ಭಾರತದಲ್ಲಿ ಸಟಾನಿಕ್ ವರ್ಸಸ್ ಕಾದಂಬರಿ ಮತ್ತೆ ಮಾರಾಟ: ಮುಸ್ಲಿಂ ಸಂಘಟನೆಗಳ ಆಕ್ಷೇಪ

0
477

ಸನ್ಮಾರ್ಗ ವಾರ್ತೆ

ಸಲ್ಮಾನ್ ರುಷ್ದಿಯವರ ವಿವಾದಾತ್ಮಕ ಕಾದಂಬರಿ ದಿ ಸಟಾನಿಕ್ ವರ್ಸಸ್ ಪುಸ್ತಕ ಭಾರತದಲ್ಲಿ 37 ವರ್ಷಗಳ ಬಳಿಕ ಮತ್ತೆ ಮಾರಾಟವಾಗುತ್ತಿದ್ದು ಈ ಬಗ್ಗೆ ಮುಸ್ಲಿಂ ಸಮುದಾಯದ ಹಲವು ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿವೆ. ಮತ್ತು ಸರ್ಕಾರ ಈ ಬಗ್ಗೆ ಮರು ಆಲೋಚಿಸಬೇಕು ಎಂದು ಆಗ್ರಹಿಸಿವೆ.

ಈ ಕಾದಂಬರಿಯನ್ನು 1988ರಲ್ಲಿ ರಾಜೀವ್ ಗಾಂಧಿ ಸರಕಾರ ಬ್ಯಾನ್ ಮಾಡಿತ್ತು. ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಮುಹಮ್ಮದರ ಬಗ್ಗೆ ನಿಂದನೀಯವಾಗಿ ಈ ಕಾದಂಬರಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಇರಾನ್ ನ ಧಾರ್ಮಿಕ ಮುಖಂಡ ಆಯತುಲ್ಲ ಕಾಮಿನಯ್ ಯವರು ರಶ್ಡಿ ತಲೆಗೆ ಬಹುಮಾನ ಘೋಷಿಸುವುದರೊಂದಿಗೆ ಈ ಕಾದಂಬರಿ ಮತ್ತು ರಶ್ದಿ ಜಾಗತಿಕವಾಗಿ ಗುರುತಿಗೀಡಾದರು.. ಬಳಿಕ ಈ ಪತ್ವದಿಂದ ಇರಾನ್ ಆಡಳಿತ ಅಂತರವನ್ನು ಕಾಯ್ದುಕೊಂಡಿತು. ಬಳಿಕ ರಶ್ದಿಯವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದರು.

2022 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೈದಿ ಮತರ್ ಅನ್ನುವ 26 ವರ್ಷದ ಯುವಕ ಅವರಿಗೆ ಚೂರಿಯಿಂದ ಇರಿದ ಮತ್ತು ಅವರ ಒಂದು ಕಣ್ಣಿಗೆ ಗಂಭೀರ ಗಾಯವಾಯಿತು.

ಇದೀಗ ದೆಹಲಿಯ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಈ ಸಟಾನಿಕ್ ವರ್ಸಸ್ ಮತ್ತೆ ಕಾಣಿಸಿಕೊಂಡಿದೆ ಮತ್ತು ಎಕ್ಸ್ ಜಾಲತಾಣದಲ್ಲಿ ಅದರ ಪ್ರಚಾರವನ್ನು ಮಾಡಲಾಗಿದೆ.

ಜಮಿಯತೆ ಉಲಮಾಯೇ ಹಿಂದ್, ಆಲ್ ಇಂಡಿಯಾ ಶಿಯಾ ಪರ್ಸನಲ್ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಯೂಸುಫ್ ಅಬ್ಬಾಸ್, ಆಲ್ ಇಂಡಿಯಾ ಮುಸ್ಲಿಂ ಜಮಾತ್ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಮುಫ್ತಿ ಶಹಾಬುದ್ದೀನ್ ರಿಜ್ವಿ, ಆಲ್ ಇಂಡಿಯಾ ಮಜಿಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಸಹಿತ ವಿವಿಧ ಸಂಘಟನೆಗಳು ಮತ್ತು ನೇತಾರರು ಈ ಪುಸ್ತಕ ಮಾರಾಟದ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರಧಾನಿ ಮಧ್ಯಪ್ರವೇಶಿಸಿ ಪುಸ್ತಕ ಮಾರಾಟಕ್ಕೆ ತಡೆವಿಧಿಸಬೇಕೆಂದು ಕೋರಿದ್ದಾರೆ.