ಗೋಧಿ ಮೀಡಿಯಾ ಆಂಕರ್ ಗಳನ್ನು ಬೆತ್ತಲೆ ಮಾಡಿದ ಆರ್ ಎಸ್ ಎಸ್ ನಾಯಕ

0
583

ಸನ್ಮಾರ್ಗ ವಾರ್ತೆ

✍️ ಅಮಾನ್ ಕೆ

ಕೇಂದ್ರ ಸರ್ಕಾರದ ಪಾದ ಸೇವೆ ಮಾಡುತ್ತಾ ಗೋಧಿ ಮೀಡಿಯ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಮುಖ್ಯ ವಾಹಿನಿಯ ಟಿವಿ ಚಾನೆಲ್ ಗಳ ಬಗ್ಗೆ ನಿಮಗೆ ಈಗಾಗಲೇ ಗೊತ್ತಿರಬಹುದು. ಈ ಚಾನೆಲ್ ಗಳು ನಡೆಸುವ ಟಿಬೇಟ್ ಗಳಲ್ಲಿ ಆಂಕರ್ ಮೋದಿ ಸರಕಾರದ ವಕ್ತಾರಗಿರಿ ಮಾಡುವುದು ಮಾಮೂಲು. ನಾಚಿಕೆ ಮಾನ ಮರ್ಯಾದೆ ಇತ್ಯಾದಿ ಪದಗಳನ್ನೇ ಅವಮಾನಿಸುವಷ್ಟು ಈ ಮೀಡಿಯಾಗಳು ಈಗ ಬೆತ್ತಲಾಗಿ ಬಿಟ್ಟಿವೆ.

ಇದೀಗ ಅಳಿದುಳಿದ ಮಾನವನ್ನೂ ರಾಕೇಶ್ ಸಿನ್ಹಾ ಎಂಬ ದೆಹಲಿ ಯೂನಿವರ್ಸಿಟಿಯ ಮಾಜಿ ಪ್ರೊಫೆಸರ್ ಮತ್ತು ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ಹರಾಜಿಗೆಟ್ಟಿದ್ದಾರೆ.

ಹಾಗಂತ, ಇವರೇನೂ ಸಾಚಾ ಅಲ್ಲ. ಆರ್ ಎಸ್ ಎಸ್ ಚಿಂತಕರಾಗಿ ಗುರುತಿಸಿಕೊಂಡಿರುವ ಇವರ ಟ್ರ್ಯಾಕ್ ರೆಕಾರ್ಡ ಏನೂ ಭಾರಿ ಉತ್ತಮವಾಗಿಯೇನೂ ಇಲ್ಲ. ಆದ್ರೆ ಇವರು ಇದೀಗ ನಯೀ ದುನಿಯಾ ನ್ಯಾಷನಲ್ ಫೋರಮ್ ಏರ್ಪಡಿಸಿದ್ದ ಸಾರ್ವಜನಿಕ ಸಭೆ ಒಂದರಲ್ಲಿ ಹೇಳಿರುವ ಗುಟ್ಟು ಗೋಧಿ ಮೀಡಿಯಾಗಳ ಮುಖವನ್ನ ವಿವರ್ಣಗೊಳಿಸಿದೆ.

ಇಂದಿನ ಭಾರತದಲ್ಲಿ ಮುಸ್ಲಿಮರ ಭವಿಷ್ಯ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತಾಡುತ್ತಾ ಕೆಲವು ಸತ್ಯಗಳನ್ನು ಹೇಳಿದ್ದಾರೆ.

ಒಂದು ದಿನ ಮುಖ್ಯವಾಹಿನಿಯ ಟಿವಿ ಚಾನಲ್ ಆಂಕರ್ ತನಗೆ ಕರೆ ಮಾಡಿದ. ನೀವು ನೀಡುವ ಹೇಳಿಕೆಯಿಂದಲೇ ನಾನಿವತ್ತಿನ ಡಿಬೇಟ್ ಅನ್ನು ಆರಂಭಿಸುವುದಾಗಿ ಹೇಳಿದ. ಮಾತ್ರ ಅಲ್ಲ ನೀವು ಹೇಗೆ ಮಾತಾಡಬೇಕು ಅಂತಲೂ ನನಗೆ ಪಾಠ ಮಾಡಿದ. ಗಡ್ಡ ಟೋಪಿಯ ಬಗ್ಗೆ ನೀವು ಕೆಟ್ಟದಾಗಿ ಮಾತಾಡಬೇಕು. ಬೈಗುಳವನ್ನು ಸುರಿಸಬೇಕು. ಎಲ್ಲಿವರೆಗೆ ಎಂದರೆ ನೀವು ಜಗಳಾಡಬೇಕು. ಆಗ ನಾನು ಜಗಳ ಬಿಡಿಸಿದಂತೆ ನಟಿಸುತ್ತೇನೆ ಎಂದೆಲ್ಲ ಆತ ತನಗೆ ಹೇಳಿಕೊಟ್ಟ. ಡಿಬೇಟಿಗೆ ಬರಬೇಕು ಎಂದು ಹೇಳಿದ. ಆಗಬಹುದು ಎಂದು ನಾನು ಹೇಳಿದೆ. ಆತ ನನಗೆ ಹೀಗೆ ಪಾಠ ಮಾಡುವಾಗ ನಾನು ಲೈಬ್ರೆರಿಯಲ್ಲಿದ್ದೆ. 2016ರಲ್ಲಿ ನಡೆದ ಘಟನೆ ಇದು.

ಆ ಬಳಿಕ ಆ ಚಾನೆಲ್ ನನ್ನನ್ನು ಕರಕೊಂಡು ಹೋಗುವುದಕ್ಕೆ ಕಾರನ್ನು ಕಳುಹಿಸಿತು. ನಾನು ಬರಲ್ಲ ಅಂದೆ. ಬಂದವ ಯಾಕೆ ಸಾರ್ ಎಂದು ಪ್ರಶ್ನಿಸಿದ. ನೀವು ಹೇಳಿದ ಡೈಲಾಗನ್ನು ಹಲವು ಬಾರಿ ನಾನು ಕನ್ನಡಿಯ ಮುಂದೆ ನಿಂತು ರಿಹರ್ಸಲ್ ಮಾಡಿದೆ. ನನ್ನ ಮುಖವನ್ನು ನೋಡಿದೆ. ನಾನು ತುಂಬಾ ಎತ್ತರವಾಗಿದ್ದೇನೆ ಸ್ಫುರದ್ರೂಪಿಯಾಗಿದ್ದೇನೆ ಎಂದು ಅನಿಸ್ತು. ಹೀಗಿರುವಾಗ ನಿಮ್ಮ ಚಾನೆಲ್ ಗೆ ಬಂದು ರಿಹರ್ಸಲ್ ಮಾಡಿದ ಡೈಲಾಗನ್ನು ಹೇಳೋದಕ್ಕಿಂತ ಸಿನಿಮಾ ಕ್ಷೇತ್ರವನ್ನು ಯಾಕೆ ಸೇರಬಾರದು ಅಂತ ಅಂದುಕೊಂಡೆ ಎಂದು ಹೇಳಿ ಆ ಕಾರ್ ಡ್ರೈವರ್ ಅನ್ನು ಸಾಗ ಹಾಕಿದೆ ಎಂದವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿಶೇಷ ಏನೆಂದರೆ ಈ ರಾಕೇಶ್ ಸಿನ್ಹ ಸಾಚಾ ಏನೂ ಅಲ್ಲ. ಧರ್ಮ ದ್ವೇಷದ ಹಲವು ವಿವಾದಾತ್ಮಕ ಹೇಳಿಕೆಗಳಿಗೆ ಈಗಾಗಲೇ ಕೇಸುಗಳನ್ನು ಹಾಕಿಸಿಕೊಂಡವರು. 2017ರಲ್ಲಿ ಪಶ್ಚಿಮ ಬಂಗಾಳದ ಬಸಿರ್ಹತ್ ಪ್ರದೇಶದಲ್ಲಿ ಕೋಮು ಘರ್ಷಣೆ ನಡೆದಿತ್ತು. ಹಿಂದು ಯುವಕ ಅತ್ಯಂತ ಪ್ರಚೋದನಕಾರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ. ಆ ಬಳಿಕ ಘರ್ಷಣೆ ಮುಗಿಲೆದ್ದು ಒಬ್ರು ಸಾವಿಗಿಡಾಗಿದ್ರು. ಹಲವು ಮಂದಿಗೆ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದ ಆರೋಪದಲ್ಲಿ ಇದೇ ರಾಕೇಶ್ ಸಿನ್ಹ ಅವರ ವಿರುದ್ಧ ಪಶ್ಚಿಮ ಬಂಗಾಳದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇವರು ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಬರಹ ಹಂಚಿಕೊಂಡಿದ್ದಾರೆ ಅನ್ನುವುದು ಅವರ ಮೇಲಿನ ಆರೋಪವಾಗಿತ್ತು.

ರಾಜ್ಯಸಭಾ ಸದಸ್ಯರಾಗುವುದಕ್ಕಿಂತ ಮೊದಲು ಮತ್ತು ರಾಜ್ಯಸಭಾ ಸದಸ್ಯರಾದ ಬಳಿಕವೂ ಅವರು ಹಲವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. ರಾಹುಲ್ ಗಾಂಧಿಯ ವಿರುದ್ಧ ನಿಂದನೀಯ ಭಾಷೆಯಲ್ಲಿ ಮಾತಾಡಿದ್ರು. ಆರ್ ಎಸ್ ಎಸ್ ಪರವಾಗಿ ಸದಾ ಬ್ಯಾಟ್ ಬೀಸುತ್ತಾ ಸಂದರ್ಭ ಸನ್ನಿವೇಶವನ್ನು ನೋಡಿಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನು ಮತ್ತು ಟ್ವೀಟುಗಳನ್ನು ಮಾಡುತ್ತಾ ಬಂದಿರುವ ರಾಕೇಶ ಸಿನ್ಹ ಅವರು ಇದೀಗ ತನ್ನ ಗತ ಪಾಪಗಳನ್ನ ನೆನಪಿಸಿಕೊಂಡಿದ್ದಾರೆ.

ನಾನು ಟೋಪಿ ತೆಗೆಯಲು ಬಂದವನಲ್ಲ ಟೋಪಿಯನ್ನು ಉಳಿಸಲು ಬಂದವ ಎಂದು ಕೂಡ ಈ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ನಿಜವಾಗಿ ಇಲ್ಲಿ ಪ್ರಶ್ನೆ ಇರುವುದು ರಾಕೇಶ ಸಿನ್ಹ ಅವರದಲ್ಲ.. ಮುಖ್ಯ ವಾಹಿನಿಯ ಚಾನೆಲ್ ಗಳು ಡಿಬೇಟ್ ಹೆಸರಲ್ಲಿ ಮಾಡ್ತಾ ಇರುವ ಕಾರ್ಯಕ್ರಮಗಳು ಎಷ್ಟು ನಕಲಿಯಾಗಿವೆ ಎಂಬುದನ್ನು ಇವರ ಮಾತುಗಳು ಸೂಚಿಸುತ್ತವೆ. ಡಿಬೇಟ್ ಗೆ ಬರುವ ಅತಿಥಿಗಳಿಗೆ ಆಂಕರ್ ಗಳು ಮೊದಲೇ ಕರೆ ಮಾಡಿ ನೀವು ಹೀಗೆ ಮಾತಾಡ್ಬೇಕು, ಎದುರಾಳಿಯ ವಿರುದ್ಧ ಹೀಗೆಲ್ಲ ಬೈಗುಳ ಸುರಿಸಬೇಕು ಹೀಗೆಲ್ಲ ಕಾಲೆಳೆಯಬೇಕು ಜಗಳ ಮಾಡಬೇಕು ಎಂದಲ್ಲ ಹೇಳಿಕೊಟ್ಟು ಆ ಬಳಿಕ ಅದನ್ನು ಡಿಬೇಟ್ ನ ಹೆಸರಲ್ಲಿ ಕ್ಯಾಮರಾದಲ್ಲಿ ಸೆರೆ ಹಿಡಿದು ತೋರಿಸುವ ಅತ್ಯಂತ ನೀಚ ಮಟ್ಟಕ್ಕೆ ಟಿವಿ ಚಾನೆಲ್ ಗಳು ಇಳಿದಿರುವುದು ಇವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

ನಿಜವಾಗಿ ಗೋದಿ ಮೀಡಿಯ ಎಂದು ಹೇಳಿ ನಿರ್ಲಕ್ಷಿಸುವ ಪ್ರಕರಣ ಇದಲ್ಲ. ಈಗಾಗಲೇ ಈ ಟಿವಿ ಚಾನೆಲ್ ಗಳು ನಡೆಸಿದ ಡಿಬೇಟ್ ಕಾರ್ಯಕ್ರಮಗಳಿಂದಾಗಿ ಹಲವು ಕೋಮು ಗಲಬೆಗಳಾಗಿವೆ. ಅನೇಕ ಪ್ರಚೋದನಕಾರಿ ಹೇಳಿಕೆಗಳು ಬಂದಿವೆ. ಇಂಥದ್ದೇ ಟಿಬೇಟ್ ನಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರು ಪ್ರವಾದಿಯನ್ನು ನಿಂದಿಸಿದ್ದರು. ಇಂತಹ ಹತ್ತು ಹಲವು ವಿವಾದಾತ್ಮಕ ಹೇಳಿಕೆಗಳು ಟಿವಿ ಚಾನೆಲ್ ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ಪ್ರಸಾರವಾದದ್ದಿದೆ. ಇವುಗಳಿಂದಾಗಿ ಉದ್ವಿಗ್ನ ಸ್ಥಿತಿ ಕೋಮು ಗಲಭೆಗಳು ನಡೆದದ್ದೂ ಇದೆ. ರಾಕೇಶ್ ಸಿನ್ಹ ಅವರು ಇಂತಹ ಕಾರ್ಯಕ್ರಮಗಳು ಹೇಗೆ ಮೊದಲೇ ನಿರ್ದೇಶಿಸಲ್ಪಟ್ಟಿರುತ್ತವೆ ಮತ್ತು ಹೇಗೆ ಪೂರ್ವಯೋಜಿತವಾಗಿರುತ್ತವೆ ಅನ್ನೋದನ್ನ ಹೇಳಿದ್ದಾರೆ.

ಹಾಗಂತ ಈ ಮೊದಲೇ ಈ ಬಗ್ಗೆ ಅನುಮಾನಗಳಿದ್ದುವಾದರೂ ಇಂತಹ ಸ್ಪಷ್ಟ ಸಾಕ್ಷಿ ಸಿಕ್ಕಿರಲಿಲ್ಲ. ಇನ್ನು ಇಂತಹ ಚಾನೆಲ್‌ಗಳ ಕಾರ್ಯಕ್ರಮಗಳನ್ನು ವೀಕ್ಷಿಸಬೇಕೋ ಬೇಡ್ವೋ ಅನ್ನೋದನ್ನ ತೀರ್ಮಾನಿಸಬೇಕಾದದ್ದು ವೀಕ್ಷಕರು.

ಡಬ್ಲ್ಯೂಡಬ್ಲ್ಯೂಎಫ್ ಎಂಬ ಕುಸ್ತಿ ಪಂದ್ಯಾಟ ಗೊತ್ತಲ್ಲ. ಅದು ಕೂಡ ಹೀಗೆಯೇ ಪೂರ್ವ ನಿರ್ಧರಿತ ಆಗಿರುತ್ತದೆ ಎಂದು ಹೇಳಲಾಗುತ್ತೆ, ಅದು ಮನರಂಜನೆ ಎಂದೇ ತನ್ನನ್ನು ಗುರುತಿಸಿಕೊಂಡಿದೆ. ಆದರೆ ಇಬ್ಬರು ಕುಸ್ತಿಪಟುಗಳು ಭಯಂಕರ ಕಾದಾಡುವ ರೀತಿಯಲ್ಲಿ ಅದನ್ನು ಹೆಣೆಯಲಾಗಿದೆ. ನಮ್ಮ ಟಿವಿ ಚಾನೆಲ್‌ಗಳ ಟಿಬೇಟ್ ಗಳು ಕೂಡ ಹೀಗೆಯೇ ಮನರಂಜನೆಯ ಸ್ವರೂಪದಲ್ಲಿ ಇರುತ್ತವೆ ಅನ್ನುವುದನ್ನು ಈ ರಾಕೇಶ್ ಸಿನ್ಹ ಪ್ರಕರಣ ಸ್ಪಷ್ಟಪಡಿಸಿದೆ. ಅಲ್ಲಿ ಡಿಬೇಟ್ ನಡೆಯುವುದಿಲ್ಲ, ಟಿಆರ್‌ಪಿಗಾಗಿ ರಿಹರ್ಸಲ್ ನಡೆಯುತ್ತದೆ ಅನ್ನೋದನ್ನ ರಾಕೇಶ್ ಸಿನ್ಹ ಬಹಿರಂಗಪಡಿಸಿದ್ದಾರೆ.

ಸತ್ಯವನ್ನು ಬಹಿರಂಗ ವೇದಿಕೆಯಲ್ಲಿ ಹಂಚಿಕೊಂಡ ರಾಕೇಶ್ ಸಿನ್ಹಾ ಅವರಿಗೆ ಧನ್ಯವಾದ