ಸನ್ಮಾರ್ಗ ವಾರ್ತೆ
✍️ ಪ್ರಸನ್ನನ್
ಹುಟ್ಟಿ ಬೆಳೆದ ಮಕ್ಕಾದ ಮಣ್ಣಿನಿಂದ ಮದೀನದತ್ತ ಹಿಜಿರಾ ಹೋಗಬೇಕಾಗಿ ಬಂದ ಅಲ್ಲಾಹನ ಪ್ರವಾದಿ ಮತ್ತು ಅನುಯಾಯಿಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಬೇಕೆಂಬ ಉದ್ದೇಶದಿಂದ ಬದ್ರ್ ಯುದ್ಧ ನಡೆಸಿದ್ದರು. “ಅಲ್ಲಾಹನೇ ಈ ಹೋರಾಟದಲ್ಲಿ ನಾವೇನಾದರೂ ಸೋತು ಹೋದರೆ ನಿನ್ನನ್ನು ಮಾತ್ರ ಆರಾಧಿಸಲು ಬೇರೆ ಯಾವ ಸಮೂಹವೂ ಇಲ್ಲಿ ಉಳಿಯುವುದಿಲ್ಲ.”
ಪ್ರವಾದಿವರ್ಯರು(ಸ) ಈ ರೀತಿ ಪ್ರಾರ್ಥಿಸಬೇಕಾಗಿ ಬಂದಿರುವುದು ಹೋರಾಟದ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ನಿರ್ಣಾಯಕವಾದ ಈ ಯುದ್ಧದಲ್ಲಿ ಮುಸ್ಲಿಮರ ಪರವಾಗಿ ಯಶಸ್ಸು ಲಭಿಸಿದರೂ ಪ್ರವಾದಿವರ್ಯರು(ಸ) ಮತ್ತು ಅನುಯಾಯಿಗಳಿಗೆ ಅಲ್ಲಿ ನಿರ್ವಹಿಸಲು ಸಾಕಷ್ಟು ದೌತ್ಯಗಳಿದ್ದುವು. ಈ ಮಧ್ಯೆ ಹಲವು ಸಹಾಬಿಗಳು ತಮ್ಮ ಯುದ್ಧಾನುಭವಗಳನ್ನು ಪ್ರವಾದಿವರ್ಯರಲ್ಲಿ(ಸ) ವಿವರಿಸುತ್ತಿದ್ದರು. ದೇಹದಲ್ಲೆಲ್ಲಾ ಗಾಯವಾಗಿ ಬಟ್ಟೆಗಿಂತ ದೇಹ ಪ್ರದರ್ಶನವಾಗಿ ಯುದ್ಧದಲ್ಲಾದ ಗಾಯಗಳೊಂದಿಗೆ ಮುಜದ್ದರ್ ಬಿನ್ ಝಿಯಾದ್ ಗೆಲುವಿನ ಸಂತಸ ಮನದಲ್ಲಿ ತುಂಬಿ ತುಳುಕಿಸಿಕೊಂಡು ಮುಖದಲ್ಲಿ ಆತಂಕ ಮತ್ತು ದುಃಖದೊಂದಿಗೆ ಅಗಮಿಸಿದರು. ಪ್ರವಾದಿವರ್ಯ(ಸ)ರೊಂದಿಗೆ ತನ್ನ ಅನುಭವಗಳನ್ನು ವಿವರಿಸ ತೊಡಗಿದರು. “ನನಗೆ ಅಬ್ದುಲ್ ಬುಕ್ತರಿ ಬಿನ್ ಹಿಶಾಮ್ ನನ್ನು ಎದುರಿಸಬೇಕಾಗಿ ಬಂತು. ಅವರು ನನ್ನ ಮುಂದೆ ಖಡ್ಗದೊಂದಿಗೆ ಬಂದಾಗಲೆಲ್ಲಾ ನಾನು ಅವರನ್ನು ಬಿಟ್ಟು ಬೇರೆಡೆಗೆ ತಿರುಗುತ್ತಿದ್ದೆ. ಆಗ ಅವರು ನನ್ನೊಂದಿಗೆ ನೀವು ಯಾಕೆ ನನ್ನೊಂದಿಗೆ ಹೋರಾಡುತ್ತಿಲ್ಲ ಎಂದು ಕೇಳಿದರು. “ಯುದ್ದ ಭೂಮಿಯಲ್ಲಿ ನೀವು ಎದುರು ಬಂದರೆ ನಿಮ್ಮನ್ನು ವಧಿಸಬಾರದು” ಎಂದು ಪ್ರವಾದಿವರ್ಯರು(ಸ) ತಾಕೀತು ನೀಡಿದ್ದನ್ನು ನಾನು ಹೇಳಿದೆನು.
“ನನ್ನೊಂದಿಗೆ ನನ್ನ ಮಿತ್ರ ಜಿನಾದ ಬಿನ್ ಮಲೀಹ ಇದ್ದಾನೆ. ಆತನಿಗೂ ಈ ರಿಯಾಯಿತಿ ಇದೆಯೇ?” ಎಂದು ಕೇಳಿದರು
“ಮಿತ್ರನ ಬಗ್ಗೆ ಪ್ರವಾದಿವರ್ಯರು(ಸ) ಹೇಳಿಲ್ಲ. ಆದ್ದರಿಂದ ಅವರನ್ನು ಈ ರಿಯಾಯಿತಿಗೆ ಒಳಪಡಿಸಲಾಗದು.”
“ಹಾಗಾದರೆ ನಾವು ಜೊತೆಯಾಗಿ ಹೋರಾಡುವೆವು. ಆಪತ್ತಿನ ಸಂದರ್ಭದಲ್ಲಿ ಮಿತ್ರನನ್ನು ಕಾಪಾಡದೆ ಬಿಟ್ಟು ಹೋದ ಎಂದು ನಮ್ಮ ಮಹಿಳೆಯರು ಹೇಳುವುದನ್ನು ಕೇಳಲು ನನ್ನಿಂದಾಗದು” ಎನ್ನುತ್ತಾ ಖಡ್ಗ ತಗೆದು ಅವರು ಸಂಘರ್ಷಕ್ಕಿಳಿದರು. ಹೇಗಾದರೂ ಮಾಡಿ ಅವರನ್ನು ಸೆರೆಹಿಡಿದು ನಿಮ್ಮ ಮುಂದೆ ತರಲು ಪ್ರಯತ್ನಿಸಿದೆ. ಆದರೆ ನನ್ನ ಶ್ರಮ ವಿಫಲವಾಯಿತು. ಕೊನೆಗೆ ಅವರನ್ನು ನನಗೆ ಅನಿವಾರ್ಯವಾಗಿ ಕೊಲ್ಲಬೇಕಾಯಿತು. ಪ್ರವಾದಿಗಳೇ” ಎಂದು ಅಳುತ್ತಾ ಮುಜದ್ದಿರ್ ಹೇಳಿದರು.
ಆಗ ಪ್ರವಾದಿವರ್ಯರು(ಸ), “ಈ ವಿಷಯದಲ್ಲಿ ನಿಮ್ಮನ್ನು ತಪ್ಪಿತಸ್ಥನೆಂದು ಆಕ್ಷೇಪಿಸುವಂತಿಲ್ಲ. ಅಬುಲ್ ಬುಖ್ತಾರ್ನೊಂದಿಗಿರುವ ಒಂದು ದೊಡ್ಡ ಉಪಕಾರವನ್ನು ಸ್ಮರಿಸಿ ನಾನು ಹೀಗೆ ಹೇಳಿದ್ದೆ” ಎಂದು ಹೇಳಿದರು. ಇದನ್ನು ಕೇಳಿದ ಮುಜದ್ದಿರ್ ಸಂತೃಪ್ತರಾದರು.
ಹಾಗಾದರೆ ಪ್ರವಾದಿವರ್ಯರಿಗೆ(ಸ) ಮತ್ತು ಮುಸ್ಲಿಮರಿಗೆ ಅವರು ಮಾಡಿದ ಉಪಕಾರವೇನಾಗಿರಬಹುದು? ಅವರು ಉನ್ನತ ಮಟ್ಟದ ಮನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಕುರೈಶರ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಇಸ್ಲಾಮಿನ ಆರಂಭ ಘಟ್ಟದಿಂದಲೇ ಪ್ರವಾದಿವರ್ಯ(ಸ)ರಿಗಾಗಲೀ ಮುಸ್ಲಿಮರಿಗಾಗಲೀ ಯಾವುದೇ ರೀತಿಯ ಕಿರುಕುಳ ಉಪಟಳಗಳನ್ನಾಗಲೀ ನೀಡಿರುತ್ತಿರಲಿಲ್ಲ. ಅಷ್ಟೇ ಅಲ್ಲ. ಹಲವಾರು ಬಾರಿ ಮುಸ್ಲಿಮರ ವಿರುದ್ಧ ಅಕ್ರಮ ಅನ್ಯಾಯ ನಡೆಯುತ್ತಿರುವುದರ ವಿರುದ್ಧವಿದ್ದರು. ಬುಖ್ತರಿಯ ಮಾನವೀಯ ಮೌಲ್ಯಗಳಲ್ಲಿ ಅತ್ಯಂತ ಮಹತ್ವದ್ದು ಪ್ರವಾದಿವರ್ಯರ(ಸ) ಆಪ್ತ ಕುಟುಂಬಗಳಾದ ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ವಿರುದ್ಧ ಕುರೈಶರು ಅತ್ಯಂತ ಕ್ರೂರವಾದ ಬಹಿಷ್ಕಾರ ಹೇರಿದ್ದ ಸಂದರ್ಭದಲ್ಲಾಗಿತ್ತು.
ಅವರೊಂದಿಗೆ ಮಾತನಾಡಬಾರದು, ಅವರೊಂದಿಗೆ ಸೇರಿ ಕುಳಿತುಕೊಳ್ಳಬಾರದು. ಅವರಿಂದ ಏನೂ ಪಡೆಯಬಾರದು. ಅವರಿಗೆ ಏನೂ ಮಾರಬಾರದು. ಅವರೊಂದಿಗೆ ವಿವಾಹ ಸಂಬಂಧ ಬೆಳೆಸಬಾರದು. ಬಹಿಷ್ಕಾರ ಹೊಂದಿ ಸಂಕಷ್ಟ ಪಡುತ್ತಿರುವಾಗ ಅವರೊಂದಿಗೆ ಯಾವ ಕಾರಣಕ್ಕೂ ದಯೆ ತೋರಿಸಬಾರದು ಮುಂತಾದ ನಿಯಮಗಳನ್ನೂ ಸೇರಿಸಿ ಅದರಲ್ಲಿ ಬರೆದಿದ್ದರು. ಅದು ಅಂತಹ ಕ್ರೂರವಾದ ಸಾಮಾಜಿಕ ಅರ್ಥಿಕ ಬಹಿಷ್ಕಾರವನ್ನು ಮುಸ್ಲಿಮರು ಎದುರಿಸಿದ್ದ ಕಾಲವಾಗಿತ್ತು. ಬಹಿಷ್ಕರಿಸಲ್ಪಟ್ಟ ಪ್ರವಾದಿವರ್ಯರ(ಸ) ಕುಟುಂಬ (ಅದರಲ್ಲಿ ಇಸ್ಲಾಮ್ ಸ್ವೀಕರಿಸಿದವರೂ ಸ್ವೀಕರಿಸದವರೂ ಇದ್ದರು) ಎದುರಿಸಿದ ದಯನೀಯ ಸ್ಥಿತಿಗಳನ್ನು ಇತಿಹಾಸವು ಸ್ಪಷ್ಟವಾಗಿ ದಾಖಲಿಸಿದೆ. ಆಹಾರ ವಸ್ತುಗಳು ಸಿಗದೇ ಇದ್ದಾಗ ಹಸಿರು ಎಲೆಗಳನ್ನು ತಿನ್ನಬೇಕಾಗಿ ಬಂತು. ನಾವು ಮಲ ವಿಸರ್ಜಿಸಿದಾಗ ಜಾನುವಾರುಗಳ ಮಲದಂತಿತ್ತು ಎಂದು ಅವರು ತಮ್ಮ ಅನುಭವಗಳನ್ನು ವಿವರಿಸುತ್ತಿದ್ದರು ಎಂಬುದು ಅವರ ದಯನೀಯ ಸ್ಥಿತಿಯನ್ನು ವಿವರಿಸುತ್ತದೆ.
ಬಹಿಷ್ಕಾರ ಅರಂಭವಾಗಿ ಮೂರು ವರ್ಷ ಆಗುವಾಗ ಖದೀಜಾರ ಸಹೋದರ ಪುತ್ರನಾಗಿದ್ದ ಹಕೀಮ್ ಬಿನ್ ಹಿಶಾಮ್ ಕೆಲವು ಆಹಾರ ಸಾಮಾಗ್ರಿಗಳೊಂದಿಗೆ ಬಹಿಷ್ಕೃತರ ಬಳಿಗೆ ಬಂದಿದ್ದರು. ಅದನ್ನು ತಡೆಯಲು ಅಬೂಜಹಲ್ ಕೂಡ ಬಂದಿದ್ದ. “ಓರ್ವನು ಕರುಣೆಯಿಂದ ತನ್ನ ಸಹೋದರ ಪುತ್ರಿಯ ಹಸಿವು ತಣಿಸಲು ಏನಾದರೂ ನೀಡುವುದನ್ನು ನೀವು ತಡೆಯುತ್ತಿದ್ದೀರಾ?” ಎಂಬ ಅಬುಲ್ ಬುಖ್ತರಿಯ ಪ್ರಶ್ನೆಯು ಮಾತಿನ ಚಕಮಕಿಯೊಂದಿಗೆ ಸಂಘರ್ಷವರೆಗೆ ಸಾಗಿತು.
ಏನೇ ಆಗಲೀ ಇಂತಹ ಬೆಳವಣಿಗೆಗಳು ಬಹಿಷ್ಕಾರ ಅಂತ್ಯಗೊಳ್ಳಲು ಕಾರಣವಾಯಿತು. ಅಬುಲ್ ಬುಖ್ತರಿ ವಿಗ್ರಹಾರಾಧಕನಾಗಿ, ಬಹುದೇವಾರಾಧಕನಾಗಿಯೇ ಬದುಕಿದ್ದರು. ಆದರೂ ಮುಸ್ಲಿಮರ ಕೈಯಿಂದ ಅವರು ಹತರಾಗಬಾರದೆಂದು ಪ್ರವಾದಿವರ್ಯರು(ಸ) ಬಯಸಿದರು. ಇಸ್ಲಾಮಿ ಸಮಾಜದೊಂದಿಗೆ ಸೇರಿ ಬದುಕಬೇಕಾದವರು ಎಂದು ಪ್ರವಾದಿವರ್ಯರು(ಸ) ಹೇಳಿದ್ದರು. ಯುದ್ಧದ ವೇಳೆ ಮಹಿಳೆಯರು, ಮಕ್ಕಳು ಮಾತ್ರವಲ್ಲ ಮರಗಿಡಗಳ ಬಗ್ಗೆಯೂ ಗೌರವ ನೀಡಬೇಕೆಂದೂ ಪ್ರವಾದಿವರ್ಯರು(ಸ) ತಾಕೀತು ನೀಡಿದ್ದರು. ಹೀಗೆಯೇ ಒಳಿತು ತುಂಬಿದವರ ಬಗ್ಗೆಯೂ ಎಚ್ಚರಿಕೆಯಿಂದ ಗೌರವ ಇರಬೇಕೆಂಬುದು ಪ್ರವಾದಿವರ್ಯರ(ಸ) ಕಾಳಜಿಯಾಗಿತ್ತು ಎಂಬುದನ್ನು ತಿಳಿಯಬಹುದು.












