮೀನಿನ ಒಂದು ಭಾಗವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ದೆಹಲಿ ಲಕ್ನೋ ನಡುವೆ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗೆ ಕಚ್ಚಿಯಾನಿ ಖೇಡಾ ಗ್ರಾಮದಲ್ಲಿ ದೇಗುಲ ಇರುವುದರಿಂದ ಅಡಚಣೆ ಎದುರಾಗಿತ್ತು. ಇದನ್ನು ಮನಗಂಡ ಬಾಬು ಅಲಿಯವರು ಸ್ವತಃ ಮುಂದೆ ಬಂದು ತಮ್ಮ ಸ್ವಂತ ಭೂಮಿಯಲ್ಲಿ ಒಂದು ಬಿಘಾ (17,000 ಚದರ ಅಡಿ) ದಾನ ಮಾಡಿದ್ದು, ಭೂ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ. ಇದರಿಂದಾಗಿ ದೇಗುಲವನ್ನು ಅಲ್ಲಿಗೆ ಸ್ಥಳಾಂತರಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಮಸೇವಕ್ ದ್ವಿವೇದಿ ಹೇಳಿದ್ದಾರೆ.

“ಉತ್ತರ ಪ್ರದೇಶದ ಗಂಗಾ-ಜಮುನಿ ಸಂಸ್ಕೃತಿ ಮತ್ತು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಮತ್ತಷ್ಟು ಬಲಪಡಿಸಲು ಈ ಕಾರ್ಯ ಪ್ರೇರಣೆಯಾಗಲಿ” ಎಂದು ಭೂ ದಾನಗೈದ ಬಾಬು ಅಲಿ ಹೇಳಿದ್ದಾರೆ.