ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ| ಗೃಹ ರಕ್ಷಕ ದಳ, ಪೌರ ರಕ್ಷಣಾ ಪಡೆ ಜಂಟಿ ರಕ್ತದಾನ ಶಿಬಿರ

0
343

ಸನ್ಮಾರ್ಗ ವಾರ್ತೆ

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ ಎಂದು ವೈದ್ಯ ಕಿಶನ್ ರಾವ್ ಬಾಳಿಲ ಅವರು ನುಡಿದರು.

ಅವರು ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳ ಮತ್ತು ಪೌರ ರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್‍ನಲ್ಲಿರುವ ಗೃಹ ರಕ್ಷಕ ದಳ ಕಛೇರಿಯಲ್ಲಿ ರಕ್ತದಾನ ಶಿಬಿರವು ನಡೆಯಿತು.

ಈ ಸಂದರ್ಭದಲ್ಲಿ ತೇಜಸ್ವಿನಿ ಆಸ್ಪತ್ರೆಯ ವೈದ್ಯ ವಾಸುದೇವ ಪ್ರಭು ಅವರು ರಕ್ತದಾನದ ಮಹತ್ವದ ಬಗ್ಗೆ ವಿವರ ನೀಡಿದರು. ಪ್ರತಿ ಆರೋಗ್ಯವಂತ ಪುರುಷ 18 ವರ್ಷದ ಬಳಿಕ 65 ವರುಷದವರೆಗೆ ವರ್ಷದ ನಾಲ್ಕು ಬಾರಿ ರಕ್ತದಾನ ಮಾಡಬಹುದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ 12 ಕ್ಕಿಂತ ಜಾಸ್ತಿ ಇದ್ದು ದೇಹದ ತೂಕ 45 ಕೆ.ಜಿ ಗಿಂತ ಜಾಸ್ತಿ ಇರಬೇಕು. ಮಹಿಳೆಯರ ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ನುಡಿದರು.

ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಮುರಳೀ ಮೋಹನ್ ಚೂಂತಾರು ಅವರು ಮಾತನಾಡಿ, ರಕ್ತದಾನದ ಮಹತ್ವದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆಚರಣೆಯನ್ನು 2004 ರಲ್ಲಿ ಆರಂಭಿಸಲಾಯಿತು.

ಜೂನ್ 14 ರಂದು ಆಚರಿಸುವ ಉದ್ದೇಶ ಏನೆಂದರೆ ರಕ್ತದ ಗುಂಪನ್ನು ಕಂಡು ಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್‍ಸ್ಟೈನರ್ ಅವರು ಹುಟ್ಟಿದಂತ ದಿನ. ಅವರು ರಕ್ತದ ಗುಂಪನ್ನು ಸಂಶೋಧನೆ ಮಾಡಿದ ಕಾರಣದಿಂದ ಲಕ್ಷಾಂತರ ಜನರ ಜೀವವನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗುತ್ತಿದೆ. ಈ ಒಂದು ರಕ್ತದ ಗುಂಪನ್ನು ವರ್ಗೀಕರಣ ಮಾಡಿದ ಕಾರ್ಲ್ ಲ್ಯಾಂಡ್‍ಸ್ಟೈನರ್ ಅವರನ್ನು ನೆನಪಿಸಿಕೊಳ್ಳುವ ಸುದಿನ ಎಂದರು.

ಈ ಸಂದರ್ಭದಲ್ಲಿ ಉಪಸಮಾದೇಷ್ಟ ರಮೇಶ್, ಕಛೇರಿ ಅಧೀಕ್ಷಕಿ ಕವಿತಾ ಕೆ.ಸಿ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಮೀನಾಕ್ಷಿ, ಉಳ್ಳಾಲ ಘಟಕದ ಘಟಕಾಧಿಕಾರಿ ಭಾಸ್ಕರ್ ಎಂ, ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್, ಮಂಗಳೂರು ಘಟಕದ ಸಾರ್ಜೆಂಟ್ ಸುನಿಲ್, ಗೃಹ ರಕ್ಷಕರಾದ ಕನಕಪ್ಪ, ದಿವಾಕರ್, ರಂಗಪ್ಪ, ರಂಜಿತ್, ಪ್ರಸಾದ್, ನಿಖಿಲ್, ಸುಲೋಚನಾ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ತೇಜಸ್ವಿನಿ ಆಸ್ಪತ್ರೆಯ ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು.