NRI ಉದ್ಯಮಿ ಹನಿ ಎಂ ಹನೀಫ್ ರಿಗೆ 2023 ರ ಪ್ರತಿಷ್ಟಿತ ಬಿಝಿನೆಸ್ ಎಕ್ಸಲೆನ್ಸ್ ಅವಾರ್ಡ್

0
423

ಸನ್ಮಾರ್ಗ ವಾರ್ತೆ

ದುಬೈ: ಮಂಗಳೂರು ಮೂಲದ ಯುವ ಉದ್ಯಮಿ, ಅಮೇರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ. ಸಿಇಒ ಹನಿ ಎಂ ಹನೀಫ್ ಅವರು 2023ರ ಪ್ರತಿಷ್ಟಿತ ಬಿಝಿನೆಸ್ ಎಕ್ಸಲೆನ್ಸ್ ಅವಾರ್ಡ್ ಗೆ ಭಾಜನರಾಗಿದ್ದಾರೆ. ದುಬೈಯಲ್ಲಿ ಮೇ 27ರಂದು ನಡೆದ ಮಾಸ್ಟರ್ಸ್ ವಿಷನ್ ಇಂಟರ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಯಶಸ್ವಿ ಉದ್ಯಮಿಗಾಗಿರುವ ಅವಾರ್ಡನ್ನು ಇವರು ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರಿಂದ ಈ ಅವಾರ್ಡನ್ನು ಸ್ವೀಕರಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹನಿ ಎಂ ಹನೀಫ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಭಾಜನರಾಗಿ ಮಾತನಾಡಿದ ಹನಿ ಎಂ ಹನೀಫ್, ತಮ್ಮ ಉದ್ಯಮದ ಯಶಸ್ಸಿಗೆ ಸಹಕರಿಸಿದ ತಮ್ಮ ಕುಟುಂಬ, ಸೇವಾ ಪೂರೈಕೆದಾರರು ಮತ್ತು ಗ್ರಾಹಕರಿಗೆ ತಮ್ಮ ಧನ್ಯವಾದ ಹೇಳಿದ್ದಾರೆ.

2013ರಲ್ಲಿ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಎಂಬ ಆಹಾರ ಉತ್ಪಾದನಾ ತಯಾರಿಕಾ ಕಂಪನಿಯನ್ನು ಅಮೆರಿಕದಲ್ಲಿ ಸ್ಥಾಪಿಸಿದವರು.

ಅಮೆರಿಕದಲ್ಲಿ ಸ್ಥಾಪನೆಯಾದ ಈ ಕಂಪನಿ ಇವತ್ತು 50 ರಾಷ್ಟ್ರಗಳಿಗೆ ಸುಮಾರು 20ರಷ್ಟು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಮೆರಿಕ, ಮೆಕ್ಸಿಕೋ, ಬ್ರಿಟನ್ ಮತ್ತು ದುಬೈಯಲ್ಲಿ ಕಚೇರಿಗಳಿವೆ. ಸೂಪರ್ ಮಾರ್ಕೆಟ್, ಏರ್ಲೈನ್ಸ್, ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಇತ್ಯಾದಿಗಳಿಗೆ ಉತ್ಪನ್ನಗಳನ್ನು ಈ ಕಂಪನಿ ಸರಬರಾಜು ಮಾಡುತ್ತಿದೆ.

ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಮುಖ್ಯ ಕಾರ್ಯಾಲಯವನ್ನು ಹೊಂದಿರುವ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆಯ ಮಾರ್ಕೆಟಿಂಗ್ ಕಚೇರಿ ನ್ಯೂಯಾರ್ಕ್‌ನಲ್ಲಿದೆ. ಕಂಪೆನಿಯು ಸಾಸ್, ಡ್ರೆಸ್ಸಿಂಗ್ಸ್, ಮೆಯೊನೀಸ್, ಟಾರ್ಟಿಲ್ಲಾ, ಸಲ್ಫಾ, ಪೊಟ್ಯಾಟೋ ಚಿಪ್ಸ್, ಪಾಪ್‌ಕಾರ್ನ್, ಸಿರಪ್‌ಗಳು, ಆಲಿವ್ ಮತ್ತಿತರ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದೆ.

ತನ್ನ ಇತ್ತೀಚಿನ ಯೋಜನೆಯ ಭಾಗವಾಗಿ ಸಂಸ್ಥೆಯು ಬ್ಯುಸಿನೆಸ್ ಟು ಕನ್ಸೂಮರ್ (ಬಿ2ಸಿ) ಕ್ಷೇತ್ರಕ್ಕೂ ಕಾಲಿಡುತ್ತಿದ್ದು ಜಗತ್ತಿನಾದ್ಯಂತ ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ಇರಾದೆಯನ್ನು ಕಂಪೆನಿ ಹೊಂದಿದೆ.