ಪೈಲೆಟ್ ಆದ ಮೌಲಾನಾರ ಮಗಳು

0
451

ಸನ್ಮಾರ್ಗ ವಾರ್ತೆ

✍️ ಅಮಾನ್ ಕೆ

ಮೌಲಾನಾರ ಮಕ್ಕಳು ಪೈಲೆಟ್ ಆಗುವುದಕ್ಕೆ ಸಾಧ್ಯವೇ? ಅದರಲ್ಲೂ ಹೆಣ್ಣು ಮಗಳು ಪೈಲೆಟ್ ಆಗುವುದನ್ನು ಊಹಿಸಲು ಸಾಧ್ಯವೇ? ಮೌಲಾನಾರ ಮಕ್ಕಳೆಂದರೆ ರ ಕುರಾನ್ ಅನ್ನು ಓದುತ್ತಾ ಧರ್ಮದ ಕಟ್ಟಳೆಗಳನ್ನು ಪಾಲಿಸುತ್ತಾ ನಮಾಜು ಮಾಡುತ್ತಾ ಇರಬೇಕಾದವರು ಎಂಬ ಸಾಮಾನ್ಯ ತಿಳುವಳಿಕೆಯನ್ನು ಮೀರಿ ಓರ್ವ ಮೌಲಾನಾರ ಮಗಳು ಪೈಲೆಟ್ ಆದರೆ ಅದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಇಲ್ಲೊಂದು ಅಂತದ್ದೇ ಕಥೆ ಇದೆ.

ಈ ಹೆಣ್ಣು ಮಗಳ ಹೆಸರು ಮರಿಯಮ್ ಜುಮಾನ. 19ನೇ ವಯಸ್ಸಿನಲ್ಲಿ ವಿಮಾನವನ್ನು ಹಾರಿಸಿ ಈಕೆ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಈಕೆ ಮಲಪುರಂ ಜಿಲ್ಲೆಯ ಹೆಣ್ಣು ಮಗಳು. ತಂದೆ ಉಮರ್ ಫೈಝಿ. ತಾಯಿ ಉಮೇರಾ ಬಾನು. ಮನಸಿದ್ದರೆ ಮತ್ತು ಹೆತ್ತವರ ಬೆಂಬಲ ಇದ್ದರೆ ಆಕಾಶವನ್ನೇ ಶರಣಾಗಿಸಬಹುದು ಎಂದು ಸಾಧಿಸಿ ತೋರಿಸಿದ ಛಲವಂತೆ ಈ ಮರಿಯಂ ಜುಮಾನ.

ಪೈಲೆಟ್ ಸೀಟ್ ನಲ್ಲಿ ಕುಳಿತು ಮೊದಲ ಬಾರಿ ವಿಮಾನವನ್ನು ಹಾರಿಸುವಾಗ ಭಯಕ್ಕಿಂತಲೂ ಹೆಚ್ಚು ಕುತೂಹಲವಿತ್ತು. ಹತ್ತನೇ ಕ್ಲಾಸಿನಿಂದಲೇ ನಾನು ಅತಿಯಾಗಿ ಬಯಸಿದ ಕ್ಷೇತ್ರ ಇದಾಗಿತ್ತು. ಪೈಲೆಟ್ ಯುನಿಫಾರ್ಮ್ ಧರಿಸಿ ಪೈಲೆಟ್ ಸೀಟಲ್ಲಿ ಕುಳಿತುಕೊಳ್ಳುವಾಗ ಆದ ಆನಂದ ಭಯವನ್ನೆಲ್ಲ ಓಡಿಸಿತು ಎಂದು ಈ ಜುಮಾನ ಹೇಳುತ್ತಾಳೆ.

ನಾನು ಎಲ್ಲವನ್ನೂ ತಾಯಿಯೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಮೊದಲಾಗಿ ಏನನ್ನು ಹೇಳುವುದಿದ್ದರೂ ಅದು ನನ್ನ ತಾಯಿಯ ಜೊತೆಗಾಗಿತ್ತು. ನಂಗೆ ಪೈಲೆಟ್ ಆಗಬೇಕು ಎಂದು ತಾಯಿಯಲ್ಲಿ ಹೇಳಿದೆ. ಅವರು ಪಾಸಿಟಿವ್ ಆಗಿ ಉತ್ತರಿಸಿದ್ರು. ಅಪ್ಪನೂ ಜೊತೆಗೂಡಿದ್ರು ಎಂದು ಈ ಜುಮಾನ ಹೇಳಿದ್ದಾಳೆ.

ನಾನು ಪಿಯುಸಿಯಲ್ಲಿ ಸೈನ್ಸ್ ಆಯ್ದುಕೊಂಡೆ ಎಂದು ಹೇಳುವ ಈ ಜುಮಾನ ಇದೀಗ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ ಪಡೆಯುವುದಕ್ಕಾಗಿ ತನ್ನ ಗಮನವನ್ನು ಕೇಂದ್ರೀಕರಿಸಿದ್ದಾಳೆ. ಫ್ಲೈಯಿಂಗ್ ಅಕಾಡೆಮಿಗೆ ಸೇರ್ಪಡೆಗೊಳ್ಳುವಾಗ ಬರಹದ ಮೂಲಕ ಮತ್ತು ಇಂಟರ್ವ್ಯೂ ಮೂಲಕ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಪಾಸಾದರೆ ಸ್ಟುಡೆಂಟ್ ಪೈಲೆಟ್ ಲೈಸೆನ್ಸ್ ಸಿಗುತ್ತದೆ. ನನ್ನ ಈವರೆಗಿನ ಜರ್ನಿಯಲ್ಲಿ ಸಾಕಷ್ಟು ಹಣವನ್ನ ಖರ್ಚು ಮಾಡಬೇಕಾಯಿತು. ಅದು ನಮ್ಮ ಸಾಮರ್ಥ್ಯಕ್ಕಿಂತ ಹೊರಗಿನದ್ದಾಗಿತ್ತು. ಕುಟುಂಬ ನನ್ನ ಜೊತೆಗಿದ್ದ ಕಾರಣದಿಂದಲೇ ನನಗಿದೆಲ್ಲ ಸಾಧ್ಯವಾಯಿತು ಎಂದು ಮರಿಯಂ ಜುಮಾನ ಹೇಳಿದ್ದಾಳೆ.

ನಂಗೆ ರೋಲ್ ಮಾಡೆಲ್ ಅಂತ ಯಾರೂ ಇಲ್ಲ. ಸ್ವತ ನಾನು ಇಷ್ಟಪಟ್ಟು ಆರಿಸಿದ ಕ್ಷೇತ್ರ ಇದು. ತೀರ ಸಣ್ಣವಳಿರುವಾಗಲೇ ನಾನು ಈ ವಿಮಾನ, ಆಕಾಶ, ಪೈಲೆಟ್, ಯುನಿಫಾರ್ಮ್ ಇತ್ಯಾದಿಗಳ ಕನಸು ಕಂಡೆ. ಆ ಕಾರಣದಿಂದಲೇ ನಾನು ಈಗ ಇಲ್ಲಿಯವರೆಗೆ ತಲುಪಿದ್ದೇನೆ. ಹೆಣ್ಣು ಎಂಬ ಕಾರಣಕ್ಕಾಗಿ ಹೆಣ್ಣಿನ ಮೇಲೆ ಹಲವು ಕಟ್ಟಳೆಗಳನ್ನು ವಿಧಿಸುವ ಸಮಾಜ ನಮ್ಮದು. ನನ್ನ ಈ ಜರ್ನಿಯಲ್ಲೂ ಇಂತಹ ಹಲವು ಅಡೆತಡೆಗಳನ್ನು ಎದುರಿಸಿದೆ ಎಂದು ಈ ಹೆಣ್ಣು ಮಗಳು ಹೇಳಿದ್ದಾಳೆ.

ಆದರೆ ಯಾವುದೇ ನೆಗೆಟಿವ್ ಮಾತುಗಳನ್ನು ನಾನು ತಲೆಗೆ ಹಚ್ಚಿಕೊಳ್ಳಲಿಲ್ಲ. ಪಾಸಿಟಿವ್ ಮಾತುಗಳನ್ನಷ್ಟೇ ನಾನು ಪರಿಗಣಿಸಿದೆ. ನನ್ನಂತೆ ಪೈಲೆಟ್ ಆಗುವುದಕ್ಕೆ ಬಯಸುವ ಹೆಣ್ಣು ಮಕ್ಕಳು ಹೀಗೆಯೇ ಪಾಸಿಟಿವ್ ಆಗಿ ಆಲೋಚಿಸಿ ಮುಂದೆ ಸಾಗಿದರೆ ತಮ್ಮ ಕನಸಿನ ಗುರಿಯೆಡೆಗೆ ಸಾಗಬಹುದು ಎಂದು ಈ ಜುಮಾನ ಹೇಳಿದ್ದಾಳೆ.