ಜನಾಂಗೀಯ ಶುದ್ದಿಯ ಹಾದಿಯಲ್ಲಿ ನೆತನ್ಯಾಹು ಸರಕಾರ: ಫ್ಯಾಲೆಸ್ತೀನ್ ಮಾಜಿ ಸಚಿವ ಡಾ. ಮುಸ್ತಫ ಬರ್ಗೌತಿ ಗಂಭೀರ ಆರೋಪ.!

0
470

✍️ ಇರ್ಶಾದ್ ಬೈರಿಕಟ್ಟೆ

ಸನ್ಮಾರ್ಗ ವಾರ್ತೆ

ಇಸ್ರೇಲ್ -ಫೆಲೆಸ್ತೀನ್ ಮತ್ತೆ ಸುದ್ದಿಯಲ್ಲಿದೆ. ಗಾಝಾದ ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿಗೆ ಇಸ್ರೇಲ್ ನೀಡಿದ ಪ್ರತ್ಯುತ್ತರ ಅಕ್ಷರಶಃ ರಣರಂಗವಾಗಿಸಿದೆ. ಅದರಲ್ಲೂ ಗಾಝಾದಲ್ಲಿ ವಿದ್ಯುತ್-ನೀರು-ಆಹಾರ ಮೊದಲಾದ ಮೂಲಭೂತ ಅಗತ್ಯಗಳಿಗೆ ಇಸ್ರೇಲ್ ತಡೆಯೊಡ್ಡಿದೆ. ವೈದ್ಯಕೀಯ- ಪ್ರಥಮ ಚಿಕಿತ್ಸೆ ನೀಡುವವರ ಮೇಲೂ ಆಕ್ರಮಣ ಮುಂದುವರೆದಿದೆ. ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿದೆ.

ಈ ವಿದ್ಯಮಾನಗಳ ನಡುವೆ ಪರ ವಿರೋಧ ಚರ್ಚೆಗಳು ಜಾಗತಿಕವಾಗಿ ನಡೆಯುತ್ತಿದೆ. ಇಸ್ರೇಲ್ ನೊಂದಿಗೆ ಅಮೇರಿಕ-ಯುರೋಪಿಯನ್ ಯೂನಿಯನ್ ಬೆಂಬಲವಾಗಿ ನಿಂತಿರುವುದು ಅದಕ್ಕೆ ಬಲ ತಂದು ಕೊಟ್ಟಿದೆ.

ಯುದ್ದಗಳಿಂದ ಜಗತ್ತು ಸಾಧಿಸಿದ್ದೇನು.? ಸಾವು-ನೋವು-ನಷ್ಟಗಳು. ಲಾಭ ದೊರಕಿದ್ದು ಶಸ್ತ್ರ ಮಾರುವ ಕಂಪೆನಿಗಳಿಗೆ ಮಾತ್ರ. ವಿಪರ್ಯಾಸ ಎಂದರೆ ಇಸ್ರೇಲ್ ಮತ್ತು ಫೆಲೆಸ್ತೀನ್ ಸಮಸ್ಯೆಯನ್ನು ಧಾರ್ಮಿಕ ಕಣ್ಣುಗಳಿಂದ ನೋಡುವುದು. ಇದರಿಂದ ಪರಸ್ಪರ ದ್ವೇಷ ಹೆಚ್ಚಿಸುವಿಕೆ ಬಿಟ್ಟರೆ ನಮಗೆ ಲಭಿಸುವುದಾದರೂ ಏನು.? ಫೆಲೆಸ್ತೀನ್ ನ ಪಿ.ಎನ್.ಐ ಪಕ್ಷದ ಪ್ರಧಾನ ಕಾರ್ಯದರ್ಶಿ, ಪಿ.ಎಲ್.ಒ (ಫೆಲೆಸ್ತೀನ್ ಲಿಬರೇಶನ್ ಓರ್ಗನೈಸೇಶನ್) ಇದರ ಸದಸ್ಯರೂ, ಫತಹ್ ಸರಕಾರದಲ್ಲಿ ಈ ಹಿಂದೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಖ್ಯಾತ ರಾಜಕಾರಣಿ ಡಾ. ಮುಸ್ತಫ ಬರ್ಗೌತಿ ಈ ವಿದ್ಯಮಾನಗಳನ್ನು ವಿವರಿಸುವ ರೀತಿ ನಿಜಕ್ಕೂ ಅವಲೋಕಿಸಬೇಕಾದದ್ದು.

“ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಫೆಲೆಸ್ತೀನ್ ವಿಚಾರದಲ್ಲಿ ಸ್ವೀಕರಿಸಿರುವ ತೀರ್ಮಾನ ನಿರಾಸಾದಾಯಕ ಮತ್ತು ಖೇದನೀಯವಾದದ್ದು. ಇದು ಫೆಲೆಸ್ತೀನಿ ಅಸ್ಮಿತೆಯ ಸ್ಪಷ್ಟ ನಿರಾಕರಣೆ. ಇಸ್ರೇಲ್ ನ ರಕ್ಷಣಾ ಸಚಿವರು ಬಹಿರಂಗವಾಗಿ ನಮ್ಮನ್ನು ಪ್ರಾಣಿಗಳು ಎಂದಿದ್ದಾರೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ತಡೆಯುತ್ತೇವೆ ಎಂದಿದ್ದಾರೆ. ಜಗತ್ತಿನ ಪ್ರಬಲ ಶಕ್ತಿಗಳಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ.

ಇಸ್ರೇಲ್ ಎರಡು ಪ್ರಮುಖ ಯುದ್ದವನ್ನು ಫೆಲೆಸ್ತೀನ್ ಎದುರು ಸಾರಿದೆ. ಒಂದು ಗಾಝಾದ ಜನತೆಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆಯಾದ ವೈದ್ಯಕೀಯ-ಆಹಾರ-ನೀರು-ವಿದ್ಯುತ್ ಸೌಲಭ್ಯವನ್ನೇ ತುಂಡರಿಸುವ ಮೂಲಕ ಇಸ್ರೇಲ್ ತನ್ನ ಅತೀ ನೀಚ ಬುದ್ದಿಯನ್ನು ತೋರಿದೆ. ಎರಡನೆಯದು ನಿರಂತರ ನಡೆಸುತ್ತಿರುವ ಏರ್ ಸ್ಟ್ರೈಕ್, ಈ ಮೂಲಕ ಲಕ್ಷ ಗಟ್ಟಲೆ ಸೂರು ಇಲ್ಲದಾಗಿದ್ದಾರೆ, ಸಾವಿರಾರು ಮನೆಗಳು ಇಲ್ಲವಾಗಿದೆ. 200 ಕ್ಕೂ ಅಧಿಕ ಮಕ್ಕಳು ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿ ಹತ್ಯೆಗೀಡಾಗಿದ್ದಾರೆ. ಇಸ್ರೇಲಿಗರು ಸುರಕ್ಷಿತರಾಗಿರಲು ಬಯಸುತ್ತಾರೆ. ಖಂಡಿತ ನಾನೂ ಅದನ್ನೇ ಬಯಸುತ್ತೇನೆ. ಆದರೆ ಅವರು ತಮ್ಮ ಅಕ್ರಮಗಳನ್ನು ನಿಲ್ಲಿಸದೇ ಹಾಗೊಂದು ಬಯಕೆ ಬಯಸುವುದು ಸಲ್ಲ. ನೆತನ್ಯಾಹು ಬಹಿರಂಗವಾಗಿ ಗಾಝಾದಿಂದ ಜನರು ಮನೆ ತೊರೆದು ಹೊರ ಹೋಗಬೇಕೆಂದು ಕರೆ ನೀಡಿದ್ದಾರೆ.

ಇದು ಜನಾಂಗೀಯ ಶುದ್ದಿಯ ದಾಹ. ಈ ಕ್ರಿಮಿನಲ್ ಕೃತ್ಯ ಎಸಗಿದರೆ ಎಲ್ಲಿಗೆ ಹೋಗಬೇಕು.? ಸಮುದ್ರಕ್ಕೋ.!? ಇದಕ್ಕೆ ಪುಷ್ಟಿ ನೀಡುವಂತೆ ಅವರ ವಕ್ತಾರರು ಗಾಝಾದ ಮಂದಿ ಈಜಿಪ್ಟ್ ಗೆ ವಲಸೆ ಹೋಗುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ 1948 ರಲ್ಲಿ ಒಂದು ಬಾರಿ ಜನಾಂಗೀಯ ಶುದ್ದಿಗೊಳಗಾಗಿ ಫೆಲೆಸ್ತೀನಿಗಳು ದೇಶ ತೊರೆದಿದ್ದಾರೆ. ಇದು ಅದರ ಮುಂದುವರಿದ ಭಾಗವಾಗಿದೆ.

ನೆತನ್ಯಾಹುವಿನ ಇಸ್ರೇಲ್ ನ ಭೂಪಟ ಬದಲಿಸಿದ ಕೃತ್ಯಕ್ಕೆ ಪೂರಕವಾಗಿ ಈ ವಿದ್ಯಮಾನಗಳು ನಡೆಯುತ್ತಿರುವುದಾಗಿ ಭಾವಿಸುತ್ತೇನೆ. ಈ ಎಲ್ಲಾ ವಿದ್ಯಮಾನಕ್ಕೆ ಇರುವ ಪರಿಹಾರ ಒಂದೇ , ಅಕ್ರಮವಾಗಿ ವಸಾಹತು ನಿರ್ಮಿಸುತ್ತಿರುವ ಇಸ್ರೇಲ್ ನ ಕೃತ್ಯಕ್ಕೆ ಅಂತ್ಯ ಹಾಡಬೇಕು. ಒಂದು ವಿಚಾರ ನೆನಪಿಟ್ಟು ಕೊಳ್ಳಬೇಕು, ಈ ದಾಳಿಗೂ ಮೊದಲು ಅದೆಷ್ಟೋ ಶಾಂತಿಯುತ ಹೋರಾಟ ನಡೆದಿದೆ.

ವಿಶ್ವಸಂಸ್ಥೆಯಲ್ಲಿ ಅನೇಕ ಬಾರಿ ವಿಚಾರ ಪ್ರಸ್ತಾಪವಾಗಿದೆ. ಅದೆಷ್ಟೋ ಸಂಧಾನ ಒಪ್ಪಂದ ನಡೆದಿದೆ. ಆದರೆ ಇಸ್ರೇಲ್ ತನ್ನ ನಿರ್ಮಾಣ ಕಾರ್ಯಕ್ಕೆ ಕೊನೆಗಾಣಿಸಲೇ ಇಲ್ಲ.! ತನ್ನ ಪ್ರಜೆಗಳಿಗೆ ಶಸ್ತ್ರಾಸ್ತ್ರ ಬಳಸುವ ಅಧಿಕಾರವನ್ನು ನೀಡುವ ಮೂಲಕ ಸಂಘರ್ಷವನ್ನು ಹೆಚ್ಚಿಸಿತು. ಇದರಲ್ಲಿ ಜನಾಂಗೀಯ ತಾರತಮ್ಯ ಎಸಗುತ್ತಿರುವ ಮಿ. ಬೈಡನ್ ಕೈವಾಡವನ್ನು ಕ್ಷಮಿಸಿ ನಾನು ಹೇಳಲೇಬೇಕಾಗುತ್ತದೆ.

ನಾನು ಎರಡೂ ಕಡೆಯ ನಾಗರಿಕರ ಹತ್ಯೆಗೆ ವಿರೋಧಿಯಾಗಿದ್ದೇನೆ. ಆದರೆ ಇಸ್ರೇಲ್ ಬೃಹತ್ ಯುದ್ದ ಭೂಮಿಕೆಗೆ ಹೊರಟಿದೆ. ಅದು ಸಂಭವಿಸಿದ್ದಲ್ಲಿ ಒಟ್ಟಾರೆ ಪರಿಸ್ಥಿತಿ ಕೈ ಮೀರಲಿದೆ. ಈಗ ನಮಗೆ ಸಂತುಲಿತ ಪ್ರತಿಕ್ರಿಯೆಯ ಅಗತ್ಯವಿದೇ ಹೊರತು ಸೇಡು ತೀರಿಸುವ ಸಮಯ ಇದಲ್ಲ. ಎಲ್ಲದಕ್ಕೂ ವಿಶ್ವದ ಎದುರು ಫೆಲೆಸ್ತೀನಿಗಳನ್ನು ಮಾತ್ರ ಅಪರಾಧಿಗಳಂತೆ ಚಿತ್ರಿಸುವುದು ನಿಲ್ಲಿಸಬೇಕು.

ನನ್ನ ಪ್ರಕಾರ ನೆತನ್ಯಾಹು ಅತೀ ಭ್ರ‍ಷ್ಟ, ತನ್ನ ಪ್ರಜೆಗಳ ರಕ್ಷಣೆಯನ್ನೇ ಬಯಸದ, ಸಮಯ ಸಾಧಕ ರಾಜಕಾರಣಿ. ತನ್ನ ರಾಜಕೀಯ ಲಾಭಕ್ಕಾಗಿ ಸಂಧಾನ ಬದಿಗಿರಿಸಿ ಪ್ರಚೋದಿತ ಮಾತುಗಳ ಮೂಲಕ-ಪ್ರವೃತಿಗಳ ಮೂಲಕ ಪರಿಸ್ಥಿತಿ ಬಿಗಡಾಯಿಸುತ್ತಿದ್ದಾರೆ. ಇಸ್ರೇಲ್ ನ ಜೈಲುಗಳಲ್ಲಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಸಾವಿರಾರು ಪ್ರಜೆಗಳ ಬಗ್ಗೆ ಕನಿಕರವಿಲ್ಲದೆ, ಎಲ್ಲಾ ವೈಫಲ್ಯತೆಯನ್ನು ಹೊತ್ತು ಅಧಿಕಾರ ನಡೆಸುತ್ತಿರುವುದು ತನ್ನ ತಪ್ಪುಗಳನ್ನು ಮರೆಮಾಚಲು, ತನ್ನ ಎದುರು ಬರುವ ಹಕ್ಕು ಉಲ್ಲಂಘನೆಯ ಪ್ರಕರಣದಿಂದ ರಕ್ಷಿಸಲು ಈ ಕೃತ್ಯಗಳನ್ನು ಮತ್ತೆ ಮತ್ತೆ ನಡೆಸುತ್ತಿದ್ದಾರೆ. ಇಸ್ರೇಲ್ ನ ಹಣಕಾಸು ಸಚಿವರು ಫೆಲೆಸ್ತೀನಿಗರು ಒಂದೋ ನಾಡು ತೊರೆಯಬೇಕು, ಇಲ್ಲ ಇಸ್ರೇಲ್ ಸರಕಾರ ಅಧೀನದಲ್ಲಿರಬೇಕು ಅಥವಾ ಮರಣ ಇದಿರುಗೊಳ್ಳಿ ಎಂದಾಗ ಯಾವ ವಿರೋಧವೂ ವ್ಯಕ್ತವಾಗಿಲ್ಲ.! ಇಂತಹ ಫ್ಯಾಸಿಸ್ಟ್ ಸರಕಾರ, ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸುತ್ತಲೇ ಇಲ್ಲ.

ನನ್ನ ಪ್ರಶ್ನೆ ಸರಳ, ಯಾಕೆ ಈ ದ್ವಂದ ನಿಲುವು.? ರಶ್ಯಾದ ವಸಾಹತುಶಾಹಿ ಧೋರಣೆಗೆ ವಿರುದ್ದವಾಗಿ ಉಕ್ರೇನ್ ಗೆ ಯುರೋಪಿಯನ್ ಯೂನಿಯನ್ ಬೆಂಬಲ ನೀಡುತ್ತದೆ, ಆದರೆ ಇಸ್ರೇಲ್ ನಲ್ಲಿ ಇದರ ವೈರುದ್ಯ , ಅಲ್ಲಿ ಸಂತ್ರಸ್ತರನ್ನು ಬೆಂಬಲಿಸಿತು, ಇಲ್ಲಿ ಸಂತ್ರಸ್ತರ ವಿರುದ್ದ.?! ನೋಡಿ, ಗಾಝಾದ ವಿರುದ್ದ ಯುದ್ದ ಕೊನೆಗೊಳಿಸಲು ವೆಸ್ಟ್ ಬ್ಯಾಂಕ್ ನಲ್ಲಿ ಶಾಂತಿಯುತ ಪ್ರತಿರೋಧ ನಡೆಯುತ್ತಿದೆ.

ಆದರೆ ಇಸ್ರೇಲ್ ಸರಕಾರ ಗನ್ ಫೈರ್ ಮೂಲಕ 20 ಕ್ಕೂ ಅಧಿಕ ಮಂದಿಯನ್ನು ಕೊಲ್ಲಲಾಗಿದೆ. ಎಂಟು ತಿಂಗಳ ಹಿಂದೆ ಗಾಝಾದಲ್ಲಿ 200 ಕ್ಕೂ ಅಧಿಕ ಫೆಲೆಸ್ತೀನ್ ಗಳನ್ನು ಕೊಲ್ಲಲಾಗಿದೆ. ಪ್ರಸ್ತುತ ವೆಸ್ಟ್ ಬ್ಯಾಂಕ್ ನ ಅನೇಕ ರಸ್ತೆಗಳನ್ನು ಮುಚ್ಚಳಾಗಿದೆ.600 ಕ್ಕೂ ಅಧಿಕ ಮಿಲಿಟರಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಒಟ್ಟಾರೆ ಫೆಲೆಸ್ತೀನ್ ಗಳು ಯುದ್ದ ಖೈದಿಗಳಂತೆ ಬದುಕುತ್ತಿದ್ದಾರೆ. ಭಯಾನಕ ಅಂದರೆ ಫೆಲೆಸ್ತೀನ್ ಗಳಿಗೆ ಕೇವಲ ಸೈನ್ಯ ಮಾತ್ರ ಎದುರಿಸಬೇಕಾದದ್ದಲ್ಲ, ಅಲ್ಲಿ ನೆಲೆಸಿರುವ ಶಸ್ತ್ರ ಸಜ್ಜಿತ ಇಸ್ರೇಲ್ ಪ್ರಜೆಗಳನ್ನೂ ಎದುರಿಸಬೇಕಾಗಿದೆ. ಈಜಿಪ್ಟ್ ನ ಮುಂದೆ ಪ್ರಮುಖ ಜವಬ್ದಾರಿ ಇದೆ. ಇಸ್ರೇಲ್ ನ ಜನಾಂಗೀಯ ಶುದ್ದಿಯ ಉದ್ದೇಶವನ್ನು ತಡೆಯಬೇಕಿದೆ. ಗಾಝಾದ ತೆರವುವಿಕೆಯಲ್ಲಿ ಇಸ್ರೇಲ್ ಯಶಸ್ವಿಯಾದರೆ ಮುಂದೆ ಅದು ವೆಸ್ಟ್ ಬ್ಯಾಂಕ್ ಗೂ ಲಗ್ಗೆಯಿಡುತ್ತೆ, ಇದು ಉತ್ಪ್ರ‍ೇಕ್ಷೆಯಲ್ಲ. ನಡೆದು ಬರುತ್ತಿರುವ ಹಾದಿ .ಇದನ್ನು ತಡೆಯಬೇಕಿದೆ. ಈಜಿಪ್ಟ್ ಈ ನಿಟ್ಟಿನಲ್ಲಿ ಮುಂದಡಿಯಿಡಬೇಕಿದೆ. ನಮ್ಮ ಪಕ್ಷ ಗಾಝಾದ ಸಹಕಾರಕ್ಕೆ ಬದ್ದವಾಗಿದೆ. ಆದರೆ ಇಸ್ರೇಲ್ ಸಹಕಾರ ನೀಡುವುದಕ್ಕೆ ಬೆದರಿಕೆ ನೀಡಿದೆ. ನಮ್ಮ ಮುಂದಿರುವ ಹಾದಿ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಫೆಲೆಸ್ತೀನ್ ಅಸ್ಮಿತೆಗೆ ಹೋರಾಡುವುದಾಗಿದೆ ಎಂದು ಡೆಮೋಕ್ರಾಸಿ ನೌ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು.