ನೈತಿಕತೆಯೇ ಸ್ವಾತಂತ್ರ್ಯ, ಸ್ವೇಚ್ಛೆಯೇ ಬಂಧನ

0
1154

ಸನ್ಮಾರ್ಗ ವಾರ್ತೆ

✍️ ಲಬೀದ್ ಆಲಿಯಾ (ಅಧ್ಯಕ್ಷರು, ಸಾಲಿಡಾರಿಟಿ ಕರ್ನಾಟಕ)

ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು
ರಾಷ್ಟ್ರೀಯ ಮಟ್ಟದಲ್ಲಿ ಸೆಪ್ಟೆಂಬರ್ 1ರಿಂದ 30ರ ವರೆಗೆ ಹಮ್ಮಿಕೊಂಡಿರುವ `ನೈತಿಕತೆಯೇ ಸ್ವಾತಂತ್ರ್ಯ’ ಎಂಬ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ವಿಶೇಷ ಲೇಖನ

ನೈತಿಕತೆ, ಸಚ್ಚಾರಿತ್ರ‍್ಯತೆ, ಲಜ್ಜೆ, ಧಾರ್ಮಿಕ ಮೌಲ್ಯಗಳು ಮುಂತಾದ ವಿಷಯಗಳು ಪೋಸ್ಟ್ ಮೋಡರ್ನ್ ಕಾಲದಲ್ಲಿ ಅಪ್ರಸ್ತುತವಾದ ಆಶಯಗಳು ಎಂದು ಹೇಳುವ ದೃಷ್ಟಿಕೋನವು ಮುನ್ನೆಲೆಗೆ ಬರುತ್ತಿದೆ. ಲಿಬರಲಿಝಮ್ ಮುಂದಿಡುವ ಅನಿಯಂತ್ರಿತ ಸ್ವಾತಂತ್ರ‍್ಯದಿಂದ ಮನುಷ್ಯನು ಇನ್ನಷ್ಟು ಅಧಃಪತನದ ಹಾದಿ ಹಿಡಿಯುತ್ತಿದ್ದಾನೆ. ಮನುಷ್ಯನು ನೈಜ ಸ್ವಾತಂತ್ರ‍್ಯದಿಂದ ವಂಚಿತನಾಗಿ ಇನ್ನಷ್ಟು ಗುಲಾಮಗಿರಿಗೆ ತಳ್ಳಲ್ಪಡುತ್ತಿದ್ದಾನೆ.

ಸ್ವಾತಂತ್ರ‍್ಯವೆಂಬುದು ಬಹಳ ಉದಾತ್ತವಾದ ಆಶಯವಾಗಿದೆ. ಜಾತಿ, ಬಣ್ಣ, ದೇಶ, ಧರ್ಮ, ಸಿದ್ಧಾಂತ ಮತ್ತು ಲಿಂಗ ಬೇಧವೆನ್ನದೆ ಸ್ವಾತಂತ್ರ‍್ಯವು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು. ಮುಕ್ತ ಪರಿಸರದ ಮೂಲಕವೇ ವ್ಯಕ್ತಿಯು ಸಂಪೂರ್ಣ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುತ್ತಾನೆ. ಭಯ ಮತ್ತು ಪೂರ್ವಾಗ್ರಹಗಳಿಂದ ಮುಕ್ತವಾದ ಸಮಾಜದಿಂದ ಮಾತ್ರವೇ ಪ್ರತಿಭೆಗಳನ್ನು ಗುರುತಿಸಲು, ಅದನ್ನು ಪೋಷಿಸಲು ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯ.

ಪ್ರವಾದಿ(ಸ)ರ ನಿಯೋಗದ ಉದ್ದೇಶವೇ ಮನುಷ್ಯನನ್ನು ಎಲ್ಲಾ ತರದ ಗುಲಾಮಗಿರಿಯಿಂದ ವಿಮೋಚಿಸುವುದಾಗಿದೆ. ಈ ವಿಷಯವಾಗಿ ಪವಿತ್ರ ಕುರ್‌ಆನ್ ಹೀಗೆ ಹೇಳುತ್ತದೆ-
ಅವರು ನಿರಕ್ಷರಿ ಪ್ರವಾದಿಯನ್ನು ಅನುಸರಿಸುತ್ತಾರೆ. ಅವರ (ಆ ಪ್ರವಾದಿಯ) ಕುರಿತು ತಮ್ಮ ಬಳಿ ಇರುವ ತೌರಾತ್  ಮತ್ತು ಇಂಜೀಲ್‌ಗಳಲ್ಲಿ (ಈ ರೀತಿ) ಬರೆದಿರುವುದನ್ನು ಅವರು ಕಾಣುತ್ತಾರೆ; ‘‘ಅವರು (ಆ ಪ್ರವಾದಿ) ಅವರಿಗೆ, ಒಳಿತನ್ನು ಆದೇಶಿಸುವರು, ಅವರನ್ನು ಕೆಡುಕಿನಿಂದ ತಡೆಯುವರು, ನಿರ್ಮಲವಾದವುಗಳನ್ನು ಅವರ ಪಾಲಿಗೆ ಸಮ್ಮತಗೊಳಿಸುವರು, ಮಲಿನ ವಸ್ತುಗಳನ್ನು ಅವರ ಪಾಲಿಗೆ ನಿಷೇಧಿಸುವರು, ಅವರಿಂದ ಅವರ ಭಾರಗಳನ್ನು ಇಳಿಸುವರು ಮತ್ತು ಅವರ ಮೇಲಿದ್ದ ನೊಗಗಳನ್ನು ಕಳಚುವರು- ಅವರಲ್ಲಿ ನಂಬಿಕೆ ಇಟ್ಟು ಅವರನ್ನು ಸಮರ್ಥಿಸುವವರು, ಅವರಿಗೆ ನೆರವಾಗುವವರು  ಮತ್ತು ಅವರ ಜೊತೆಗೆ ಇಳಿಸಲಾಗಿರುವ ಪ್ರಕಾಶವನ್ನು ಅನುಸರಿಸುವವರೇ ವಿಜಯಿಗಳು.” (ಅಲ್ ಅಅï‌ರಾಫ್: 157).

ಅಂದರೆ ಇಸ್ಲಾಮ್ ಧರ್ಮವು ಮನುಷ್ಯನನ್ನು ಎಲ್ಲಾ ರೀತಿಯ ಗುಲಾಮಗಿರಿಯಿಂದ ವಿಮೋಚಿಸಿ ನೈಜ ಸ್ವಾತಂತ್ರ‍್ಯದ ಕಡೆಗೆ   ಮುನ್ನಡೆಸಲು ಬಯಸುತ್ತದೆ.

ರಿಬ್‌ಯಿ ಬಿನ್ ಆಮಿರ್ ರುಸ್ತಮನ ಆಸ್ಥಾನದಲ್ಲಿ ಹೇಳಿದ ಮಾತು ಇಸ್ಲಾಮಿನ ಸ್ವಾತಂತ್ರ‍್ಯ ಹಾಗೂ ವಿಮೋಚನೆಯ ಆಶಯವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ, “ನಾವು ಮನುಷ್ಯ ಕುಲವನ್ನು ಮನುಷ್ಯರ ಗುಲಾಮಗಿರಿಯಿಂದ ವಿಮೋಚಿಸಿ ಸೃಷ್ಟಿಕರ್ತನ ದಾಸ್ಯತ್ವದ ಕಡೆಗೂ, ಐಹಿಕ ಜೀವನದ ಸಂಕುಚಿತತೆಯಿಂದ ಇಹ ಪರಲೋಕದ ವಿಶಾಲತೆಯ ಕಡೆಗೂ, ಮಾನವ ನಿರ್ಮಿತ ಎಲ್ಲಾ ರೀತಿಯ ಸಂಪ್ರದಾಯ ಹಾಗೂ ಕಾನೂನು ಕಟ್ಟಳೆಗಳಿಂದ ವಿಮೋಚನೆಗೊಳಿಸಿ ಇಸ್ಲಾಮ್ ಪ್ರತಿಪಾದಿಸುವ ನ್ಯಾಯ ನೀತಿಯ ಕಡೆಗೆ ಮುನ್ನಡೆಸುವವರಾಗಿದ್ದೇವೆ.”

ಇನ್ನು ಉದ್ಭವಿಸುವ ಪ್ರಶ್ನೆ ಸ್ವಾತಂತ್ರ‍್ಯ ಎಂದರೇನು? ಅದರ ಮೇರೆಗಳನ್ನು ನಿರ್ಣಯಿಸುವುದು ಹೇಗೆ? ಮಾನವರನ್ನು  ಎಲ್ಲಾ ನಿರ್ಬಂಧಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಬಹುದೇ? ವೈಯಕ್ತಿಕ ಸ್ವಾತಂತ್ರ‍್ಯದ ಮಿತಿ ಏನಾಗಿರಬೇಕು? ಮಿತಿಯಿಲ್ಲದ ಸ್ವಾತಂತ್ರ‍್ಯವು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆಯೇ? ಒಬ್ಬ ವ್ಯಕ್ತಿಗೆ ನೀಡಲಾದ ಅನಿಯಂತ್ರಿತ ಸ್ವಾತಂತ್ರ‍್ಯವು ಸಮಾಜದಲ್ಲಿ ಇನ್ನು ಕೆಲವು ಜನರ ಸ್ವಾತಂತ್ರ‍್ಯವನ್ನು ನಿರಾಕರಿಸುತ್ತದೆಯೇ? ಈ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಹುಡುಕುವ ಅಗತ್ಯ ಇದೆ.

ಅರಿಸ್ಟಾಟಲ್ ಹೇಳುತ್ತಾನೆ, “Through discipline comes freedom”. ಜೀವನದಲ್ಲಿ ಶಿಸ್ತನ್ನು ಅಳವಡಿಸುವಾಗ ಮಾತ್ರ ನಿಮಗೆ ಸ್ವಾತಂತ್ರ‍್ಯದ ನೈಜ ಅನುಭೂತಿಯನ್ನು ಪಡೆಯಲು ಸಾಧ್ಯ. ಸ್ವಾತಂತ್ರ‍್ಯವೆಂದರೆ ಸರ್ವತಂತ್ರ  ಸ್ವಾತಂತ್ರ‍್ಯವಲ್ಲ.

ಉದಾಹರಣೆಗೆ, ಶಿಕ್ಷಣ ಪಡೆಯುವ ಸ್ವಾತಂತ್ರ‍್ಯ ಎಲ್ಲರಿಗೂ ಇದೆ. ಆದರೆ ಒಬ್ಬ ವಿದ್ಯಾರ್ಥಿ ಒಂದು ಯುನಿವರ್ಸಿಟಿಯಲ್ಲಿ ದಾಖಲಾತಿ ಪಡೆದರೆ ಅವನು ಆ ನಿರ್ದಿಷ್ಟ ವಿದ್ಯಾಸಂಸ್ಥೆಯ ಸಿಲೆಬಸ್ಸನ್ನೇ ಕಲಿಯಬೇಕು. ಇಲ್ಲ, ನನಗೆ ಆ ಸಿಲೆಬಸ್ ಬೇಡ ನಾನು ನನ್ನದೇ ರೀತಿಯಲ್ಲಿ ಕಲಿಯುತ್ತೇನೆ ಎಂದು ಹೇಳುವಂತಿಲ್ಲ. ಅಂದರೆ ಒಂದು ನಿಯಮಕ್ಕೆ ಆತ ಬದ್ಧನಾಗಿರಲೇಬೇಕು.

ಒಬ್ಬ ವ್ಯಕ್ತಿ ಬೈಕ್ ಓಡಿಸುತ್ತಾನೆ ಎಂದು ಇಟ್ಟುಕೊಳ್ಳಿ, ಆದರೆ ಆತನಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇಲ್ಲಿ ಒಂದು ವೇಳೆ ಆತ, ಹೆಲ್ಮೆಟ್ ಧರಿಸುವುದು ನನ್ನ ಸಂಚಾರ ಸ್ವಾತಂತ್ರ‍್ಯಕ್ಕೆ ವಿರುದ್ಧವಾದ ನಿಯಮ, ಅದನ್ನು ನಾನು ಒಪ್ಪುದಿಲ್ಲ ಎನ್ನುವುದಾದರೆ ಅಂತಹ ಅನಿಯಂತ್ರಿತ ಸ್ವಾತಂತ್ರ‍್ಯವು ಸಮಾಜದಲ್ಲಿ ಅರಾಜಕತೆಯನ್ನು ಉಂಟು ಮಾಡುತ್ತದೆ.

ಒಂದು ಹಾಳೆಯಲ್ಲಿ ತುಂಬಾ ಸ್ಥಳಗಳಿವೆ ಎಂದು ಎಲ್ಲಾ ಕಡೆ ತೋಚಿದಂತೆ ಯಾರೂ ಬರೆಯುವುದಿಲ್ಲ. ಗೆರೆ ಎಳೆದು ಬರೆದಾಗ ಮಾತ್ರ ಆ ಹಾಳೆಯ ಬರಹವು ಸುಂದರವಾಗಿ ಗೋಚರಿಸುತ್ತದೆ. ಜೀವನದ ಎಲ್ಲಾ ರಂಗಗಳಲ್ಲೂ ಇಂತಹ ಗೆರೆಗಳ ಅಗತ್ಯವಿದೆ. ಅದು ಜೀವನವನ್ನು ಇನ್ನಷ್ಟು ಸುಂದರ ಮತ್ತು ಪಾವನವಾಗಿಸುತ್ತದೆ.

ಫುಟ್ ಬಾಲ್ ಆಟವನ್ನೇ ತೆಗೆದು ನೋಡೋಣ, ಆಟಗಾರರು ಆಟದ ನಿಯಮಕ್ಕೆ ಅನುಗುಣವಾಗಿ ಆಡಿದರೆ ಮಾತ್ರ ಅದಕ್ಕೆ ಒಂದು ಸೌಂದರ್ಯ. ಮನಸ್ಸೋ ಇಚ್ಚೆಯಂತೆ ಆಟವಾಡುವುದಾದರೆ ಅಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಜೀವನದ ಎಲ್ಲಾ  ಕ್ಷೇತ್ರಗಳಲ್ಲೂ ಮನುಷ್ಯನು ಸರ್ವ ಸ್ವತಂತ್ರನಲ್ಲ. ಸ್ವಾತಂತ್ರ‍್ಯಕ್ಕೆ ಒಂದು ಪರಿಧಿ ಇದೆ, ಒಂದು ಮೇರೆ ಇದೆ. ಒಂದೋ ಅದು  ಮನುಷ್ಯ ನಿರ್ಮಿತವಾಗಿರಬಹುದು ಅಥವಾ ದೈವೀಕವಾಗಿರಬಹುದು.

ಮೊದಲ ಮಾನವ ಆದಮ್(ಅ)ರ ಇತಿಹಾಸವನ್ನು ವಿವರಿಸುವ ಸಂದರ್ಭದಲ್ಲಿ ಕುರ್ ಆನ್ ಈ ವಿಷಯವನ್ನು ಬಹಳ ಸುಂದರವಾಗಿ ವಿವರಿಸುತ್ತದೆ. ನಾವು ಹೇಳಿದೆವು; ‘‘ಆದಮರೆ, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ, ನೀವಿಚ್ಛಿಸುವಲ್ಲೆಲ್ಲಾ  ಇದರಿಂದ ನಿಶ್ಚಿಂತರಾಗಿ ತಿನ್ನಿರಿ. ಆದರೆ ಆ ಮರದ ಹತ್ತಿರ ಹೋಗದಿರಿ, (ಹೋದರೆ) ನೀವಿಬ್ಬರೂ ಅಕ್ರಮಿಗಳ ಸಾಲಿಗೆ  ಸೇರುವಿರಿ. (ಅಲ್‌ಬಕರ: 35)

ಇಲ್ಲಿ ಅಲ್ಲಾಹನು ಇಬ್ಬರಿಗೂ ಜೀವನವನ್ನು ಆಸ್ವಾದಿಸುವ ಅನುಮತಿ ಕೊಡುವುದರ ಜತೆಗೆ ಒಂದು ಮೇರೆಯನ್ನು ಅಥವಾ ಒಂದು ಪರಿಧಿಯನ್ನು ನಿಶ್ಚಯಿಸಿದ್ದಾನೆ. “ವಲಾ ತಕ್ರಬಾ ಹಾಝಿಹಿ ಷಜರ” “ತಿಲ್ ಕ ಹುದೂದುಲ್ಲಾಹ್” ಈ ಮೇರೆಯನ್ನು  ಪಾಲಿಸುವುದಾದರೆ ಮಾತ್ರ ನೀವು ನಿಜವಾದ ಸ್ವಾತಂತ್ರ‍್ಯ ವನ್ನು ಅನುಭವಿಸಲು ಸಾಧ್ಯ.

ಅಂದರೆ ನೈತಿಕತೆ ಮತ್ತು ಸಚ್ಚಾರಿತ್ಯದ ಬೆಳಕಿನಿಂದಲೇ ಮಾತ್ರ ಮನುಷ್ಯನು ಯಶಸ್ವಿ ಜೀವನವನ್ನು ಸಾಗಿಸಬಲ್ಲ. ಈ ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಬಹುದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ.

ಪ್ರವಾದಿ(ಸ)ರ ನಿಯೋಗದ ಕುರಿತು ಹದೀಸ್‌ನಲ್ಲಿ ಈ ರೀತಿ ಉಲ್ಲೇಖವಿದೆ. ಅಬೂ ಹುರೈರಾ ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು: ಎಲ್ಲಾ ಉತ್ತಮ ಗುಣಗಳನ್ನು ಪೂರ್ಣ ಸ್ವರೂಪದಲ್ಲಿ ಜನರ ಮುಂದಿಡಲು ಅಲ್ಲಾಹನು ನನ್ನನ್ನು ಕಳುಹಿಸಿದ್ದಾನೆ. (ಬೈಹಕಿ)

ಇಂದು ಅನಿಯಂತ್ರಿತ ವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ ಅನೇಕ ಸಿದ್ಧಾಂತಗಳು ವ್ಯಾಪಕವಾಗಿ ಹರಡಿಕೊಂಡಿವೆ. ‘ನನ್ನ ಜೀವನ, ನನ್ನ ನಿರ್ಧಾರ’ (My Life, My decision) ನನ್ನ ಶರೀರ ನನ್ನ ಹಕ್ಕು (My Body My Right) ಮುಂತಾದ  ಘೊಷಣೆ ಯುವಕರನ್ನು ಇನ್ನಷ್ಟು ಸಂಕುಚಿತ ಮನೋಭಾವದ ಕಡೆಗೆ ದೂಡಿದೆ. ನಾನು ಎಂಬ ಸಂಕುಚಿತ ಮನಸ್ಥಿತಿಯಲ್ಲಿ ಬಂಧಿತರಾಗುತ್ತಿದ್ದಾರೆ. ಈ ರೀತಿಯ ಘೋಷಣೆಗಳು ಯುವಕರನ್ನು ಹೆಚ್ಚು ಅವ್ಯವಸ್ಥೆ, ಒಂಟಿತನ, ಹತಾಶೆ ಮತ್ತು ಒತ್ತಡಕ್ಕೆ  ತಳ್ಳಿದೆ, ಇದು ಅವರ, ಕ್ರಿಯಾಶೀಲತೆ ಹಾಗೂ ಪ್ರಗತಿಗೆ ಬಹುದೊಡ್ಡ ಅಡೆತಡೆಯಾಗಿ ಬದಲಾಗಿದೆ. ಇದರಿಂದಾಗಿ ಮಾದಕ  ವ್ಯಸನಿಗಳು ಹೆಚ್ಚುದರ ಜತೆಗೆ, ಅಶ್ಲೀಲತೆಯ ಹರಡುವಿಕೆ, ಹೆಚ್ಚುವರಿ ವೈವಾಹಿಕ ಸಂಬಂಧಗಳು ಮತ್ತು ಆತ್ಮಹತ್ಯೆಯ  ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪವಿತ್ರ ಕುರ್‌ಆನ್ ಹೇಳುತ್ತದೆ: ಹಾಗೆಯೇ(ಈ ಸಂಪತ್ತು) ಅವರಿಗಿಂತ(ವಲಸಿಗರಿಗಿಂತ) ಮುನ್ನ, ವಲಸೆಯ ಸ್ಥಾನ(ಮದೀನ)ದಲ್ಲಿ ನೆಲೆಸಿದ್ದ ಹಾಗೂ ವಿಶ್ವಾಸಿಗಳಾಗಿದ್ದವರಿಗೆ (ಅನ್ಸಾರ್‌ಗಳಿಗೆ) ಸೇರಿದೆ. ಅವರು ತಮ್ಮ ಬಳಿಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ, ಅವರಿಗೆ ಏನನ್ನು ನೀಡಲಾಯಿತೋ ಆ ಕುರಿತು ಅವರು ತಮ್ಮ ಮನದಲ್ಲಿ ಆಸೆ ಪಡುವುದಿಲ್ಲ ಮತ್ತು ಸ್ವತಃ ತಾವು ಕಷ್ಟದಲ್ಲಿದ್ದರೂ  ಅವರಿಗೆ (ವಲಸಿಗರಿಗೆ) ಪ್ರಾಶಸ್ತ್ಯ ನೀಡುತ್ತಾರೆ. ಮನಸ್ಸಿನ ಸಣ್ಣತನದಿಂದ ರಕ್ಷಿಸಲ್ಪಟ್ಟವರೇ ವಿಜಯಿಗಳು. (ಅಲ್ ಹಶ್ರ್: 9)

ನನ್ನ ಶರೀರ ನನ್ನ ಹಕ್ಕು ಎಂಬ ಈ ಮನೊಭಾವ ಸೃಷ್ಟಿಸಿರುವ ಪ್ರಮುಖ ಸಾಮಾಜಿಕ ಕೆಡುಕುಗಳು:
ಮದ್ಯಪಾನ ಮತ್ತು ಮಾದಕ ಪದಾರ್ಥಗಳ ಚಟ
ಮದ್ಯಪಾನ ಮತ್ತು ಮಾದಕ ದ್ರವ್ಯದ ಚಟ ಒಂದು ಸಾಮಾಜಿಕ ಪಿಡುಗಾಗಿ ಬದಲಾಗಿದೆ. ಅದು ಮನುಷ್ಯನನ್ನು  ಮೃಗಕ್ಕಿಂತಲೂ
ಕೀಳಾಗಿ ಪರಿವರ್ತಿಸಿದೆ. ಆಗಸ್ಟ್ ತಿಂಗಳ ಚೆನ್ನಹಳ್ಳಿಯಲ್ಲಿ ಮದ್ಯದ ಅಮಲಿನಲ್ಲಿ ಬಂದಂತ ಯುವಕ ತನ್ನ ತಾಯಿಯ ಮೇಲೆಯೇ ಅತ್ಯಾಚಾರ ಎಸಗುತ್ತಾನೆ. “ಕುಡಿತದ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ. ಮತ್ತು ಅವನನ್ನು ಮೃಗವಾಗಿ ಪರಿವರ್ತಿಸುತ್ತದೆ. ಹೆಂಡತಿ, ತಾಯಿ, ಸಹೋದರಿ ನಡುವಣ ಭೇಧವನ್ನು ಗ್ರಹಿಸಿಕೊಳ್ಳದಷ್ಟು ಅಸಮರ್ಥವಾಗಿಸುತ್ತದೆ. (ಗಾಂಧೀಜಿ- ಹರಿಜನ ಪತ್ರಿಕೆ 9-3-1934)

ಶೇಕಡಾ 60 ರಷ್ಟು ಕೌಟುಂಬಿಕ ದೌರ್ಜನ್ಯವು ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದ ಆಗುತ್ತಿದೆ. ಆತ್ಮಹತ್ಯೆ ಮಾಡುವ 3/1 ಸ್ತ್ರೀಯರ ಪತಿಯಂದಿರು ಮಧ್ಯಪಾನಿಗಳೋ ಅಥವಾ ಮಾದಕ ಪದಾರ್ಥವನ್ನು ಸೇವಿಸುವವರಾಗಿದ್ದಾರೆ. ರಾಜ್ಯ ಗೃಹ ಇಲಾಖೆಗಳ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡ್ರಗ್ ಪ್ರಕರಣಗಳು ಕಂಡುಬರುತ್ತಿದ್ದು, ಅದರಲ್ಲಿ ಮಾದಕ ವಸ್ತುಗಳ ಸೇವನೆ, ಸ್ವಾಧೀನ ಮತ್ತು ವ್ಯವಹಾರಗಳ ಪ್ರಕರಣಗಳು ದಾಖಲಾಗುತ್ತಿವೆ.  ದೇಶದ ವಿವಿಧ ನಗರಗಳ 16 ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ  ಶೇ. 47 ಜನರು ಸಿಗರೇಟು ಸೇದುವವರಾಗಿದ್ದು, ಶೇ. 20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ 83  ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂದು ತಿಳಿದಿಲ್ಲ. ಇದು ಇಂದಿನ ಯುವಕರು ಅನುಭವಿಸುತ್ತಿರುವ ಒಂದು  ಜ್ವಲಂತ ಸಮಸ್ಯೆಯಾಗಿದ್ದು, ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈ ಮಾದಕ ವಸ್ತುವಿನ ಜಾಲವು ರಾಜಾರೋಷವಾಗಿ  ನಮ್ಮ ಮಧ್ಯೆ ವ್ಯಾಪಿಸಿರುವುದು ದುರಂತವಾಗಿದೆ.

ಸರ್ವಜ್ಞ ವ್ಯಂಗ್ಯವಾಗಿ ಈ ಕೆಡುಕಿನ ಕುರಿತು ಈ ರೀತಿ ಹೇಳಿದ್ದಾರೆ, “ಮದ್ಯಪಾನವ ಮಾಡಿ ಇದ್ದುದೆಲ್ಲವ ನೀಡಿ ಬಿದ್ದು ಬರುವವನ ಸದ್ದಡಗಿ ಸಂತಾನವೆದ್ದು ಹೋಗುವದು ಸರ್ವಜ್ಞ”.

ಉಮ್ಮು ಸಲಮ(ರ) ವರದಿ, “ಪ್ರವಾದಿ(ಸ)ರು ಎಲ್ಲಾ ತರದ ಅಮಲು ಮತ್ತು ಮಾದಕ ಪದಾರ್ಥವನ್ನು ನಿಷೇಧಿಸಿದ್ದಾರೆ.

ಯುವ ಪೀಳಿಗೆ ದಿನೇ ದಿನೇ ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದು, ಅದರಲ್ಲೂ ವಿದ್ಯಾರ್ಥಿಗಳು ಈ ಚಟಗಳಿಗೆ ಹೆಚ್ಚಾಗಿ ಬ ಲಿಯಾಗುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಗೆ ಅರಿವು ಮೂಡಿಸುವುದು  ಅತ್ಯವಶ್ಯಕವಾಗಿರುತ್ತದೆ.

ಮುಕ್ತ ಲೈಂಗಿಕತೆ
ಸಲಿಂಗ ಕಾಮ, ನಗ್ನತೆ, ಅಶ್ಲೀಲತೆ, ಮುಕ್ತ ಲೈಂಗಿಕತೆ ಮತ್ತು ಪೋನೋಗ್ರಫಿ ಮುಂತಾದ ಕೆಡುಕುಗಳನ್ನು ಇಂದು ಉದಾತ್ತ ಮೌಲ್ಯಗಳಾಗಿ ಪ್ರಚುರಪಡಿಸಲಾಗುತ್ತಿದೆ. ಒಂದು ಕಾಲದಲ್ಲಿ ಅನೈತಿಕವೆಂದು ಪರಿಗಣಿಸಲ್ಪಟ್ಟಿದ್ದೆಲ್ಲವೂ ಈಗ ಸಾಮಾನ್ಯವಾಗುತ್ತಿದೆ. ಜನರು ಕತ್ತಲೆಯಲ್ಲಿ ಏನು ಮಾಡುತ್ತಿದ್ದರೋ ಅಥವಾ ಸಾರ್ವಜನಿಕರಿಂದ ಮರೆಮಾಚುತ್ತಿದ್ದರೋ ಅದನ್ನು  ಈಗ ಯಾವುದೇ ನಾಚಿಕೆ ಅಥವಾ ಅಪರಾಧ ಪ್ರಜ್ಞೆಯಿಲ್ಲದೆ ಸಾರ್ವಜನಿಕವಾಗಿ ಮಾಡಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರ‍್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ಅನೈತಿಕತೆ ಕುಟುಂಬ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿದೆ. 2003 ರಲ್ಲಿ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ವರದಿಯ ಪ್ರಕಾರ ಏಡ್ಸ್ ಹೊಂದಿರುವ 63 ಶೇಕಡಾ ಪುರುಷರು ಸಲಿಂಗಕಾಮದ ಮೂಲಕ ಏಡ್ಸ್ ರೋಗಕ್ಕೆ ತುತ್ತಾಗಿದ್ದಾರೆ. ಜಾಗತಿಕವಾಗಿ ಅವಿವಾಹಿತ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿದ್ದರೆ, ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಕೂಡಾ ಈ ಅರಾಜಕತೆಗೆ ತುತ್ತಾಗುತ್ತಿವೆ.  ಒಂದು ಅಂತಾರಾಷ್ಟ್ರಿಯ ಜರ್ನಲ್‌ನಲ್ಲಿ ಭಾರತದಲ್ಲಿ ಅವಿವಾಹಿತರು ತಾಯಂದಿರರಾಗುವ ಪ್ರಕರಣದಲ್ಲಿ ಶೇಕಡಾ 50%  ಹೆಚ್ಚಳವಾಗಿದೆ, ಅವರಲ್ಲಿ ಹೆಚ್ಚಿನವರು ಅಂದರೆ 49% ಶೇಕಡ ಹದಿಹರೆಯದ ಹುಡುಗಿಯರು.  (https://www.research gate.net/publication/269463889_  Rising_incidence_of_unwed_mothers_in_India_associated_social_parameters_institutional_guidelines_for_managing_them). ಇದು ಸ್ವಾತಂತ್ರ‍್ಯವಲ್ಲ ಬದಲಾಗಿ ಸ್ವೇಚ್ಛೆಯ ಗುಲಾಮಗಿರಿಯಾಗಿದೆ. ಲಜ್ಜೆ ಎಂಬುವುದು ಬಹಳ ಉದಾತ್ತವಾದ ನೈತಿಕ ಮೌಲ್ಯವಾಗಿದೆ.

ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಗತ ಪ್ರವಾದಿತ್ವದ ವಿಷಯಗಳ ಪೈಕಿ ಜನರಿಗೆ ತಿಳಿಸಲಾದ ಉಪದೇಶಗಳಲ್ಲಿ ಒಂದು ‘ನಿಮ್ಮಲ್ಲಿ ಲಜ್ಜೆ ಇಲ್ಲದಿದ್ದರೆ, ಮನಬಂದಂತೆ ವರ್ತಿಸಿರಿ’ ಎಂಬುದಾಗಿದೆ.”
[ವರದಿ: ಅಬ್ದುಲ್ಲಾ ಬಿನ್ ಮಸ್‌ಊದ್(ರ)- ಬುಖಾರಿ]

ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಲಜ್ಜೆಯು ವಿಶ್ವಾಸದ ಭಾಗವಾಗಿದೆ ಮತ್ತು ವಿಶ್ವಾಸವು  ಸ್ವರ್ಗದೆಡೆಗೆ ಕೊಂಡೊಯ್ಯುತ್ತದೆ. ನಿರ್ಲಜ್ಜೆಯು ಅಕ್ರಮವಾಗಿದೆ ಮತ್ತು ಅಕ್ರಮವು ನರಕದೆಡೆಗೆ ಕೊಂಡೊಯ್ಯುತ್ತದೆ.”
[ವರದಿ: ಅಬೂಹುರೈರಾ(ರ)- ತಿರ್ಮಿದಿ]

ಮುಕ್ತ ಲೈಂಗಿಕತೆ ಅರಾಜಕತೆಗೆ ಕಾರಣವಾಗುತ್ತದೆ, ವೈವಾಹಿಕ ಜೀವನದಿಂದ ನಡೆಯುವ ನಿಯಂತ್ರಿತ ಲೈಂಗಿಕತೆಯಿಂದ ಆರೊಗ್ಯಕರವಾದ ಸಮಾಜದ ನಿರ್ಮಾಣವಾಗುತ್ತದೆ. ನಗ್ನತೆ, ಅಶ್ಲೀಲತೆ ಇವೆಲ್ಲವೂ ವ್ಯಕ್ತಿ ಸ್ವಾತಂತ್ರ‍್ಯವಲ್ಲ ಬದಲಾಗಿ ಪೋಸ್ಟ್ ಮೋಡರ್ನಿಝಮ್ ಹುಟ್ಟು ಹಾಕಿದ ಸಾಂಸ್ಕೃತಿಕ ಗುಲಾಮಗಿರಿಯಾಗಿದೆ.

ಒಂಟಿತನ, ಹತಾಶೆ, ಮಾನಸಿಕ ಅಸ್ವಸ್ಥತೆ
ಮನುಷ್ಯನು “ನಾನು” ಎಂಬ ಸಂಕುಚಿತ ಭಾವನೆಯ ಕಡೆಗೆ ಸೀಮಿತವಾದಾಗ ಈ ಒಂಟಿತನ ಹತಾಶೆ ಮಾನಸಿಕ ಅಸ್ವಸ್ಥತೆ
ಅವನಲ್ಲಿ ಹೆಚ್ಚಾಗುತ್ತದೆ. ಪ್ರತಿ 40 ಸೆಕೆಂಡಿಗೆ ಒಬ್ಬರು, ಈ ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆಂದರೆ ಯಾರಿಗಾದರೂ ಗಾಬರಿ ಮತ್ತು ವಿಷಾದವಾಗುತ್ತದೆ. ನಮ್ಮ ದೇಶದಲ್ಲಿ ಪ್ರತಿವರ್ಷ 1 ಲಕ್ಷದ 35 ಸಾವಿರ ಜನ ಆತ್ಮಹತ್ಯೆಗೆ  ಶರಣಾಗುತ್ತಿದ್ದಾರೆ. 12 ರಿಂದ 15 ಲಕ್ಷ ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ನಿರಾಶೆ, ಹತಾಶೆ, ದುಃಖ, ಸೋಲು ಈ ಭಾವನೆಗಳನ್ನು ನಿಯಂತ್ರಿಸಲಾಗದೆ ತಮ್ಮ ಅಮೂಲ್ಯ ಜೀವವನ್ನು ಕೊನೆಗೊಳಿಸುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ  ಶೇಕಡಾ 35 ರಷ್ಟು ಜನ 15 ರಿಂದ 30 ವರ್ಷ ವಯಸ್ಸಿನ ಒಳಗಿನವರು ಎಂಬುದು ಮತ್ತೊಂದು ಆತಂಕವನ್ನುಂಟು  ಮಾಡುವ ವಿಷಯ.

ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬ್ಲಾಕ್ಮೇಲ್ ಮಾಡಿ ಮನೆಯವರನ್ನು, ಸಂಬಂಧಪಟ್ಟವರನ್ನು ಹೆದರಿಸುವ PಂಖA  SUIಅIಆಇ ಪ್ರವೃತ್ತಿಯೂ ನಮ್ಮಲ್ಲಿ ಹೆಚ್ಚುತ್ತಿದೆ. ಸಮಾಜದಲ್ಲಿ ವಿಶ್ವಾಸ, ಪ್ರೀತಿ, ಪ್ರೇಮ, ಅನುಕಂಪ, ಭರವಸೆ, ಸಾಮಾಜಿಕ  ಕಳಕಳಿಯಂತಹ ನೈತಿಕ ಮೌಲ್ಯಗಳು ಇಲ್ಲವಾದಾಗ ಈ ಎಲ್ಲಾ ಕೆಡುಕುಗಳು ಸಮಾಜವನ್ನು ಆವರಿಸುತ್ತದೆ.

ಮನುಷ್ಯನ ಜೀವನ ಹಾಗೂ ಶರೀರವು ದೈವದತ್ತವಾದುದಾಗಿದೆ. ಅದು ಮನುಷ್ಯನು ಸ್ವತಃ ಗಳಿಸಿದ್ದಲ್ಲ. ಆದ್ದರಿಂದ ಅವೆರಡನ್ನೂ ನಾಶಪಡಿಸುವ ಹಕ್ಕು ಮನುಷ್ಯರಿಗಿಲ್ಲ ಎಂಬುದೇ ಇಸ್ಲಾಮಿನ ಧೋರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ವಂತ  ಜೀವವನ್ನು ಹತ್ಯೆಗೈಯುವ ಸ್ವಾತಂತ್ರ‍್ಯ ಮಾತ್ರವಲ್ಲದೆ ಮರಣಕ್ಕಾಗಿ ಪ್ರಾರ್ಥಿಸಲಿಕ್ಕಿರುವ ಹಕ್ಕನ್ನೂ ಇಸ್ಲಾಮ್ ನಿರಾಕರಿಸಿದೆ.  ದೇವನು ನಿಶ್ಚಯಿಸಿರುವ ಕಾಲಾವಧಿಯ ತನಕ ಯಾವುದೇ ಕಷ್ಟಗಳಿದ್ದರೂ ಅವುಗಳನ್ನು ಸಹಿಸಿ, ಸಹನೆ ವಹಿಸಿ, ಒಳಿತಿಗಾಗಿ  ಪ್ರಾರ್ಥಿಸುತ್ತಾ ಬದುಕಬೇಕು ಎಂಬುದೇ ಅಲ್ಲಾಹನ ಆಜ್ಞೆಯಾಗಿದೆ.

ಪ್ರವಾದಿ(ಸ) ಹೇಳಿದ್ದಾರೆ, “ನಿಮ್ಮ ಪೈಕಿ ಯಾರು ಕೂಡಾ ಮರಣಕ್ಕಾಗಿ ಆಗ್ರಹಿಸಬಾರದು. ಗತ್ಯಂತರವಿಲ್ಲವೆಂದು ಭಾಸವಾದರೆ ಅವನು ಈ ರೀತಿ ಪ್ರಾರ್ಥಿಸಲಿ. ಓ ಅಲ್ಲಾಹ್! ಜೀವನವು ನನಗೆ ಉತ್ತಮವೆಂದಾದರೆ ನೀನು ನನ್ನ ಜೀವವನ್ನು ಉಳಿಸು. ಮರಣವು ನನಗೆ ಉತ್ತಮವೆಂದಾದರೆ ನೀನು ನನಗೆ ಮರಣವನ್ನು ನೀಡು.” (ಬುಖಾರಿ, ಮುಸ್ಲಿಮ್)

ನೈತಿಕ ಪ್ರಜ್ಞೆಯನ್ನು ಬಲಪಡಿಸುಲು ಸಹಕಾರಿಯಾದ ಗುಣಗಳು
ಈಮಾನ್ (ವಿಶ್ವಾಸ)

ಪ್ರೀತಿ, ಪ್ರೇಮ, ಸಾಮಾಜಿಕ ಕಳಕಳಿ, ಸಹನೆ ಹಾಗೂ ಭರವಸೆ ಮುಂತಾದ ನೈತಿಕ ಮೌಲ್ಯಗಳನ್ನು ಇಸ್ಲಾಮ್ ಬಳಹ  ಸ್ಪಷ್ಟವಾಗಿ ವಿವರಿಸಿದೆ. ಆದರೆ ಅದನ್ನು ಪಾಲಿಸಲು ಹಾಗೂ ಅದನ್ನು ತನ್ನ ಜೀವನದಲ್ಲಿ ಅಳವಡಿಸಲು ಅವನಿಗೆ ದೈವೀಕ  ಪ್ರಜ್ಞೆಯ ಅಗತ್ಯ ಇದೆ.

ಈ ದೈವಿಕ ಪ್ರಜ್ಞೆ ಎಂದರೇನು? ಈ ಜಗತ್ತಿಗೊಬ್ಬ ಸೃಷ್ಟಿಕರ್ತನಿದ್ದಾನೆ. ಅವನೇ ಈ ಜಗತ್ತನ್ನು,  ಅದು ಒಳಗೊಂಡಿರುವ ಸಕಲ ಚರಾಚರಗಳನ್ನು ಸೃಷ್ಟಿಸಿದ್ದಾನೆ. ಅವನೇ ಒಡೆಯ, ಪಾಲಕ, ಮಹೋನ್ನತ ಪ್ರಭು ಎಂಬುದು  ಎಲ್ಲ ಆಸ್ತಿಕರ ನಂಬಿಕೆಯಾಗಿದೆ. ಅದೇ ರೀತಿಯಲ್ಲಿ ಈ ಜೀವನವೆಂಬುದು ಶಾಶ್ವತವಲ್ಲ ಎಂಬ ಅರಿವು ಕೂಡಾ ಎಲ್ಲರಿಗೂ  ಇದೆ. ನಮಗೆ ತಿಳಿದೇ ಇಲ್ಲದಂತಹ ಒಂದು ನಿರ್ದಿಷ್ಟ ಆಯುಷ್ಯವನ್ನು ಈ ಭೂಮಿಯ ಮೇಲೆ ನಾವು ಕಳೆಯಬೇಕಿದೆ. ಆ  ಬಳಿಕ ಮರಣ ಹೊಂದಲಿದ್ದೇವೆ. ಮರಣದ ಬಳಿಕ ದೇವನು ನಮ್ಮನ್ನು ಪುನಃ ಸೃಷ್ಟಿಸುತ್ತಾನೆ. ಈ ಭೂಮಿಯ ಮೇಲೆ ನಾವು ಜೀವಿಸಿದ ರೀತಿಯ ನೀತಿಗಳನ್ನು ಅನುಸರಿಸಿ ಪರಲೋಕದಲ್ಲಿ ಪುರಸ್ಕಾರ, ಶಿಕ್ಷೆಗಳು ಸಿಗುತ್ತವೆ.

ಈ ನಂಬಿಕೆಯಲ್ಲಿ ಕೆಲವು ವ್ಯತ್ಯಾಸಗಳಿದ್ದರೂ ಎಲ್ಲ ಆಸ್ತಿಕರಲ್ಲೂ ಈ ನಂಬಿಕೆ ಇದ್ದೇ ಇದೆ. ಇಲ್ಲಿರುವ ಪ್ರತಿಯೊಂದು ವಸ್ತುವು ದೇವನು ನನಗೆ ಕೊಟ್ಟ ಅನುಗ್ರಹವಾಗಿದೆ. ನನ್ನ ದೇಹ, ನನ್ನ ಸಂಪತ್ತು ಹಾಗೂ ಭೂಮಿ ಅದರಲ್ಲಿವ ಸಕಲ ವಸ್ತುಗಳು ಇವೆಲ್ಲವುಗಳ ನೈಜ ಒಡೆಯ ಅಲ್ಲಾಹನಾಗಿದ್ದಾನೆ. ಇಲ್ಲಿರುವ ಎಲ್ಲಾ ಅನುಗ್ರಹಗಳನ್ನು ಅವನ ಸಂತೃಪ್ತಿ ಹಾಗೂ ಅವನ ಆಜ್ಞೆಗೆ ಅನುಗುಣವಾಗಿ ಮಾತ್ರ ವಿನಿಯೋಗಿಸುವ ಸ್ವಾತಂತ್ರ‍್ಯ ಮನುಷ್ಯನಿಗೆ ನೀಡಲಾಗಿದೆ. ಎಂತಹ ಪ್ರತಿಕೂಲ ಪರಿಸ್ಥಿಯಲ್ಲೂ ದೇವನು ನನ್ನ ಜತೆಗಿದ್ದಾನೆ. ಅವನು ಮನುಕುಲದ ಮಾರ್ಗದರ್ಶನಕ್ಕೆ ಪ್ರವಾದಿಗಳನ್ನು ಹಾಗೂ ದೈವೀಕ ಗ್ರಂಥಗಳನ್ನು ಕಳುಹಿಸಿದ್ದಾನೆ. ಯಾವುದು ಸತ್ಯ  ಮತ್ತು ಯಾವುದು ಮಿಥ್ಯ ಎಂಬುವುದನ್ನು ಸ್ಪಷ್ಟಪಡಿಸಿದ್ದಾನೆ. ಅವನು ಮನುಷ್ಯನನ್ನು ಗೌರವಿಸಿದ್ದಾನೆ ಮತ್ತು ಅವನನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾನೆ. ಈ ದೈವೀಕ ಪ್ರಜ್ಞೆ ಮನುಷ್ಯನನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ.  ಈ ಅಚಂಚಲ ವಿಶ್ವಾಸವು ಮನುಷ್ಯನನ್ನು ಎಲ್ಲಾ ರೀತಿಯ ಸಂಕುಚಿತತೆ ಹಾಗೂ ಮಾನವ ನಿರ್ಮಿತ ಅಸಂತುಲಿತ ವ್ಯವಸ್ಥೆಯಿಂದ ವಿಮೋಚಿಸುತ್ತದೆ.

ಈ ಜಗತ್ತಿನಲ್ಲಿ ಅಷ್ಟೊಂದು ಅನೀತಿ, ಭ್ರಷ್ಟಾಚಾರ, ಮದ್ಯಪಾನ, ಜೂಜು, ಬಡ್ಡಿ, ಅಶ್ಲೀಲತೆ, ವ್ಯಭಿಚಾರ, ಲಂಚ, ಮಾದಕ  ವಸ್ತು ಸೇವನೆ ಮುಂತಾದ ಹತ್ತು ಹಲವು ಕೆಡುಕುಗಳಿವೆ. ಇವುಗಳನ್ನು ಎಲ್ಲ ಧರ್ಮೀಯರೂ ಕೆಡುಕೆಂದು ಒಪ್ಪಿಕೊಳ್ಳುತ್ತಾರೆ. ಈ ಎಲ್ಲ ಕೆಡುಕುಗಳಿಂದ ನಮ್ಮನ್ನು ಸದಾ ರಕ್ಷಿಸಿಕೊಂಡು ದೇವನು ನನ್ನನ್ನು ನೋಡುತ್ತಿದ್ದಾನೆ ಎಂಬ  ಪ್ರಜ್ಞೆಯನ್ನು ಸದಾ ಜಾಗೃತವಾಗಿರಿಸಿಕೊಂಡು ಪಾವನ ಜೀವನವನ್ನು ಸಾಗಿಸಬೇಕು. ಈ ರೀತಿಯ ಜೀವನವನ್ನು ಮುನ್ನಡೆಸುವುದರಿಂದ ಮಾತ್ರವೇ ನೈಜ ಸ್ವಾತಂತ್ರ‍್ಯದ ಅನುಭೂತಿಯನ್ನು ಪಡೆಯಲು ಸಾಧ್ಯ.

ನಿಜವಾದ ವಿಶ್ವಾಸಿಗಳು, ಅಲ್ಲಾಹನಲ್ಲಿ ಹಾಗೂ ಅವನ ದೂತರಲ್ಲಿ ನಂಬಿಕೆ ಇಟ್ಟ ಬಳಿಕ ಎಂದೂ ಸಂಶಯಪಡುವುದಿಲ್ಲ ಮತ್ತು ಅವರು ತಮ್ಮ ಸಂಪತ್ತುಗಳನ್ನೂ ತಮ್ಮ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡುತ್ತಾರೆ.  ಅವರೇ ಸತ್ಯವಂತರು. (ಅಲ್ ಹುಜುರಾತ್: 15)

ಈಮಾನ್ ಮತ್ತು ನೈತಿಕತೆ ಒಂದೇ ನಾಣ್ಯದ ಎರಡು ಮುಖಗಳು. ನಿಮ್ಮಲ್ಲಿ ವಿಶ್ವಾಸವು ಎಷ್ಟು ಬಲಿಷ್ಠವಾಗುವುದೋ ನಿಮ್ಮಲ್ಲಿರುವ ನೈತಿಕ ಪ್ರಜ್ಞೆಯು ಅಷ್ಟೇ ಪಕ್ವವಾಗಿರುತ್ತದೆ.
ಇಬ್ನ್ ಉಮರ್ ಹೇಳಿದರು, “ಲಜ್ಜೆ ಮತ್ತು ವಿಶ್ವಾಸವು ಒಂದಕ್ಕೊಂದು ಬೆಸೆದುಕೊಂಡಿದೆ. ಅವುಗಳಲ್ಲಿ ಒಂದನ್ನು  ತೆಗೆದುಹಾಕಿದರೆ, ಮತ್ತೊಂದು ಕೂಡಾ ಇಲ್ಲವಾಗುವುದು.” (ಬೈಹಕಿ)

ದೇಹೇಚ್ಛೆಗಳ ಮೇಲೆ ಹತೋಟಿ
ಮನುಷ್ಯನು ಬಹಳ ದುರ್ಬಲನಾಗುವುದು ತನ್ನ ದೇಹೇಚ್ಛೆಗಳ ಮುಂದೆ. ಕಾಮ ಕ್ರೋಧ ಮಧ ಲೋಭ ಮತ್ಸರ ಈ  ವಿಷಯಾಸಕ್ತಿಗಳ ಮೇಲೆ ಹಿಡಿತವನ್ನು ಸಾಧಿಸಲು ಸಾಧ್ಯವಾಗದಿದ್ದರೆ ಅವನು ಈ ಅರಿಷಡ್ವರ್ಗಗಳ ಗುಲಾಮನಾಗುತ್ತಾನೆ.  ದೇಹೇಚ್ಛೆಗಳ ದಾಸ್ಯತ್ವದಿಂದ ಬಿಡುಗಡೆ ಹೊಂದಿ ದೇವೇಚ್ಛೆಯ ಕಡೆಗೆ ಹೆಜ್ಜೆ ಹಾಕುವಾಗ ಮನುಷ್ಯನು ನಿಜವಾದ  ಸ್ವಾತಂತ್ರ‍್ಯವನ್ನು ಗಳಿಸುತ್ತಾನೆ.

ಅಬೀ ಬರ್ಝ(ರ)ರಿಂದ ವರದಿ, ಪ್ರವಾದಿ(ಸ) ಹೇಳಿದರು, ನಾನು ನಿಮ್ಮ ಪೈಕಿ ಅತೀ ಹೆಚ್ಚು ಭಯಪಡುವುದು ನಿಮ್ಮ ಹೊಟ್ಟೆ ಹಾಗೂ ಗುಪ್ತಾಂಗಗಳಿಂದ ಹೊರಹೊಮ್ಮುವ ವಿಷಯಾಸಕ್ತಿಯನ್ನು ಹಾಗೂ ನಿಮ್ಮನ್ನು ದಾರಿ ತಪ್ಪಿಸುವ ದೇಹೇಚ್ಛೆಗಳನ್ನಾಗಿದೆ. (ಸಹೀಹ್ ತರ್ಗೀಬ್)

“ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ. ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ. ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು. ಅದನ್ನು ಮಲಿನಗೊಳಿಸಿದವನು ಸೋತನು.” (ಅಶ್ಶಮ್ಸ್: 7)