ಸನ್ಮಾರ್ಗ ವಾರ್ತೆ
ಹೈದರಾಬಾದ್: ಇಂದೋರ್ನಲ್ಲಿ ಝೊಮಾಟೊ ವಿತರಣಾ ಕೆಲಸಗಾರನಿಗೆ ಎದುರಾದ ಕಿರುಕುಳದ ಘಟನೆ ಬಗ್ಗೆ ತೆಲಂಗಾಣ ಗಿಗ್ ಮತ್ತು ಪ್ಲಾಟ್ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯುಯು) ತೀವ್ರ ಕಳವಳ ವ್ಯಕ್ತಪಡಿಸಿದೆ.
ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಣೆಗಾಗಿ ಸಾಂತಾ ಕ್ಲಾಸ್ ಉಡುಪು ಧರಿಸಿದ್ದ ಡೆಲಿವರಿ ಕಾರ್ಮಿಕನನ್ನು ಹಿಂದೂ ಜಾಗರಣ ಮಂಚ್ ಕಾರ್ಯಕರ್ತರು ತಡೆದು, ಉಡುಪು ತೆಗೆದು ಹಾಕುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಟಿಜಿಪಿಡಬ್ಲ್ಯುಯುವಿನ ಮೂರು ಬೇಡಿಕೆ
ಟಿಜಿಪಿಡಬ್ಲ್ಯುಯು, ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರ ಸುರಕ್ಷತೆಯ ಕುರಿತು ಸಾಂಸ್ಥಿಕ ಜವಾಬ್ದಾರಿಗಳನ್ನು ಒತ್ತಿ ಹೇಳಿದೆ. ಯೂನಿಯನ್ ಮೂರು ಪ್ರಮುಖ ಬೇಡಿಕೆಗಳನ್ನು ಮಂಡಿಸಿದೆ:
1.ಕಂಪನಿಗಳು ತಮ್ಮ ಪ್ರಚಾರ ಕಾರ್ಯಗಳಿಂದ ಕೆಲಸಗಾರರನ್ನು ಹಾನಿಗೆ ಒಳಪಡದಂತೆ ಎಚ್ಚರಿಸಬೇಕು.
2.ಎಲ್ಲಾ ಕಾರ್ಮಿಕರು ಗೌರವಕ್ಕೆ ಪಾತ್ರರಾಗಿದ್ದು, ಅವಮಾನ ಅಥವಾ ಕಿರುಕುಳಕ್ಕೆ ಒಳಗಾಗಬಾರದು.
3.ಕಂಪನಿಗಳು ಕೆಲಸಗಾರರಿಗೆ ಸೂಕ್ತ ತರಬೇತಿ ಮತ್ತು ಬೆಂಬಲ ವ್ಯವಸ್ಥೆ ಒದಗಿಸಬೇಕು.
ಝೊಮಾಟೊಗೆ ಮನವಿ
ಟಿಜಿಪಿಡಬ್ಲ್ಯುಯು Zomato ಸಿಇಒ ದೀಪಿಂದರ್ ಗೋಯಲ್ ಅವರಿಗೆ ಇಂದೋರ್ ಘಟನೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, “ಮಾರುಕಟ್ಟೆ ಪ್ರಚಾರ ಕಾರ್ಯಗಳು ಕಾರ್ಮಿಕರ ಘನತೆ ಮತ್ತು ಸುರಕ್ಷತೆಯನ್ನು ಮುಂಚೂಣಿಗೆ ತರಬೇಕು,” ಎಂದು ಸೂಚಿಸಿದೆ.
ಘಟನೆಯ ವಿವರ
ಡೆಲಿವರಿ ಏಜೆಂಟ್, ಕ್ರಿಸ್ಮಸ್ ಮಾರುಕಟ್ಟೆ ಪ್ರಚಾರಕ್ಕಾಗಿ ಸಾಂಟಾ ಉಡುಪು ಧರಿಸಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ಹಿಂದೂ ಜಾಗರಣ ಮಂಚ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ, ನೀವು ಎಂದಾದರೂ ದೀಪಾವಳಿಯಂದು ಭಗವಾನ್ ರಾಮನ ವೇಷ ಧರಿಸಿ ಜನರ ಮನೆಗಳಿಗೆ ಹೋಗಿದ್ದೀರ ಎಂದು ಗುಂಪು ಮತ್ತೆ ಪ್ರಶ್ನಿಸಿದೆ, ಇದಕ್ಕೆ ಏಜೆಂಟ್ ಇಲ್ಲ ಎಂದು ಹೇಳಿದ್ದು, ಈಗ ನನಗೆ ಕಂಪೆನಿ ಈ ವೇಷ ಭೂಷಣ ಧರಿಸಲು ಹೇಳಿದೆ ಎಂದು ಹೇಳಿದ್ದಾರೆ.
ಝಮಾಟೊ, ಹಬ್ಬದ ಹಿನ್ನೆಲೆ ಡ್ರೆಸ್ ಕೋಡ್ ಅನ್ನು ಕಡ್ಡಾಯಗೊಳಿಸಿದೆ, ಡೆಲಿವರಿ ಏಜೆಂಟ್ ಈ ಬಟ್ಟೆ ಧರಿಸಿ ಸೆಲ್ಫಿಯನ್ನು ಕಳುಹಿಸಬೇಕಿದೆ. ನಾವು ಆದೇಶವನ್ನು ಪಾಲಿಸದಿದ್ದರೆ ವೇತನ ಕಡಿತ, ಐಡಿ ಬ್ಲಾಕ್ ನಂತಹ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಏಜೆಂಟ್ ಹೇಳಿದ್ದಾರೆ. ಈ ವೇಳೆ ಸೆಲ್ಪಿಗಾಗಿ ಮಾತ್ರ ವೇಷಭೂಷಣವನ್ನು ಧರಿಸುವಂತೆ ಗುಂಪು ಡೆಲಿವರಿ ಏಜೆಂಟ್ ಗೆ ಹೇಳಿದೆ.
ಘಟನೆಗೆ ತೀವ್ರ ಪ್ರತಿಕ್ರಿಯೆ
ಈ ಘಟನೆ ಡೆಲಿವರಿ ಬಾಯ್ಗಳ ಹಕ್ಕುಗಳು, ಗೌರವ ಮತ್ತು ಸುರಕ್ಷತೆಯ ಬಗ್ಗೆ ದೇಶಾದ್ಯಂತ ಚರ್ಚೆ ಆರಂಭಿಸಿದೆ. ಸಂಸ್ಥೆಗಳು ಮತ್ತು ಸಮಾಜವು ಇಂತಹ ಹಿಂಸಾತ್ಮಕ ಪ್ರಕ್ರಿಯೆಗಳನ್ನು ತಡೆಗಟ್ಟಲು ಇನ್ನಷ್ಟು ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ವೃತ್ತಿಪರ ವಲಯಗಳು ಒತ್ತಾಯಿಸುತ್ತಿವೆ.












