ದಕ್ಷಿಣ ಕೊರಿಯಾ: ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಆತ್ಮಹತ್ಯೆ

0
2113

ಸನ್ಮಾರ್ಗ ವಾರ್ತೆ

ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವುದು ವಿಶ್ವಾದ್ಯಂತ ಚರ್ಚೆ ಹುಟ್ಟುಹಾಕಿದೆ. ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ.

ದಕ್ಷಿಣ ಕೊರಿಯಾದ ಗುಮಿ ನಗರ ಪಾಲಿಕೆಯಲ್ಲಿ ಆಡಳಿತಾತ್ಮಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಬೋರ್ಗ್ ರೋಬೋಟ್ ಜೂನ್ 26 ರಂದು ಆತ್ಮಹತ್ಯೆ ಮಾಡಿಕೊಂಡಿದೆ.

ಆರೂವರೆ ಅಡಿ ಎತ್ತರದ ಮೆಟ್ಟಿಲಿನಿಂದ ರೋಬೋಟ್‌ ಜಿಗಿದಿದೆ ಎನ್ನಲಾಗಿದ್ದು, ಪ್ರಾಣ ಕಳೆದುಕೊಳ್ಳುವ ಮುನ್ನ ಯಂತ್ರ ಮಾನವ ಗೊಂದಲಕ್ಕೆ ಒಳಗಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ರೋಬೋಟ್ ಅನ್ನು 2023ರ ಆಗಸ್ಟ್‌ನಲ್ಲಿ ಗುಮಿ ನಗರ ಪಾಲಿಕೆಗೆ ನೇಮಕ ಮಾಡಿಕೊಳ್ಳಲಾಗಿತ್ತು. ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ತಿಳಿಸಿರುವ ಅಧಿಕಾರಿಗಳು, ರೋಬೋಟ್‌ನ ಚದುರಿದ ತುಣುಕುಗಳನ್ನು ಸಂಗ್ರಹಿಸಿ ಹೆಚ್ಚಿನ ತನಿಖೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ರೋಬೋಟ್ ತುಂಬಾ ಕ್ರಿಯಾಶೀಲತೆಯನ್ನು ಹೊಂದಿತ್ತು. ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ನಿರಂತರವಾಗಿ ದಾಖಲೆಗಳ ವಿತರಣೆಗೆ ಸಹಾಯ, ಮಾಹಿತಿ ವಿತರಣೆ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಕೊರಿಯಾ ರೋಬೋಟ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಲ್ಲಿ ಬೇರೆಲ್ಲೂ ಇರದಷ್ಟು ರೋಬೋಟ್‌ಗಳು ಇಲ್ಲಿವೆ. ಆದರೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವುದು ತಂತ್ರಜ್ಞಾನ ಪರಿಣಿತರಲ್ಲಿ ಅಚ್ಚರಿ ಮೂಡಿಸಿದೆ.