ಸನ್ಮಾರ್ಗ ವಾರ್ತೆ
✍️ಅರಫಾ ಮಂಚಿ
ರಾಹುಲ್ ಗಾಂಧಿಯ ಭಾರತ್ ನ್ಯಾಯ ಯಾತ್ರೆ ಮತ್ತು ಪ್ರಧಾನಿಯ ರಾಮ ವಿಗ್ರಹ ಪ್ರತಿಷ್ಠಾಪನೆ ನಡುವೆ ಪೈಪೋಟಿ ಇದೆ ಎಂಬ ಚರ್ಚೆ ನಡೆಯುತ್ತಿದೆ. ರಾಹುಲ್ ಯಾತ್ರೆ ಮಣಿಪುರದಿಂದ ಹೊರಟಾಗಿದೆ. ಇನ್ನು 22ನೇ ತಾರೀಕಿಗೆ ರಾಮ ವಿಗ್ರಹ ಪ್ರತಿಷ್ಠಾಪನೆ ಇಲ್ಲಿ ಟಕ್ಕರ್ ಏನು?
ಬಹುತೇಕ ಇವೆರಡೂ ಬೇರೆ ಬೇರೆ ವಿಚಾರದಂತೆ ಕಂಡು ಬಂದರೂ ಎಲ್ಲರಿಗೂ ಇದರಲ್ಲಿರುವ ರಾಜಕೀಯ ಪೈಪೋಟಿ ಗೊತ್ತು. ಹಾಗೆ ಹೇಳಬೇಕೆಂದರೆ, ಭಾರತ್ ನ್ಯಾಯ್ ಯಾತ್ರೆಯು ರಾಮ ವಿಗ್ರಹ ಪತಿಷ್ಠಾಪನೆಯ ಮೊದಲು ಶುರುವಾಗುವುದನ್ನು ಬಿಜೆಪಿ ಬಯಸಿರಲಿಲ್ಲ. ಯಾಕೆಂದರೆ ಇಡೀ ದೇಶಕ್ಕೆ ಬಿಜೆಪಿ ಮೋದಿಯನ್ನೇ ಬಿಂಬಿಸಲು ನೋಡುತ್ತದೆ. ಹೀಗಾಗಿ ರಾಹುಲ್ ಗಾಂಧಿ ಯಾತ್ರೆ ಶುರುವಾಗುವ ಅರಮನೆ ಗ್ರೌಂಡ್ ಅನ್ನೇ ಕಾರ್ಯಕ್ರಮಕ್ಕೆ ಮಣಿಪುರದ ಬಿರೇನ್ ಸರಕಾರ ನಿರಾಕರಿಸಿತು. ಅತ್ತ ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಶ್ವ ಶರ್ಮ ನ್ಯಾಯ ಯಾತ್ರೆ ಗುವಾಹಟಿಯಲ್ಲಿ ಎಲ್ಲಿಯೂ ನಿಲ್ಲಬಾರದು ಎಂದರು. ಗುವಾಹಟಿಯ ಒಳಗೆ ಬರಬಾರದು. ಯಾಕೆಂದರೆ ಅಲ್ಲಿ ಶಾಲೆ-ಕಾಲೇಜು ಇತ್ಯಾದಿ ಇದೆ, ತೊಂದರೆ ಆಗುತ್ತದೆ ಎಂದರು. ರಾಹುಲ್ರ ಯಾತ್ರೆ ಹೋಗುವ ಬೇರೆಲ್ಲೆಲೂ ಶಾಲಾ ಕಾಲೇಜುಗಳಿರಲ್ವಾ? ಬರೇ ಹೈವೇಯಲ್ಲಿ ಯಾತ್ರೆ ಹೊರಟು ಹೋಗಲಿ ಎಂದರು.
ಮುಖ್ಯವಾಗಿ ಬಿಜೆಪಿ ರಾಜ್ಯಗಳಲ್ಲಿ ನ್ಯಾಯ್ ಯಾತ್ರೆ ಹೊರಟು ಹೋಗುತ್ತಿದೆ. ಬಿಜೆಪಿಯ ಅನ್ಯಾಯದ ಕತೆಗಳನ್ನು ಹೇಳುತ್ತಾ ತಿರುಗುವುದು ಅದಕ್ಕೆ ಮುಖಭಂಗವೇ. ಬೆಲೆಯೇರಿಕೆ, ನಿರುದ್ಯೋಗ, ಸಾಮಾಜಿಕ ನ್ಯಾಯ, ಒಬಿಸಿ, ಜಾತಿ ಜನಗಣತಿ ಇವ್ಯಾವುದೂ ಬಿಜೆಪಿಗೆ ಇಷ್ಟವಿರುವುದಲ್ಲ. ಅರ್ಧದಲ್ಲಿಯೇ ಈ ಯಾತ್ರೆಯನ್ನು ತಡೆಯಲು ಇವರು ಶಕ್ತಿ ಹಾಕಬಹುದು. ಆದರೆ ರಾಹುಲ್ ಗಾಂಧಿ ಮೇಲೆ ಶಕ್ತಿ ಪ್ರಯೋಗಿಸಿದರೆ ಜನರು ಪ್ರತೀಕಾರಕ್ಕಿಳಿಯಬಹುದು ಎಂಬ ಭಯದಿಂದ ಮಾತ್ರ ಅದು ಸುಮ್ಮನಿರಬೇಕಾಗಿದೆ.
ಅಂದಹಾಗೆ, ರಾಮಮಂದಿರ ಉದ್ಘಾಟನೆ ಸಮಾರಂಭವನ್ನು ಕಾಂಗ್ರೆಸ್ ಬಹಿಷ್ಕರಿಸಿದ್ದು ಬಿಜೆಪಿಗೆ ತೊಂದರೆ ಏನಿಲ್ಲ. ಕಾಂಗ್ರೆಸ್ ರಾಮ ವಿರೋಧಿ ಎಂದು ಪ್ರಚಾರ ಮಾಡಲು ಸಿಕ್ಕಿದ ಪ್ರಬಲ ಅಸ್ತ್ರವೇ ಅದು. ಆದರೆ ಧರ್ಮಾಚಾರ್ಯರೆಂದು ಭಾರತದಲ್ಲಿ ಪ್ರಸಿದ್ಧವಾಗಿರುವ ನಾಲ್ವರು ಶಂಕರಾಚಾರ್ಯರು ರಾಮಮಂದಿರ ಉದ್ಘಾಟನೆಯ ಕ್ರಮವನ್ನು ಪ್ರಶ್ನಿಸಿದ್ದು ಬಿಜೆಪಿಗೆ ದೊಡ್ಡ ಆತಂಕವಾಗಿದೆ. ರಾಮಮಂದಿರದ ಕೆಲಸ ಪೂರ್ತಿ ಮಾಡದೆ ರಾಮಮಂದಿರ ಉದ್ಘಾಟಿಸಲಾಗದು ಎಂದಿದ್ದಾರೆ ಅವರು. ಹಾಗೆಯೇ ಮೋದಿ ರಾಮ ಪ್ರತಿಮೆ ಪ್ರತಿಷ್ಠಾಪಿಸಲು ಅರ್ಹ ವ್ಯಕ್ತಿ ಅಲ್ಲ ಎಂಬುದಾಗಿ ಒಂದಷ್ಟು ಒಳಮಾತುಗಳು ಕೂಡ ಬೇರೆಯೇ ಇವೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಯತಿಗಳು, ಯೋಗಿಗಳು ಮಾಡ ಬೇಕಾಗುತ್ತದೆ ಎಂದು ಇನ್ನೊಂದು ಅಭಿಮತವೂ ಇದೇ.
ಬಿಜೆಪಿಯ ದುರದೃಷ್ಟ ನೋಡಿ, ದೇಶದ ನಾಲ್ಕಕ್ಕೆ ನಾಲ್ಕು ಶಂಕರಾಚಾರ್ಯರೂ ರಾಮ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ಸಂಘ ಪರಿವಾರಕ್ಕೆ ಇವರಲ್ಲಿ ಒಬ್ಬರನ್ನು ಒಪ್ಪಿಸಲು ಸಾಧ್ಯವಾಗಿದ್ದರೂ ಕಾರ್ಯಕ್ರಮ ಭರ್ಜರಿಯಾಗಿಯೇ ಇರುತ್ತಿತ್ತು.
ಇದು ಕಾಂಗ್ರೆಸ್ ಅನ್ನು ಬಿಜೆಪಿಯ ರಾಮಮಂದಿರ ಉದ್ಘಾಟನೆಯ ರಭಸಕ್ಕೆ ಕೊಚ್ಚಿ ಹೋಗದಂತೆ ಕಾಪಾಡಿದೆ ಎಂದೇ ಹೇಳಬೇಕು. ಇದೀಗ ಮೋದಿ ಮಂದಿರ ಕಾರ್ಯಕ್ರಮಕ್ಕೆ ಅಖಿಲೇಶ್, ಉದ್ಧವ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಪ್ರತಿಪಕ್ಷದವರು ಹೋಗುವುದಿಲ್ಲ. ಈಗ ಶಂಕರಾಚಾರ್ಯರ ಬಹಿಷ್ಕಾರದ ವಿಚಾರದಲ್ಲಿ ಪ್ರತಿಪಕ್ಷದ ಇಂಡಿಯ ಕೂಟ ತನ್ನ ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರವನ್ನು ಹೆಣೆಯಬೇಕು.
ದಲಿತರ ವೋಟುಗಳನ್ನು ಗಳಿಸಿಕೊಳ್ಳುವಲ್ಲಿ ಇಂಡಿಯ ಕೂಟ ಪ್ರಯತ್ನಿಸಬೇಕು. ಹೀಗಾಗಬೇಕಾದರೆ ಕಾಂಗ್ರೆಸ್ ಸಹಿತ ಪ್ರಮುಖ ಪಕ್ಷಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ದಲಿತ, ಮುಸ್ಲಿಂ ಮುಖಗಳಿಗೆ ಪ್ರಾಮುಖ್ಯತೆ ಸಿಗಬೇಕು. ಹಿಂದುಳಿದ ಅರ್ಹರಿಗೆ ಮುಖ್ಯ ಸ್ಥಾನ ನೀಡಬೇಕಾಗಿದೆ. ರಾಜಕೀಯದಲ್ಲಿಯೂ ನ್ಯಾಯ ಆಗಬೇಕೆಂದು ರಾಹುಲ್ ಗಾಂಧಿ ಪ್ರತಿಪಾದಿಸುತ್ತಾರಲ್ಲ. ಹಾಗಾಗಿ ಎಲ್ಲ ಪಾರ್ಟಿಗಳು ಈ ಸ್ಟ್ರಾಟಜಿಯನ್ನು ಸ್ವೀಕರಿಸಬೇಕಾಗಿದೆ.
ಬಿಜೆಪಿಯನ್ನೇ ನೋಡಿ, ಅದಕ್ಕೆ 2024ರ ಚುನಾವಣೆ ಗೆಲ್ಲುವುದೇ ಮುಖ್ಯ ವಿಷಯವಾಗಿದೆ. ಛತ್ತೀಸ್ಗಡದಲ್ಲಿ ಆದಿವಾಸಿ ಮುಖ್ಯಮಂತ್ರಿ, ಮಧ್ಯಪ್ರದೇಶದಲ್ಲಿ ಯಾದವ್ ಮುಖ್ಯಮಂತ್ರಿ ಮಾಡಿದ್ದು ಚುನಾವಣೆ ಗೆಲ್ಲುವ ವಿಚಾರವೊಂದಕ್ಕೇ ಆಗಿದೆ ಎಂಬುದು ಸ್ಪಷ್ಟ. ಮೇಲ್ವರ್ಗದ ಪಾರ್ಟಿ ಬಿಜೆಪಿ ಹೀಗೆ ಮಾಡುವುದಾದರೆ ಪ್ರತಿಪಕ್ಷಗಳು ಕೂಡ ಗೆಲ್ಲುವುದಕ್ಕೆ ಹೀಗೆ ಮಾಡಬೇಕಾಗುತ್ತದೆ. ಇದಕ್ಕಾಗಿ ದೇಶದಲ್ಲಿ ದಲಿತ, ಮುಸ್ಲಿಂ ಮತದಾರರನ್ನು ಇಂಡಿಯ ಕೂಟದ ಪಾರ್ಟಿಗಳು ಓಲೈಸಿದರೆ ತಪ್ಪೇನಿದೆ? ಅವರೂ ದಲಿತ ಸಹಿತ ಒಬಿಸಿ ಮತಗಳನ್ನು ಹಿಂದುತ್ವದ ಟ್ರೇಡ್ನಿಂದ ಬಿಡಿಸಲು ವಿಪಕ್ಷಗಳು ಸಮರ್ಥವಾಗಬೇಕು ಅಷ್ಟೇ.
ಇಲ್ಲಿ ಕಾಂಗ್ರೆಸ್ನ ಬಲಪಂಥೀಯ ಮುಖಗಳು ಕಾಂಗ್ರೆಸ್ಗೆ ದೊಡ್ಡ ತೊಡಕು ಆಗಿದೆ. ಮಧ್ಯಪ್ರದೇಶದಲ್ಲಿ ಕಮಲನಾಥ್, ಹಿಮಾಚಲ, ಗುಜರಾತ್ ನಲ್ಲಿ ಕೆಲವು ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಹೈಕಮಾಂಡಿನ ನಿರ್ಧಾರಕ್ಕೆ ಸವಾಲು ಹಾಕಿದ್ದಾರೆ. ಇಂತಹವರ ಬಿಗಿ ಹಿಡಿತದಿಂದ ಕಾಂಗ್ರೆಸ್ ಅನ್ನು ಪಾರು ಮಾಡಬೇಕಾದ ಅಗತ್ಯ ಇದೆ.
ಹಾಗೆ ಹೇಳುವುದಾದರೆ ಇಡೀ ಭಾರತದಲ್ಲಿ ಇಂಡಿಯ ಕೂಟಕ್ಕೆ ದಲಿತ-ಮುಸ್ಲಿಂ- ಹಿಂದುಳಿದವರ್ಗ ವೋಟು ಗಳಿಕೆಯ ತಂತ್ರ ಗೆಲ್ಲಲು ಮುಖ್ಯವಾಗಿದೆ. ಅದಕ್ಕೆ ಉತ್ತರಪ್ರದೇಶದ ಮಾದರಿ ಲೆಕ್ಕವನ್ನು ಎತ್ತಿಕೊಳ್ಳೋಣ. ಅಲ್ಲಿ ಮುಸ್ಲಿಮರು 20%, ದಲಿತರು 20%, ಯಾದವರು 15% ಇದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಇತ್ತು. ಪೂಲ್ವಾಮ ಇತ್ತು. ಇಂತಹ ಅನುಕೂಲಕರ ಸ್ಥಿತಿ ಇದ್ದೂ ಆಗ ಬಿಜೆಪಿ ಶೇ. 39% ವೋಟು ಮಾತ್ರ ಗಳಿಸಿದೆ. ದಲಿತ, ಮುಸ್ಲಿಂ, ಯಾದವರ ವೋಟು ಸೇರಿಸಿದರೆ 55% ಆಗುತ್ತದೆ. ಸಲೀಸಾಗಿ ಇಂಡಿಯ ಕೂಟ ಗೆಲ್ಲುತ್ತದೆ.
ವಿಷಯ ಬದಲಿಸೋಣ:
ಬಿಲ್ಕಿಸ್ ಬಾನು ಪ್ರಕರಣದ ಹನ್ನೊಂದು ಆರೋಪಿಗಳಲ್ಲಿ ಒಂಬತ್ತು ಮಂದಿ ಆರೋಪಿಗಳು ತಮ್ಮ ಮನೆಯಿಂದಲೇ ನಾಪತ್ತೆಯಾಗಿದ್ದಾರೆ. ಹತ್ಯೆಕೋರ ಅಪರಾಧಿಗಳನ್ನು ಮಾಫಿ ಮಾಡಿತ್ತು ಗುಜರಾತ್ ಸರಕಾರ. ಇಂತಹ ಸರಕಾರ ಇರುವ ಗುಜರಾತಿನಿಂದಲೇ ಇವರು ತೀರ್ಪು ಬರುತ್ತಿದ್ದಂತೆ ಮನೆಗೆ ಬೀಗ ಹಾಕಿ ತಪ್ಪಿಸಿಕೊಡಿದ್ದಾರೆ.
ಮುಸ್ಲಿಂ ಹೆಸರಿರುವುದೇ ಬಿಜೆಪಿ ಸಹಿತ ಸಂಘಪರಿವಾರಕ್ಕೆ ಆಗುವುದಿಲ್ಲ. ಅದರಂತೆ ಮೋದಿ ಸರಕಾರ ಅಲಿಗಢ ಮುಸ್ಲಿಂ ಯುನಿವರ್ಸಿಟಿಯ ಮುಸ್ಲಿಂ ಸ್ಥಾನಮಾನವನ್ನೇ ಕಿತ್ತುಕೊಳ್ಳಲು ಹೊರಟಿದೆ. ಆದರೆ ಈಗ ಸುಪ್ರೀಂಕೋಟಿನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮೇಲ್ತುದಿಗೆ ಬಂದಿದೆ. 1877ರಲ್ಲಿ ಸರ್ ಸಯ್ಯಿದ್ ಅಹ್ಮದ್ ಖಾನ್ ಸ್ಥಾಪಿಸಿದ ವಿವಿ ಇದು. ಮನ್ಮೋಹನ್ ಸಿಂಗ್ ಸರಕಾರ 2006ರಲ್ಲಿ ಅಫಿದಾವಿತ್ ಸಲ್ಲಿಸಿ ಯುನಿವರ್ಸಿಟಿಯ ಅಲ್ಪಸಂಖ್ಯಾತ ಸ್ಥಾನಮಾನ ಮುಂದುವರಿಯಲು ಅವಕಾಶ ಕಲ್ಪಿಸಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಅಪಿಧಾವಿತ್ ವಾಪಸು ಪಡೆಯಿತು. ಈಗ ಕೋರ್ಟಿನಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಬೇಕಾ ಬೇಡವಾ ಎಂದು ನಿರ್ಣಯವಾಗಲಿಕ್ಕಿದೆ.
ದೇಶದಲ್ಲಿ ಮುಸ್ಲಿಮರ ಶೈಕ್ಷಣಿಕ ಉನ್ನತಿಗೆ ಅಲಿಗಢ ಮುಸ್ಲಿಂ ಯುನಿವರ್ಸಿಟಿ ಬಹುದೊಡ್ಡ ಕೊಡುಗೆ ನೀಡಿದೆ. ಅದರಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇತ್ತು.
ವಿಷಯಕ್ಕೆ ಬರೋಣ
ಉತ್ತರಪ್ರದೇಶದಲ್ಲಿ 2019ರಲ್ಲಿ ಬಿಜೆಪಿ 62 ಸೀಟು ಗೆದ್ದಿತ್ತು. 80 ಸೀಟುಗಳಲ್ಲಿ ಬಿಎಸ್ಪಿಗೆ 20, ಸಮಾಜವಾದಿಗೆ 20, ಕಾಂಗ್ರೆಸ್ಸಿಗೆ 10, ರಾಷ್ಟ್ರೀಯ ಲೋಕದಳಕ್ಕೆ 8, ಅಪ್ನಾ ದಳಕ್ಕೆ1, ಚಂದ್ರಶೇಖರ್ ಆಝಾದ್ ಪಾರ್ಟಿಗೆ 1 ಸೀಟು ಇದು ಬಿಎಸ್ಪಿ ಮುಂದಿಟ್ಟ ಲೆಕ್ಕವಾಗಿದೆ. ಒಬಿಸಿ ಲೆಕ್ಕಾಚಾರಗಳಲ್ಲಿ ಮಾಸ್ಟರ್ ಮೈಂಡ್ ಆಗಿರುವ ನಿತೀಶ್ ಕುಮಾರ್ರ ಸಹಾಯ ಕಾಂಗ್ರೆಸ್ ಪಡೆಯಬೇಕು. ಬಿಗುಮಾನ ಬಿಡಬೇಕು. ಹೇಗೂ ವಿಪಕ್ಷಗಳ ಪ್ರಧಾನಿ ಸ್ಥಾನಕ್ಕೆ ನಿತೀಶ್ ಕುಮಾರ್ ಅಘೋಷಿತ ಅಭ್ಯರ್ಥಿಯಾಗಿದ್ದಾರೆ. ಜೊತೆಗೆ ಇಂಡಿಯದ ಹಿಂದುತ್ವವಾದಿ ಮುಖ ಉದ್ಧವ್ ಠಾಕರೆ, ಸಂಜಯ್ ರಾವುತ್ರನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬೇಕಾಗಿದೆ.
ಕೊನೆಯಲ್ಲಿ ಹೇಳುವುದಾದರೆ, ಈಗಾಗಲೇ ಆಮ್ ಆದ್ಮಿ, ಕಾಂಗ್ರೆಸ್ ಪಾರ್ಟಿ, ಮಹಾರಾಷ್ಟçದಲ್ಲಿ ಎನ್ಸಿಪಿ, ಉದ್ಧವ್ ಪಾರ್ಟಿ, ಕಾಂಗ್ರೆಸ್, ಜನ್ ವಂಚಿತ್ ಅಗಾಡಿ ನಡುವೆ ಲೋಕಸಭಾ ಸೀಟು ಹಂಚಿಕೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಇನ್ನು ಕೇರಳ, ಪಶ್ಚಿಮ ಬಂಗಾಳದ ಮುಖ್ಯವಾಗಿ ಇನ್ನಷ್ಟೇ ಸೀಟು ಹಂಚಿಕೆಯ ಪಾರ್ಮೂಲ ಹೊರ ಬರಬೇಕಾಗಿದೆ.












