ಮ್ಯಾನ್ಮಾರ್ ರಾಯಿಟರ್ಸ್ ವರದಿಗಾರರ ಬಿಡುಗಡೆ

0
513

ಯಾಂಗೋನ್,ಮೇ 7: ಮ್ಯಾನ್ಮಾರಿನಲ್ಲಿ ರೋಹಿಂಗ್ಯನ್ ಸಾಮೂಹಿಕ ಹತ್ಯೆಯ ಕುರಿತು ತನಿಖಾ ವರದಿ ತಯಾರಿಸಿದ ಆರೋಪದಲ್ಲಿ ಏಳು ವರ್ಷ ಜೈಲು ಶಿಕ್ಷೆಗೊಳಗಾದ ರಾಯಿಟರ್ಸ್‌‌‌ ನ ಇಬ್ಬರು ಪತ್ರಕರ್ತರನ್ನು ಬಿಡುಗಡೆಗೊಳಿಸಲಾಗಿದೆ. ಅಧ್ಯಕ್ಷರ ಕ್ಷಮಾದಾನದ ನಂತರ ಪತ್ರಕರ್ತ ವಾಲಾನ್(32), ಕ್ವಯವ್ ಸೋ(28)ರನ್ನು ಜೈಲಿನಿಂದ ಹೊರಗೆ ಕರೆತರಲಾಯಿತು. ಈವರೆಗೆ 500ಕ್ಕೂ ಹೆಚ್ಚು ದಿವಸಗಳ ಕಾಲ ಜೈಲು ಪಾಲಾಗಿದ್ದಾರೆ. ಕಾನೂನು ವಿರುದ್ಧವಾಗಿ ಅಧಿಕೃತ ದಾಖಲೆಗಳನ್ನು ಕೈಯಲ್ಲಿಟ್ಟುಕೊಂಡಿದ್ದರೆಂದು ಆರೋಪಿಸಿ ಇವರಿಗೆ ಮ್ಯಾನ್ಮಾರ್ ಕೋರ್ಟು ಶಿಕ್ಷೆ ನೀಡಿತ್ತು.

2018 ಸೆಪ್ಟಂಬರ್‍ನಲ್ಲಿ ಏಳು ವರ್ಷ ಜೈಲು ಶಿಕ್ಷೆ ತೀರ್ಪು ಹೊರಬಂದಿತ್ತು. ನಂತರ ಪತ್ರಕರ್ತರಿಬ್ಬರನ್ನು ಜೈಲಿನೊಳಗಿಡಲಾಗಿತ್ತು. ಕಳೆದ ತಿಂಗಳು ಅಧ್ಯಕ್ಷ ವಿನ್‍ಮ್ಯಂಟ್ ಸಾವಿರದಷ್ಟು ಕೈದಿಗಳಿಗೆ ಸಾರ್ವತ್ರಿಕ ಕ್ಷಮೆ ನೀಡಿದ್ದರು. ಎಪ್ರಿಲ್ 17ಕ್ಕೆ ದೇಶ ಪರಂಪರಾಗತವಾಗಿ ಹೊಸ ವರ್ಷ ಆಚರಿಸುತ್ತಿರುವುದರ ಭಾಗವಾಗಿ ಕ್ಷಮಾದಾನ ನೀಡಲಾಗಿತ್ತು. ರಾಖ್ನೆ ಪ್ರಾಂತ್ಯದಲ್ಲಿ ರೋಹಿಂಗ್ಯನ್ ಮುಸ್ಲಿಮರ ಮೇಲೆ ನಡೆದ ಸೈನಿಕ ದಾಳಿಯನ್ನು ಬಹಿರಂಗಗೊಳಿಸಿದ್ದಕ್ಕಾಗಿ ಕಳೆದ ಡಿಸೆಂಬರ್‍ನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.
10 ರೋಹಿಂಗ್ಯನ್ ಮುಸ್ಲಿಂ ಯುವಕರನ್ನು ಕೊಲೆಮಾಡಿದ ಘಟನೆಯನ್ನು ಇವರು ಬಹಿರಂಗಕ್ಕೆ ತಂದಿದ್ದರು. ಮ್ಯಾನ್ಮಾರ್ ವರದಿಗಾರರನ್ನು ಶಿಕ್ಷೆಗೆ ಗುರಿಪಡಿಸಿದ್ದನ್ನು ಜಗತ್ತಿನಾದ್ಯಂತ ಮಾನವಹಕ್ಕು ಸಂಘಟನೆಗಳು ಬಲವಾಗಿ ವಿರೋಧಿಸಿದ್ದವು.