ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಪಿಎಚ್‌ಡಿ ವಿದ್ಯಾರ್ಥಿ

0
402

ಸನ್ಮಾರ್ಗ ವಾರ್ತೆ

ಔರಂಗಾಬಾದ್: ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕಾಗಿ ಬೆಂಕಿ ಹಚ್ಚಿಕೊಂಡು ಪಿಎಚ್‌ಡಿ ವಿದ್ಯಾರ್ಥಿಯೊಬ್ಬ ಯುವತಿಯನ್ನು ಅಪ್ಪಿಕೊಂಡು ಕೊಲ್ಲಲು ಯತ್ನಿಸಿದ ಘಟನೆ ಔರಂಗಾಬಾದ್ ಸರ್ಕಾರಿ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ. ಘಟನೆಯಲ್ಲಿ ಬೆಂಕಿ ಹಚ್ಚಿಕೊಂಡ ಪಿಎಚ್‌ಡಿ ವಿದ್ಯಾರ್ಥಿ ಗಜಾನನ ಮುಂಡೆ(30) ಮೃತಪಟ್ಟಿದ್ದು, 55ರಷ್ಟು ಸುಟ್ಟಗಾಯಗಳಾಗಿರುವ 28ರ ಹರೆಯದ ಪೂಜಾ ಸಾಳ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಪ್ರಕಾರ, ಗಜಾನನ ಪೂಜಾಳನ್ನು ಮದುವೆಯಾಗಲು ಬಯಸಿದ್ದನು. ಆದರೆ ಅವಳು ಆತನ ಪ್ರಸ್ತಾಪವನ್ನು ನಿರಾಕರಿಸುತ್ತಿದ್ದಳು. ಸಹಾಯಕ ಪ್ರಾಧ್ಯಾಪಕರನ್ನು ಭೇಟಿಯಾಗಲು ಪೂಜಾ ಕಾಲೇಜಿಗೆ ಬಂದಿದ್ದು, ಪ್ರೊಫೆಸರ್ ಕ್ಯಾಬಿನ್‌ಗೆ ಹೋದಾಗ ಆಕೆಯನ್ನು ಮುಂಡೆ ಹಿಂಬಾಲಿಸಿದ್ದಾನೆ. ಒಳಗಡೆಯಿಂದ ಬಾಗಿಲು ಹಾಕಿ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಪೂಜಾಳನ್ನು ತಬ್ಬಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ಚೀರಾಟ ಕೇಳಿ ಧಾವಿಸಿದ ಕಾಲೇಜು ನೌಕರರು ಬಾಗಿಲು ಒಡೆದು ಬೆಂಕಿ ನಂದಿಸುವ ಯಂತ್ರದ ಸಹಾಯದಿಂದ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಇಬ್ಬರನ್ನೂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು‌. ಆದರೆ, ಸೋಮವಾರ ತಡರಾತ್ರಿ ಮುಂಡೆ ಸಾವನ್ನಪ್ಪಿದ್ದಾನೆ‌. ಸಂತ್ರಸ್ತ ಯುವತಿಗೆ ಶೇ.55ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.