ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಧನಂಜಯ ಯಶವಂತ್ ಚಂದ್ರಚೂಡ್ ರವರು ಅಧಿಕಾರ ವಹಿಸಿಕೊಂಡರು. ಬಧವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.
ಯು.ಯು. ಲಲಿತ್ ಅವರ ಉತ್ತರಾಧಿಕಾರಿಯಾಗಲಿರುವ ಹೊಸ ಮುಖ್ಯ ನ್ಯಾಯಮೂರ್ತಿಗಳು ಎರಡು ವರ್ಷಗಳ ಕಾಲ ಸುಪ್ರೀಂ ಕೋರ್ಟ್ನ ಸಿಜೆಐ ಸ್ಥಾನದಲ್ಲಿ ಇರಲಿದ್ದಾರೆ. ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ(1978-1985) ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಯಶವಂತ್ ವಿಷ್ಣು ಚಂದ್ರಚೂಡ್ ಅವರ ಪುತ್ರ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನವೆಂಬರ್ 24, 2024 ರಂದು ನಿವೃತ್ತರಾಗಲಿದ್ದಾರೆ.
1959 ನವೆಂಬರ್ 11ರಂದು ಜನಿಸಿದ ಚಂದ್ರಚೂಡ್ರವರು ಮುಂಬೈಯ ಕಾನ್ವೆಂಟ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ದಿಲ್ಲಿ ಸೆಂಟ್ ಸ್ಟೀಫನ್ಸ್ನಲ್ಲಿ ಕಲಿತರು. ಆನಂತರ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದರು. ಅಮೆರಿಕದ ಹಾರ್ಡ್ ಲಾ ಸ್ಕೂಲಿನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜ್ಯೂಡಿಶಿಯಲ್ ಸಯನ್ಸ್ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
1998ರಲ್ಲಿ ತಮ್ಮ 39ನೆರ ವಯಸ್ಸಿನಲ್ಲಿ ಉನ್ನತ ವಕೀಲರಾದರು. ಎ.ಬಿ ವಾಜಪೇಯಿ ನೇತೃತ್ವದ ಸರಕಾರದ ಕಾಲದಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿದ್ದರು. ವಾಜಪೇಯಿ ಅಧಿಕಾರದಲ್ಲೇ ಬಾಂಬೆ ಹೈಕೋರ್ಟಿನಲ್ಲಿ ಅಡಿಶನಲ್ ಜಡ್ಜ್ ಆದರು. 2000 ಮಾರ್ಚ್ 29ರಂದು ಅಡಿಷನಲ್ ಜಡ್ಜ್ ಆದ ಅವರು 2013 ಅಕ್ಟೋಬರ್ 31ರಂದು ಅಲಾಹಾಬಾದ್ ಹೈಕೋರ್ಟಿನ ಚೀಫ್ ಜಸ್ಟಿಸ್ ಆದರು. 2016 ಮೇ 13ರಿಂದ ಸುಪ್ರೀಂ ಕೋರ್ಟು ಜಡ್ಜ್ ಆಗಿ ಬಡ್ತಿ ಪಡೆದರು.












