ಇಸ್ಲಾಮಿನಲ್ಲಿ ಮದುವೆಗೆ ಮುನ್ನ ಲೈಂಗಿಕತೆ ನಿಷೇಧ: ಅಲಹಾಬಾದ್ ಕೋರ್ಟ್‌

0
477

ಸನ್ಮಾರ್ಗ ವಾರ್ತೆ

ಲಕ್ನೋ: ಮದುವೆಗೆ ಮೊದಲು ಯಾವುದೇ ಲೈಂಗಿಕ, ಕಾಮ ಪ್ರಚೋದಕ, ಪ್ರೀತಿಯಿಂದ ಮುತ್ತಿಡುವುದು, ಸ್ಪರ್ಶಿಸುವುದು, ನೋಡುವುದು ಇತ್ಯಾದಿಗಳೆಲ್ಲವೂ ಇಸ್ಲಾಮ್ ಧರ್ಮದಲ್ಲಿ ನಿಷಿದ್ದವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಹೇಳಿದೆ.

ಪೊಲೀಸರ ಕಿರುಕುಳದಿಂದ ರಕ್ಷಣೆ ಕೋರಿ ಅಂತರ್ ಧರ್ಮೀಯ ಲಿವ್- ಇನ್ ದಂಪತಿಗಳು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ನ್ಯಾಯ ಮೂರ್ತಿ ಸಂಗೀತಾ ಚಂದ್ರ ಮತ್ತು ನ್ಯಾಯ ಮೂರ್ತಿ ನರೇಂದ್ರ ಕುಮಾರ್ ಜೊಹಾರಿ ಅವರಿದ್ದ ಪೀಠವು, ಮುಸ್ಲಿಂ ಕಾನೂನಿನಲ್ಲಿ, ಮದುವೆಯ ಮುಂಚಿನ ಲೈಂಗಿಕತೆಗೆ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಬಂಧ ಹೊರತು ಪಡಿಸಿ ಯಾವುದೇ ಲೈಂಗಿಕ ಸಂಬಂಧ ಎಂದು ವ್ಯಾಖ್ಯಾನಿಸಲಾದ ಝಿನಾ, ವಿವಾಹೇತರ ಲೈಂಗಿಕತೆ ಮತ್ತು ವಿವಾಹಪೂರ್ವ ಲೈಂಗಿಕತೆ ಎರಡನ್ನೂ ಒಳಗೊಂಡಿರುತ್ತದೆ. ಇದನ್ನೇ ವ್ಯಭಿಚಾರ ಎಂದು ಕರೆಯಲಾಗಿದೆ. ಇಸ್ಲಾಮ್ ನಲ್ಲಿ ಇಂತಹ ವಿವಾಹಪೂರ್ವ ಲೈಂಗಿಕತೆಗೆ ಆಸ್ಪದವಿಲ್ಲ. ವಾಸ್ತವವಾಗಿ, ಯಾವುದೇ ಲೈಂಗಿಕ, ಕಾಮ ಪ್ರಚೋದಕ, ಪ್ರೀತಿಯ ಕ್ರಿಯೆಗಳಾದ ಚುಂಬನ, ಸ್ಪರ್ಶಿಸುವುದು, ದಿಟ್ಟಿಸುವಿಕೆ ಇತ್ಯಾದಿಗಳು ಇಸ್ಲಾಮ್ ನಲ್ಲಿ ಮದುವೆಗೆ ಮೊದಲು ‘ಹರಾಮ್’ ಎಂದು ಪೀಠವು ಹೇಳಿದೆ.

ಯುವತಿಯ ತಾಯಿಯು ತಮ್ಮ ಲಿವ್-ಇನ್ ಸಂಬಂಧದಿಂದ ಅತೃಪ್ತರಾಗಿದ್ದೂ ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಅಂತರ್ ಧರ್ಮೀಯ ದಂಪತಿಗಳು ಸಲ್ಲಿಸಿದ ರಕ್ಷಣೆ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿ ವಜಾಗೊಳಿಸಿದೆ.

ಪೊಲೀಸರಿಂದ ಕಿರುಕುಳದ ವಿರುದ್ಧ ರಕ್ಷಣೆ ಪಡೆಯಲು ಲಿವ್-ಇನ್ ಸಂಬಂಧಗಳ ಕುರಿತು ಸುಪ್ರೀಂ ಕೋರ್ಟ್‌ ನ ತೀರ್ಪನ್ನು ದಂಪತಿಗಳು ಉಲ್ಲೇಖಿಸಿದ್ದರು. ಆದರೆ ಲಿವ್-ಇನ್ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಇಂತಹ ಸಂಬಂಧಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಪೀಠವು ಹೇಳಿದೆ.