ಗಾಂಜಾ ಕಾನೂನು ಬದ್ಧಗೊಳಿಸುವುದಕ್ಕೆ ಟ್ರಂಪ್‍ ಬೆಂಬಲ

0
118

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಫ್ಲೊರಿಡ ರಾಜ್ಯದೊಳಗೆ ಗಾಂಜವಾವನ್ನು ಕಾನೂನು ಬದ್ಧಗೊಳಿಸಲು ಪ್ರಯತ್ನಿಸುವೆ ಎಂದು ಅಮೆರಿಕ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ದಕ್ಷಿಣ ರಾಜ್ಯವಾದ ಫ್ಲೊರಿಡದಲ್ಲಿ 21 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ಗಾಂಜಾ ಸೇವಿಸುವುದನ್ನು ಕಾನೂನು ಬದ್ಧಗೊಳಿಸುವ ಅಧಿಕಾರಿಗಳ ಕ್ರಮಗಳನ್ನು ತಾನು ಬೆಂಬಲಿಸುವೆ ಎಂದು ಟ್ರಂಪ್ ಹೇಳಿದರು.

ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಟ್ರಂಪ್ ಗಾಂಜಾ ಕಾನೂನು ಬದ್ಧಗೊಳಿಸುವುದು ಮತ್ತು ನಿಯಂತ್ರಿಸುವ ರಾಜ್ಯಮಟ್ಟದ ಪ್ರಯತ್ನ, ಸಂಶೋಧನೆಗಳನ್ನು ಬೆಂಬಲಿಸುವೆ ಎಂದಿದ್ದರು. ನಾನು ಹಿಂದೆ ಹೇಳಿದಂತೆ ವೈಯಕ್ತಿಕ ಬಳಕೆಗೆ ಸಣ್ಣ ಪ್ರಮಾಣದಲ್ಲಿ ಗಾಂಜ ಉಪಯೋಗಿಸಿದ್ದಕ್ಕೆ ಅನಗತ್ಯ ಬಂಧನ, ಶಿಕ್ಷೆ ಆಗುತ್ತದೆ. ಇದನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಟ್ರಂಪ್ ಹೇಳಿದರು.

ವಯಸ್ಕರಿಗೆ ಸುರಕ್ಷಿತವೂ ಮತ್ತು ಪರೀಕ್ಷಿಸಿದ ಉತ್ಪನ್ನಗಳ ಬಳಕೆಗೆ ಅನುಮತಿ ನೀಡುವಾಗ ನಿಯಂತ್ರಣವನ್ನೂ ಜಾರಿಗೊಳಿಸಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಒಂದು ಫ್ಲೊರಿಡದ ವ್ಯಕ್ತಿ ಎಂಬ ನೆಲೆಯಲ್ಲಿ ಈ ನವೆಂಬರಿನ ತಿದ್ದುಪಡಿಗೆ ಬೆಂಬಲವಾಗಿ ನಾನು ಮತ ನೀಡುವೆ ಎಂದು ಅವರು ಹೇಳಿದರು.

ಗಾಂಜಾ ಬಳಕೆ ನಿಯಂತ್ರಿಸಬೇಕೆಂದು ಅಮೆರಿಕದಾದ್ಯಂತ ವ್ಯಾಪಕ ಪ್ರಚಾರದಲ್ಲಿದೆ. ಟ್ರಂಪ್‍ರ ಅಭಿಪ್ರಾಯವನ್ನು ಹಲವು ವಿಭಾಗದ ಜನರು ತೀವ್ರವಾಗಿ ವಿರೋಧಿಸಿದ್ದಾರೆ.