ಖಾಸಗಿ ಬಸ್- ಕಾರಿನ ನಡುವೆ ಭೀಕರ ಅಪಘಾತ: ಸಾಮಾಜಿಕ, ಧಾರ್ಮಿಕ ಮುಂದಾಳು ನೌಶಾದ್ ಹಾಜಿ ಸೂರಲ್ಪಾಡಿ ಸಹಿತ ಇಬ್ಬರು ಸಾವು

0
450

ಸನ್ಮಾರ್ಗ ವಾರ್ತೆ

ಬೆಳ್ತಂಗಡಿ: ಖಾಸಗಿ ಬಸ್ ಹಾಗೂ ಕಾರೊಂದರ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಕುಂಡದಬೆಟ್ಟು ಸಮೀಪದ ರನ್ನಾಡಿಪಲ್ಕೆ ಎಂಬಲ್ಲಿ ಭಾನುವಾರ(ಜ.1) ಬೆಳಗ್ಗೆ ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೃತಪಟ್ಟವರನ್ನು ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಹಾಗೂ ಅವರ ಕಾರು ಚಾಲಕ ಮುಷರಫ್ ಎಂದು ಗುರುತಿಸಲಾಗಿದೆ.

ಕಾರು ಹಾಗೂ ಬಸ್ಸು ಮುಖಾಮುಖಿ ಢಿಕ್ಕಿ ಹೊಡೆದಿದ್ದು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಓವರ್‌ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ‌ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ನೌಶಾದ್ ಹಾಜಿಯವರು ಸೂರಲ್ಪಾಡಿ ನಿವಾಸಿಯಾಗಿದ್ದು, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ನ ನೂತನ ಅಧ್ಯಕ್ಷರಾಗಿದ್ದು, ವಿವಿಧ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಇವರು “ನಂಡೆ ಪೆಂಙಳ್” ಎಂಬ ಅಭಿಯಾನದಲ್ಲಿ ನೂರಾರು ಬಡ ಕುಟುಂಬದ ಯುವತಿಯರ ವಿವಾಹಕ್ಕೆ ಸಹಕಾರಿಯಾಗಿದ್ದರು.

ಅವರ ಕಾರು ಚಾಲಕರಾಗಿದ್ದ ಮುಷರಫ್ ಅವರು ಉಳಾಯಿಬೆಟ್ಟು ನಿವಾಸಿ ಎಂದು ತಿಳಿದುಬಂದಿದೆ.