ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಲಿಂಗನ, ಹಸ್ತದಾನಕ್ಕೂ ನಿಷೇಧ!

0
444

ಸನ್ಮಾರ್ಗ ವಾರ್ತೆ

ಲಂಡನ್: ವಿದ್ಯಾರ್ಥಿಗಳ ನಡುವಿನ ಎಲ್ಲಾ ರೀತಿಯ ದೈಹಿಕ ಸಂಪರ್ಕವನ್ನು ನಿಷೇಧಿಸಲು ಮುಂದಾದ ಇಂಗ್ಲೆಂಡ್‌ನ ಪ್ರೌಢಶಾಲೆಯೊಂದು ಭಾರೀ ಟೀಕೆಗೆ ಗುರಿಯಾಗಿದೆ.

“ಮಕ್ಕಳಲ್ಲಿ ಪ್ರೇಮಾಂಕುರ ಆಗದಿರುವಂತೆ ತಡೆಯಲು ಆಲಿಂಗನ ಮತ್ತು ಹಸ್ತದಾನವನ್ನು ಇಂಗ್ಲೆಂಡ್‌ನ ಹೈಸ್ಕೂಲ್‌ವೊಂದು ನಿಷೇಧಿಸಿದ್ದು, ಇನ್ನು ಮುಂದೆ ವಿದ್ಯಾರ್ಥಿಗಳು ಪರಸ್ಪರ ಹಸ್ತದಾನ ಮಾಡುವಂತಿಲ್ಲ, ಅಪ್ಪಿಕೊಳ್ಳುವಂತಿಲ್ಲ. ವಿದ್ಯಾಥಿಗಳ ನಡುವೆ ಎಲ್ಲ ರೀತಿಯ ದೈಹಿಕ ಸಂಪರ್ಕವನ್ನು ತಡೆಯುವುದು ಶಾಲೆಯ ಉದ್ದೇಶ” ಎಂದು ಹೇಳಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿದೆ.

ಈ ವಿಚಿತ್ರ ನಿಯಮಗಳ ಬಗ್ಗೆ ಅಧಿಕಾರಿಗಳು ಹೆತ್ತವರಿಗೆ ಪತ್ರ ಬರೆದಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದ್ದು, ನಿಮ್ಮ ಮಕ್ಕಳ ಸುರಕ್ಷೆಯ  ಹಿತದೃ಼ಷ್ಟಿಯಿಂದ ಶಾಲೆಯು ಈ ನಿರ್ಧಾರಕ್ಕೆ ಬಂದಿದೆ ಎಂದು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

ನಿಮ್ಮ ಮಕ್ಕಳು ಅವರ ಸಮ್ಮತಿಯಿಲ್ಲದೆ ಇನ್ನೊಬ್ಬರನ್ನು ಸ್ಪರ್ಶಿಸಿದರೆ ಏನು ಬೇಕಾದರೂ ಸಂಭವಿಸುವ ಸಾಧ್ಯತೆಯಿದೆ. ಕೆಲವರು ಸಮ್ಮತಿ ಕೇಳದೆಯೇ ದೇಹವನ್ನು ಸ್ಪರ್ಷಿಸುವುದರಿಂದ ಕೆಲವೊಮ್ಮೆ ದೇಹಕ್ಕೆ ಗಾಯಗಳೂ ಆಗುತ್ತವೆ ಎಂದು ಪತ್ರದಲ್ಲಿ ಅಧಿಕಾರಿಗಳು ಹೆತ್ತವರನ್ನು ಎಚ್ಚರಿಸಿದ್ದಾರೆ.

ಅಲ್ಲದೇ, ಸ್ಕೂಲ್ ಕ್ಯಾಂಪಸ್‌ನಲ್ಲಿ ಮೊಬೈಲ್ ಫೋನ್‌ಗಳಿಗೆ ನಿಷೇಧವಿದೆ. ಮೊಬೈಲ್ ಫೋನ್‍ಗಳನ್ನು ಶಾಲೆಗೆ ತಂದಿರುವುದು ಗೊತ್ತಾದರೆ ಅದನ್ನು ತೆಗೆದಿರಿಸಿ ಲಾಕ್ ಮಾಡಲಾಗುತ್ತದೆ. ಶಾಲೆಯವರ ಈ ನಿರ್ಧಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಸ್ಕೂಲ್‍ನ ಕಠಿಣ ನಿಬಂಧನೆಗಳ ಬಗ್ಗೆ ಪೋಷಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

“ಪತ್ರ ಬರೆಯುವ ಮೊದಲು ಯಾರೂ ಈ ನಿಬಂಧನೆಗಳ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ” ಎಂದು ಒಬ್ಬರು ಪೋಷಕರು ಹೇಳಿದರೆ, “ಆರೋಗ್ಯಕರ ಸಂಬಂಧದ ಬಗ್ಗೆ ಮಕ್ಕಳಲ್ಲಿ ಜ್ಞಾನ ತುಂಬಬೇಕು. ಆದರೆ ಅದರ ಬದಲು ನಿಬಂಧನೆ ಹೇರಲಾಗುತ್ತಿದೆ” ಎಂದು ಇನ್ನೋರ್ವ ಪೋಷಕರು ಕಿಡಿಕಾರಿದ್ದಾರೆ.