`ನನ್ನನ್ನು ರೂಪಿಸಿದ್ದು ಎಸ್‌ಐಓ’ : ಸೈಯದ್ ಸಾದತುಲ್ಲಾ ಹುಸೈನಿ

0
635

ಸನ್ಮಾರ್ಗ ವಾರ್ತೆ

ಕನ್ನಡಕ್ಕೆ: ಎಂ.ಎ. ಉಡುಪಿ

[ಕಳೆದ ಸಂಚಿಕೆಯಲ್ಲಿ ಅಮೀರೆ ಜಮಾಅತ್ ಸೈಯದ್ ಸಆದತುಲ್ಲಾ ಹುಸೇನಿ ಸಂದರ್ಶನ ಪ್ರಕಟವಾಗಿತ್ತು. ಇದು ಮುಂದುವರಿದ ಭಾಗ]

? ಅಮೀರ್ ಜಮಾಅತ್ ಆಗಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಹೊರತಾಗಿಯೂ ನೀವು ವಿವಿಧ ವೇದಿಕೆಗಳಲ್ಲಿ JIH ಅನ್ನು  ಪ್ರತಿನಿಧಿಸಬೇಕಾಗುತ್ತದೆ ಮತ್ತು ಸಾಕಷ್ಟು ಪ್ರಯಾಣಿಸಬೇಕಾಗುತ್ತದೆ. ಆದರೂ, ನೀವು ಬರೆಯುತ್ತಲೇ ಇರುತ್ತೀರಿ. ನೀವು ವಿವಿಧ  ಪತ್ರಿಕೆಗಳಲ್ಲಿ ಕಾಲಮ್ ಬರೀತೀರಿ. ಆದ್ದರಿಂದ ನೀವು ವಿಷಯಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ ಎಂಬುದು ಮೊದಲ ಪ್ರಶ್ನೆ. ಪ್ರಕಾಶಕರು ಕೇಳುತ್ತಾರೆಯೇ ಅಥವಾ ಜಮಾತ್‌ನಲ್ಲಿನ ಪ್ರತಿನಿಧಿಗಳ ನಿರ್ಧಾರದ ಆಧಾರದ ಮೇಲೆ ಅಥವಾ ನೀವು ಇತರರೊಂದಿಗೆ ಸಮಾಲೋಚಿಸುತ್ತೀರಾ? ಅಥವಾ ನಿಮ್ಮ ಮನಸ್ಸಿನಲ್ಲಿ ಬಂದ ಆಲೋಚನೆಯ ಪ್ರಕಾರ ಮುಂದುವರಿಯುತ್ತೀರಾ?

ಸಾಮಾನ್ಯವಾಗಿ ನಾನು ವಿಷಯಗಳನ್ನು ಆಯ್ಕೆ ಮಾಡುತ್ತೇನೆ. ನಾನು ಎಸ್‌ಐಓನಲ್ಲಿ ಇದ್ದಾಗ ಸಂವಹನ ಮಾಡಲು ಇದೆ ಎಂದಾಗ ಬರೆಯುತ್ತಿದ್ದೆ. ಇಲ್ಲಿಯೂ ವಿಷಯವನ್ನು ಅರಗಿಸಿಕೊಂಡು ವಿಶ್ಲೇಷಣೆ ನಡೆಸುತ್ತಿದ್ದೆ. ನಾನು ಬರೆಯುವ ಮೊದಲು ನನ್ನ ವಿಚಾರಗಳನ್ನು ಕಾಗದದಲ್ಲಿ ಕಚ್ಚಾ ಆಗಿ ಬರೆದು ನಂತರ ಇದರ ಸಲಹೆ ಪಡೆಯಲು ಪ್ರಯತ್ನಿಸುತ್ತೇನೆ. ಡಾ| ಹಸನ್ ರಝಾ, ಡಾ| ಮುಹಮ್ಮದ್ ರಫಾತ್, ಅಮೀನುಲ್ ಹಸನ್, ಶಬ್ಬೀರ್ ಆಲಂ, ಮುಹ್ಯುದ್ದೀನ್ ಗಾಜಿ, ಡಾ| ಮುಹಮ್ಮದ್ ರಝಿಯುಲ್ ಇಸ್ಲಾಂ ನದ್ವಿ ಮುಂತಾದ ಹಲವರ ಜೊತೆ ಸಮಾಲೋಚಿಸುತ್ತೇನೆ.

? ಈಗ ನೀವು ಬರೆಯುವಾಗ ಅಮೀರೇ ಜಮಾಅತ್ ಎಂಬ ಒತ್ತಡ ಅನುಭವಿಸುತ್ತೀರಾ?

ಹೌದು, ನಿಸ್ಸಂಶಯವಾಗಿ. ಸ್ವತಂತ್ರ ವ್ಯಕ್ತಿಯಾಗಿ ಮತ್ತು ಯಾವುದೇ ಹೊರೆಯಿಲ್ಲದೆ ನಿಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತ ಪಡಿಸುವುದು ಸುಲಭ. ಆದರೆ ಈಗ ನಾನು ತುಂಬಾ ಜಾಗರೂಕನಾಗಿರಬೇಕು. ಏಕೆಂದರೆ ಜನರು ಅದನ್ನು ಜಮಾಅತ್‌ನ ಅಧಿಕೃತ  ಅಭಿಪ್ರಾಯವಾಗಿ ತೆಗೆದುಕೊಳ್ಳುತ್ತಾರೆ.

? ನೀವು ಆದರ್ಶವಾದಿ ಅಥವಾ ಚಿಂತಕ ಎಂದು ಕೆಲವರು ಕಾಮೆಂಟ್ ಮಾಡುತ್ತಾರೆ. ಆದರೆ ಮರ್ಕಝ್‌ನಲ್ಲಿ ನಾವು ನಿಮ್ಮ ಜ್ಞಾನ,  ಆಲೋಚನಾ ರೀತಿ ಮತ್ತು ಪ್ರಾಯೋಗಿಕ ಬುದ್ಧಿವಂತಿಕೆಯನ್ನು ನೋಡಿದ್ದೇವೆ. ನೀವು ಜನರೊಂದಿಗೆ ಹೇಗೆ ವರ್ತಿಸುತ್ತೀರಿ ಮತ್ತು  ನೀವು ಅವರಿಗೆ ಹೇಗೆ ಮಾರ್ಗದರ್ಶನ ನೀಡುತ್ತೀರಿ ಎಂಬುದನ್ನೂ ನೋಡಿದ್ದೇವೆ. ಅಂದಹಾಗೆ, ಚಿಂತಕ ಮತ್ತು ವಿದ್ವಾಂಸರ ನಡುವಿನ  ವ್ಯತ್ಯಾಸವೇನು? ಮತ್ತು ನಮ್ಮಲ್ಲಿ ಹೆಚ್ಚು ವಿದ್ವಾಂಸರು ಇದ್ದಾರೆ, ಆದರೆ ಚಿಂತಕರು ಮತ್ತು ಪ್ರಾಯೋಗಿಕ ಬುದ್ಧಿವಂತಿಕೆಯುಳ್ಳ ವರು  ಬಹಳ ಕಡಿಮೆ ಎಂಬುದನ್ನು ಒಪ್ಪುತ್ತೀರಾ?

ಹೌದು, ಇವುಗಳು ಒಂದಕ್ಕೊಂದು ವಿರುದ್ಧವಾದುದು ಎಂದು ಹಲವರು ಭಾವಿಸುತ್ತಾರೆ. ಆದರೆ ನಾವು ಯಾವ ರೀತಿಯ ಸೈದ್ಧಾಂತಿಕ  ಚಳುವಳಿಯ ಭಾಗವಾಗಿದ್ದೇವೆಯೋ ಅದು ಈ ಎರಡರ ಸಂಯೋಜನೆಯನ್ನೂ ಬಯಸುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರೇ  ಇದಕ್ಕೆ ಆದರ್ಶರಾಗಿದ್ದಾರೆ. ಮೌಲಾನಾ ಮೌದೂದಿಯಂತಹ ಜಮಾಅತೆ ಇಸ್ಲಾಮಿನ ಮೊದಲ ತಲೆಮಾರಿನ ನಾಯಕರೂ ಮಾದರಿಯಾಗಿದ್ದಾರೆ. ಅವರು ಎರಡೂ ವಿಷಯಗಳನ್ನು ಬಹಳ ಸುಂದರವಾಗಿ ಸಂಯೋಜಿಸಿದ್ದಾರೆ.

ನಮ್ಮ ಚಳುವಳಿ ಮುಖ್ಯವಾಗಿ ಸೈದ್ಧಾಂತಿಕ ಚಳುವಳಿಯಾಗಿದೆ. ಹಾಗಾಗಿ ನಾವು ಕೇವಲ ಕಾರ್ಯಕರ್ತರಾಗಿದ್ದರೆ ಸಾಲದು. ನಾವು ಸಿದ್ಧಾಂತದಿಂದ ದೂರವಾಗಲು ಸಾಧ್ಯವಿಲ್ಲ. ವಿಶೇಷವಾಗಿ ನಾಯಕತ್ವದ ಸ್ಥಾನದಲ್ಲಿರುವವರು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಸಮಾಜದೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೆ ಪೂರ್ಣ ಪ್ರಮಾಣದ ಪಾಂಡಿತ್ಯ ಹಾಗೂ ಬುದ್ಧಿವಂತಿಕೆ ಬೇಕು.
ಜೊತೆಗೆ, ನಾವು ಕೇವಲ ಶೈಕ್ಷಣಿಕ ಸಂಸ್ಥೆಯ ಹಾಗೆ ಅಲ್ಲ. ನಮ್ಮದು ಪ್ರಾಯೋಗಿಕ ಚಳುವಳಿ. ನಾವು ಪ್ರತಿಪಾದಿಸುವ ಯಾವುದೇ  ವಿಚಾರಗಳು ಸಮಾಜದಲ್ಲಿ ಅನುಷ್ಠಾನಗೊಳ್ಳಬೇಕು. ಅವುಗಳನ್ನು ಕಾರ್ಯಗತಗೊಳಿಸಲು ಮಾಡುವ ಪ್ರಯತ್ನವೇ  ನಾವು ಸಮಾಜಕ್ಕೆ ಮಾಡುವ ಸಹಾಯ. ಅದಕ್ಕೆ ಪ್ರಾಯೋಗಿಕ ಜ್ಞಾನ ಮತ್ತು ಅನುಭವದ ಅಗತ್ಯವಿದೆ. ಹಾಗಾಗಿ, ನಮ್ಮ ಚಳವಳಿಯಲ್ಲಿ ಈ ರೀತಿಯ  ಮಾದರಿ ಯಾವಾಗಲೂ ಇತ್ತು.

ವಿಶೇಷವಾಗಿ, ನಾನು SIO ನಲ್ಲಿ ಪಡೆದ ಅನುಭವವು ಬಹಳಷ್ಟು ಸಹಾಯಕವಾಗಿದೆ. ನಾನು ಆ ವಯಸ್ಸಿನಲ್ಲಿಯೇ ವಿಭಿನ್ನ ಸನ್ನಿವೇಶಗಳು ಮತ್ತು ಸವಾಲುಗಳಿಗೆ ಪ್ರಾಯೋಗಿಕ ಪ್ರಯತ್ನದ ಅನುಭವ ಪಡೆದಿದ್ದೇವೆ. ನಮಗೆ ಸಾಕಷ್ಟು ಸೈದ್ಧಾಂತಿಕ ಮತ್ತು ಬೌದ್ಧಿಕ ತರಬೇತಿಯೂ ಸಿಕ್ಕಿದೆ. 21 ಮತ್ತು 22 ರನೇ ವಯಸ್ಸಿನಲ್ಲಿ ಡಾ| ಎಫ್.ಆರ್. ಫರೀದಿ, ಅಬ್ದುಲ್ ಹಖ್ ಅನ್ಸಾರಿ. ಟಿ.ಕೆ. ಅಬ್ದುಲ್ಲಾ,  ಮೌಲಾನಾ ಸೈಯದ್ ಜಲಾಲುದ್ದೀನ್ ಉಮರಿ, ಡಾ| ನಜತುಲ್ಲಾ ಸಿದ್ದಿಖಿ ಮುಂತಾದ ಉನ್ನತ ವಿದ್ವಾಂಸರೊಂದಿಗೆ ಆಗಾಗ್ಗೆ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿತ್ತು. ಅವರೊಂದಿಗೆ ಗಂಟೆಗಟ್ಟಲೆ ಆತ್ಮೀಯವಾಗಿ ಮಾತುಕತೆ ನಡೆಸಿದ್ದೆ. ಆದ್ದರಿಂದ, ನಾವು ಚಿಕ್ಕ ವಯಸ್ಸಿನಿಂದಲೇ ಪಡೆದ ಪ್ರಾಯೋಗಿಕ ಕ್ರಿಯಾಶೀಲತೆ ಮತ್ತು ಬೌದ್ಧಿಕ ಬೆಂಬಲವು ಸಹಾಯಕವಾಗಿದೆ. ಆದ್ದರಿಂದ, ನಮ್ಮ ಯುವ ಜನತೆಗೆ ಎಸ್‌ಐಓ ಒಂದು ಉತ್ತಮ ವೇದಿಕೆ ಎಂದು ನಾನು ಭಾವಿಸುತ್ತೇನೆ.

? ನಿಮ್ಮ ಭಾಷಣಗಳು ಮತ್ತು ಪ್ರಸ್ತುತಿಗಳಲ್ಲಿ ನೀವು ಒಂದು ಗುಂಪನ್ನು ಸಂಬೋಧಿಸಿ ಭಾಷಣ ಮಾಡಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದ ನಂತರ, ಮತ್ತೇ ಅದೇ ಗುಂಪನ್ನು ಸಂಬೋಧಿಸಿ ಭಾಷಣ ಮಾಡುವ ಸಂದರ್ಭ ಬಂದಾಗ ನಿಮ್ಮ ಹಿಂದಿನ  ಭಾಷಣವನ್ನು ಜೋಡಿಸಿ ಮುಂದುವರಿಸುತ್ತೀರಿ ಮತ್ತು ಆ ಮೂಲಕ ಅವ ರೊಂದಿಗೆ ಸಂಬಂಧ ಬೆಳೆಸುತ್ತೀರಿ. ನೀವು ಅದನ್ನು ಹೇಗೆ  ನಿರ್ವಹಿಸುತ್ತೀರಿ? ಅವರೊಂದಿಗೆ ಸಂವಹನ ಮಾಡಲು ಬೇರೆ ಬೇರೆ ಗುಂಪುಗಳ ಕಡತಗಳನ್ನು ಸಿದ್ಧಪಡಿಸುತ್ತೀರಾ?

ಹೌದು, ನನ್ನ ಎಲ್ಲಾ ಭಾಷಣಗಳು, ನನ್ನ ಎಲ್ಲಾ ಮಾತುಕತೆಗಳು ಮತ್ತು ನನ್ನ ಎಲ್ಲಾ ಬರಹಗಳ ದಾಖಲೆಯನ್ನು ನಾನು ಕಾಯ್ದಿರಿಸುತ್ತೇನೆ. ಅವುಗಳನ್ನು ನನ್ನ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಡುತ್ತೇನೆ. ವಾಸ್ತವವಾಗಿ, ನನ್ನ ಬರಹಗಳಿಗೆ ಈ ಅಭ್ಯಾಸವು ಬಹಳಷ್ಟು ಸಹಾಯ ಮಾಡುತ್ತದೆ. ನನ್ನ ಬರಹಗಳಲ್ಲಿರುವ ಆ ಉಲ್ಲೇಖಗಳೆಲ್ಲವೂ ಈ ಅಭ್ಯಾಸದಿಂದಲೇ ಆಗಿದೆ.
ಕನಿಷ್ಠ ಪ್ರಯತ್ನದಿಂದ ಬಹಳಷ್ಟು ಕೆಲಸಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಲು ಇದು ಸಹಾಯ ಮಾಡುತ್ತದೆ. ಆದ್ದರಿಂದ  ನಾನು ನಿರ್ದಿಷ್ಟ ಪ್ರೇಕ್ಷಕರಿಗೆ ಭಾಷಣ ಮಾಡಲು ಹೋದಾಗ ಹಿಂದಿನ ಉಲ್ಲೇಖಗಳನ್ನು ಮುಂದುವರಿಸಲು ಪ್ರಯತ್ನಿಸುತ್ತೇನೆ. ಅವರು ಯಾವ ರೀತಿಯ ಪ್ರೇಕ್ಷಕರು ಮತ್ತು ನಾನು ಮೊದಲು ಅವರಿಗೆ ಏನು ಹೇಳಿದ್ದೆ ಎಂಬುದನ್ನು ನೆನಪು ಮಾಡಲು ಪ್ರಯತ್ನಿಸುತ್ತೇನೆ  ಮತ್ತು ನಂತರ ಏನು ಮಾತನಾಡಬೇಕೆಂದು ನಿರ್ಧರಿಸುತ್ತೇನೆ.

[ಮುಂದುವರಿಯುವುದು]