ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಅಯೋಧ್ಯೆ ವಿವಾದದ ಕುರಿತಂತೆ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಬಲಪಂಥೀಯವಾದಿ ಶಕ್ತಿಗಳಿಗೆ ಜ್ಞಾನವಾಪಿ ಮಸೀದಿ ಸಹಿತ ದೇಶದ ಇತರೆಡೆಗಳಲ್ಲಿರುವ ಮಸೀದಿಗಳ ಮೇಲೆ ಹಕ್ಕು ಸ್ಥಾಪಿಸುವ ಬೇಡಿಕೆ ಮುಂದಿಡಲು ಕಾರಣವಾಗಿದೆ, ಇದು ಪ್ರಜಾಪ್ರಭುತ್ವ ದೇಶವಾಗಿರುವ ಭಾರತಕ್ಕೆ ದೊಡ್ಡ ಅಪಾಯ” ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಹೇಳಿದ್ದಾರೆ.
“ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ಉಳಿಸಿ” ಎಂಬ ವಿಷಯದ ಮೇಲೆ ಅಖಿಲ ಭಾರತ ವಕೀಲರ ಯೂನಿಯನ್, ದಿಲ್ಲಿ ಪತ್ರಕರ್ತರ ಯೂನಿಯನ್ ಮತ್ತು ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಭಾರತದ ಸಂವಿಧಾನ ಖಾತರಿಪಡಿಸುತ್ತದೆ, ಆದರೆ ತೀವ್ರಗಾಮಿ ಶಕ್ತಿಗಳ ಕಾರಣದಿಂದ ಮತ್ತು ಸರಕಾರ ಫ್ಯಾಸಿಸ್ಟ್ ಆಗುತ್ತಿರುವುದರಿಂದ ಈ ಮೌಲ್ಯಗಳು ಅಪಾಯದಲ್ಲಿವೆ. ಈ ಶಕ್ತಿಗಳು ಸಂವಿಧಾನದ ಎಲ್ಲಾ ಸ್ಥಂಭಗಳನ್ನು ಆಕ್ರಮಿಸಿಕೊಂಡಿವೆ ಎಂದು ನ್ಯಾಯಮೂರ್ತಿ ಗೌಡ ಹೇಳಿದರು.
ಕೇಂದ್ರ ಸರ್ಕಾರ 2019ರಲ್ಲಿ ಜಾರಿಗೆ ತಂದ ಅಮಾನ್ಯೀಕರಣ ಕುರಿತಂತೆ ಸುಪ್ರೀಂ ಕೋರ್ಟಿನ ಇತ್ತೀಚೆಗಿನ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಗೌಡ, “ಸಂವಿಧಾನಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಧೈರ್ಯವನ್ನು ಏಕೈಕ ನ್ಯಾಯಾಧೀಶೆ ಮಾತ್ರ ತಮ್ಮ ಭಿನ್ನ ತೀರ್ಪಿನಿಂದ ಎತ್ತಿ ಹಿಡಿದರು ಹಾಗೂ ಅಮಾನ್ಯೀಕರಣ ನೀತಿ ಜಾರಿಗೊಳಿಸುವಲ್ಲಿ ಅಗತ್ಯ ಪ್ರಕ್ರಿಯೆ ಪಾಲಿಸಲಾಗಿಲ್ಲ ಎಂದರು” ಎಂದು ಹೇಳಿದರು.












