ಹಜ್ 2023 | ಆಕಾಂಕ್ಷಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ ಭಾರತೀಯ ಹಜ್ ಕಮಿಟಿ

0
626

ಸನ್ಮಾರ್ಗ ವಾರ್ತೆ

ನವದೆಹಲಿ: ಪವಿತ್ರ ಹಜ್‌ ಯಾತ್ರೆ 2023ನೇ ಸಾಲಿನಲ್ಲಿ ಸೌದಿ ಅರೇಬಿಯಾವು ಭಾರತಕ್ಕೆ ಸುಮಾರು 1.75 ಲಕ್ಷ ಕೋಟಾವನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಹಜ್ ಕಮಿಟಿಯು ಆಕಾಂಕ್ಷಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹೊಸ ಹಜ್ ನಿಯಮದ ಪ್ರಕಾರ ಒಟ್ಟು ಕೋಟಾದ ಶೇ. 90 ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ. ಉಳಿದವು ಖಾಸಗಿ ನಿರ್ವಾಹಕರಿಗೆ ಮೀಸಲಿರಿಸಲಾಗುತ್ತದೆ. ಹೀಗಾಗಿ ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್‌ ಕೋಟಾದಲ್ಲಿ 1,75,025 ಜನರು ಹಜ್ ಯಾತ್ರೆ ಕೈಗೊಳ್ಳಬಹುದು.

ಆಕಾಂಕ್ಷಿಗಳಿಂದ ಆನ್‌ಲೈನ್ ಮೂಲಕ ಇಂದಿನಿಂದ (ಫೆ.10) ಪ್ರಾರಂಭವಾಗಿದ್ದು, ಹಜ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು ಅರ್ಜಿದಾರರು ಹಜ್-2023ರ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಭಾರತೀಯ ಹಜ್ ಕಮಿಟಿ ತಿಳಿಸಿದೆ.

ಅರ್ಜಿಯು https://hajcommittee.gov.in/haf23/ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಆಕಾಂಕ್ಷಿಗಳು ಮಾರ್ಚ್ 10, 2023ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.

ಸೌದಿ ಅರೇಬಿಯಾದ ಅಧಿಕಾರಿಗಳು ನಿಗದಿಪಡಿಸುವ ವೇಳಾಪಟ್ಟಿ ಮತ್ತು ಮಾರ್ಗಸೂಚಿಗೆ ಅನುಸಾರವಾಗಿ ಪ್ರತಿ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಹಜ್ ಯಾತ್ರಿಗಳ ಮೊದಲ ತಂಡ ಪ್ರಯಾಣ ಆರಂಭಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಭಾರತೀಯ ಹಜ್ ಯಾತ್ರಿಗಳು ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿತ್ತು. ಆದರೆ ಸಾಂಕ್ರಾಮಿಕದ ಮುಂಜಾಗ್ರತಾ ನಿರ್ಬಂಧಗಳಿಂದಾಗಿ ಭಾರತೀಯ ಕೋಟಾವನ್ನು 79 ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು.