ಪುತ್ತೂರಿನಲ್ಲಿ ನವೆಂಬರ್ 17ರಂದು ಜಮಾಅತೆ ಇಸ್ಲಾಮೀ ಹಿಂದ್ ಸೀರತ್ ಅಭಿಯಾನ ಸಮಾರೋಪ

0
684

ಸನ್ಮಾರ್ಗ ವಾರ್ತೆ

ಪುತ್ತೂರು, ಅ.13: ಪ್ರವಾದಿ ಮುಹಮ್ಮದ್ (ಸ.) ಪೈಗಂಬರ್‌ರ ಜನ್ಮ ಮಾಸದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಹಮ್ಮಿಕೊಂಡಿರುವ ದ.ಕ. ಜಿಲ್ಲಾ ಮಟ್ಟದ ಸೀರತ್‌ ಅಭಿಯಾನದ ಸಮಾರೋಪವು ನವೆಂಬರ್ 17ರಂದು ಸಂಜೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪ ಸಂಚಾಲಕ ಅಮೀನ್‌ ಹಸನ್
ಮತ್ತು ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ ತಿಳಿಸಿದ್ದಾರೆ. ಅವರು ಶುಕ್ರವಾರ ಜಮಾಅತೆ ಇಸ್ಲಾಮೀ ಹಿಂದ್‌ ವತಿಯಿಂದ ನಗರದ ಅಶ್ಮೀ ಕಂಫರ್ಟ್‌ ಸಭಾಂಗಣದಲ್ಲಿ ನಡೆದ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ನ.17ರಂದು ಸಂಜೆ 6:30ರಿಂದ ರಾತ್ರಿ 8:30ರ ತನಕ ನಡೆಯುವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರವಾದಿ ಮುಹಮ್ಮದ್‌ ಪೈಗಂಬರ್, ಸ್ವಾಮಿ ವಿವೇಕಾನಂದ, ಬ್ರಹ್ಮಶ್ರೀ ನಾರಾಯಣ ಗುರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದ ಮಾನವತಾವಾದಿಗಳ ಆದರ್ಶ, ಚಿಂತನೆಗಳ ಬಗ್ಗೆ ಆಯಾ ವರ್ಗದ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಸುಮಾರು 800 ರಿಂದ 1 ಸಾವಿರದಷ್ಟು ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶಾಂತಿ ಪ್ರಕಾಶನವು ಪ್ರವಾದಿ ಜೀವನ ಸಂದೇಶದ ಸಾಹಿತ್ಯಗಳನ್ನು ಬಿತ್ತರಿಸುತ್ತಿದೆ. ಈ ವರ್ಷದ ಅಭಿಯಾನದಲ್ಲಿ ಯೋಗೇಶ್‌ ಮಾಸ್ಟರ್ ಅವರ ‘ನನ್ನ ಅರಿವಿನ ಪ್ರವಾದಿ’ ಎಂಬ ಕೃತಿಯನ್ನು ಹಂಚಲಾಗುತ್ತಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಹಾರೂನ್ ತಿಳಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಉಪ್ಪಿನಂಗಡಿ ಶಾಖೆಯ ಅಧ್ಯಕ್ಷ ಅಬ್ದುಲ್‌ ಹಸೀಬ್‌ ಉಪಸ್ಥಿತರಿದ್ದರು.