ಸಂವಿಧಾನ ಬದಲಾವಣೆ ಮತ್ತು ಬಹು ಸಂಸ್ಕೃತಿಯ ಭಾರತ

0
238

ಸನ್ಮಾರ್ಗ ವಾರ್ತೆ

✍️ಅಬೂ ಅನೀಸ್, ಕಲ್ಲಾಪು

ಜನರಿಗಾಗಿ ದೇಶದ ಸಂವಿಧಾನ, ಸಂವಿಧಾನಕ್ಕಾಗಿ ಜನರು ಎಂಬ ಮಾತು ಸರಿಯಲ್ಲ. ಪ್ರಚಲಿತವಾಗಿ ದೇಶದ ಬಹುಜನರ ಆಶೋತ್ತರಗಳನ್ನು ಕಡೆಗಣಿಸಿ ಕೆಲವೇ ಜನರ ಆಶೆ, ಆಶಯದಂತೆ ಸಂವಿಧಾನವನ್ನು ಬದಲಾಯಿಸುವ ಹುನ್ನಾರಗಳು ನಡೆಯುತ್ತಾ ಇವೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಸ್ವಾತಂತ್ರ್ಯ ಗೌರವ ಭ್ರಾತೃತ್ವವನ್ನು ಪ್ರತಿಪಾದಿಸುತ್ತಿರುವ ದೇಶದ ಸಂವಿಧಾನವನ್ನು ಅಳಿಸಿ ಒಂದೇ ದೇಶ, ಒಂದೇ ಧರ್ಮವೆಂಬ ಘೋಷಣೆಯಡಿಯಲ್ಲಿ ಹೊಸ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರಗಳು ತೆರೆಮರೆಯಲ್ಲಿ ನಡೆಯುತ್ತಾ ಇವೆ.

ಒಂದೇ ಧರ್ಮ, ಒಂದೇ ದೇಶವೆಂಬ ಈ ಧ್ಯೇಯವಾಕ್ಯದ ಹಿನ್ನೆಲೆ ಏನು? ಈ ವರೆಗೂ ಅಸ್ಪೃಶ್ಯತೆ, ಅಸಹಿಷ್ಣತೆ, ಅಸಮಾನತೆ ಮತ್ತು ಅಮಾನವೀಯತೆಯನ್ನು ಹೊಡೆದೊಡಿಸಲು ಯಾವುದೇ ಸಕಾರಾತ್ಮಕ ಹೆಜ್ಜೆಯನ್ನು ತೆಗೆಯದವರು ಇದರ ಹಿಂದೆ ಕೈಯಾಡಿಸುತ್ತಿದ್ದಾರೆ. ದೇಶದ ಜನತೆಯನ್ನು ಮತೀಯ ಆಧಾರದಲ್ಲಿ ಒಡೆದು ಆಳುವ ರಹಸ್ಯವು ಇದರಲ್ಲಿ ಕ್ರಿಯಾಶೀಲವಾಗಿವೆ. ದೇಶದಲ್ಲಿ ಬಹಿರಂಗವಾಗಿ ಜನಾಂಗೀಯವಾಗಿ ನಿಂದಿಸುವ, ದಬಾಯಿಸುವ ಅಧಿಕಾರರೂಢರು ಮತ್ತವರ ಹಿಂಬಾಲಕರ ಇಂಗಿತವಿದೆಯೆಂದು ದೇಶದ ಪ್ರಚಲಿತ ಸ್ಥಿತಿಗತಿಯು ಸಾಕ್ಷಿ ಹೇಳುತ್ತಿದೆ. ಇದೇ ಪರಿಸ್ಥಿತಿಯನ್ನು ಸಾಕಾರಗೊಳಿಸುವ ಸ್ಥಿತಿಯಲ್ಲಿ ಸಂವಿಧಾನ ಬದಲಾವಣೆಯ ಕೂಗು ಅಡಕವಾಗಿವೆ ಎಂಬುದು ಇದೀಗ ನಿಗೂಢವಾಗಿ ಉಳಿದಿಲ್ಲ.

“ಒಂದೇ ದೇಶ ಒಂದೇ ಧರ್ಮ”ದ ಮೂರ್ತ ರೂಪ ಏನಾಗಿರಬಹುದು. ಶ್ರೀ ನಾರಾಯಣಗುರು 19ನೇ ಶತಕದಲ್ಲಿ ಒಂದೇ ಜಾತಿ ಒಂದೇ ದೇವರು ಮತ್ತು ಒಂದೇ ಮಾನವಕುಲ ಎಂಬ ಘೋಷಣೆಯ ಪ್ರತಿಪಾದಕರಾಗಿದ್ದರು. ಅವರ ಈ ದೇವವಾಕ್ಯವನ್ನು ಸಾಕಾರಗೊಳಿಸುವಲ್ಲಿ ಅವರು ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದ್ದರು. ಯಾಕೆಂದರೆ ಅದರಲ್ಲಿ ಸೋದರತೆ ಮತ್ತು ಭ್ರಾತೃತ್ವವನ್ನು ಉದ್ದೀಪನಗೊಳಿಸುವ ಮೌಲ್ಯಗಳು ಅಡಕವಾಗಿದ್ದವು. ಹಿಂದೂ ಜನಾಂಗದಲ್ಲಿರುವ ವಿವಿಧ ಜಾತಿ, ಕುಲ, ಗೋತ್ರಗಳ ತಾರತಮ್ಯವನ್ನು ತೊಡೆದು ಹಾಕಿ ಏಕ ಮಾನವ ಕುಲವೆಂಬ ವಿಶಾಲಭಾವದಲ್ಲಿ ಒಗ್ಗೂಡಿಕೊಂಡು ಸಾಮಾಜಿಕವಾಗಿ ಮತೀಯ ರಂಗದಲ್ಲೂ ಒಗ್ಗೂಡಿಕೊಂಡಿರಬೇಕೆಂಬುದು ಅವರ ಪ್ರಾಮಾಣಿಕ ಇಂಗಿತವಾಗಿತ್ತು. ಇದರಲ್ಲಿ ಯಾವುದೇ ಸಂಶಯಕ್ಕೆ ಎಡೆಯಿಲ್ಲ.
ಆದರೆ ಒಂದೇ ಧರ್ಮ ಮತ್ತು ಒಂದೇ ದೇಶವೆಂಬ ಈ ನೂತನ ಘೋಷಣೆಯಲ್ಲಿ ಅಸ್ಪೃಶ್ಯತೆಯ ಮೂಲೋತ್ಪಾಟನೆ ಮತ್ತು ಅಸಹಿಷ್ಣುತೆಯನ್ನು ತ್ಯಜಿಸಿರುವಂತಹ ಯಾವುದೇ ಗುರುತುಗಳು ಕಂಡು ಬರುವುದಿಲ್ಲ. ಈ ಸಾಮಾಜಿಕ ನ್ಯೂನತೆಗಳನ್ನು ಜೀವಂತವಾಗಿರಿಸಿಕೊಂಡು ಅದರೊಂದಿಗೆ ಒಂದೇ ಧರ್ಮ ಒಂದೇ ದೇಶವೆಂಬ ಕೂಗಿನ ಅರ್ಥವಾದರೂ ಏನು? ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಅಥವಾ ಅದಕ್ಕಿಂತಲೂ ಮುಂಚಿತವಾಗಿ ಉದ್ಘಾಟನೆಗೊಂಡಿರುವ ಹೊಸ ಸಂಸತ್ ಭವನದ ಸಮಾರಂಭದಲ್ಲಿ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಸನ್ಮಾನ್ಯ ದ್ರೌಪದಿ ಮುರ್ಮುರವರಿಗೆ ಭಾಗವಹಿಸುವಂತಹ ಸೌಭಾಗ್ಯವಿರಲಿಲ್ಲ.

ಜಗತ್ತು ಸಾಕಷ್ಟು ಮುಂದುವರಿದು ಮಾನವೀಯ ಹಕ್ಕುಗಳ ಪರಾಕಾಷ್ಠೆಗೇರಿರುವ ಈ ಕಾಲದಲ್ಲಿ ಇಲ್ಲಿ ನಡೆದಿರುವ ಮುಂದುವರಿಕೆಯು ಶೋಚನೀಯ. ಇಲ್ಲಿ ರಾಷ್ಟ್ರಪತಿಯವರು ಯಾವ ಧರ್ಮದವರಾಗಿದ್ದಾರೆ? ಏಕ ಧರ್ಮ ಮತ್ತು ಏಕ ದೇಶವೆಂಬ ಪುಕಾರಿನ ಹೊರಗಿನವರಾಗಿದ್ದಾರೆಯೇ? ಅಂತೂ ದೇಶದ ಪ್ರಥಮ ಪ್ರಜೆ ಕುಲಗೋತ್ರದ ಆಧಾರದಲ್ಲಿ ಅಸ್ಪೃಶ್ಯತೆಗೆ ಬಲಿಯಾಗಿದ್ದಾರೆ ಎಂದಾದರೆ ದೇಶದ ಜನಸಾಮಾನ್ಯರ ಪಾಡೇನಾದೀತು?

ಭಾರತವು ಬಹುಧರ್ಮ, ಬಹು ಜಾತಿ, ಬಹು ಭಾಷೆ, ಬಹುಸಂಸ್ಕೃತಿಯನ್ನು ಎತ್ತಿ ಹಿಡಿದ ದೇಶವಾಗಿದೆ. ಇಲ್ಲಿ ಸುಮಧುರವಾದ ಒಂದು ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಲು ಸಾಧ್ಯವಿದೆ. ಮಾತ್ರವಲ್ಲ ದೇಶದ ಶಾಂತಿ ಸಮಗ್ರತೆಗೆ ಬಹುತ್ವದ ಆಧಾರಿತ ನಾಗರಿಕ ಸಮಾಜವನ್ನು ರಾಷ್ಟ್ರಮಟ್ಟದಲ್ಲಿ ನಿರ್ಮಿಸಬೇಕಾದ ಅಗತ್ಯವಿದೆ. ಈ ವಿಶಾಲ ವೈಚಾರಿಕ ಭಾವನೆಯು ದೇಶದಲ್ಲಿ ಇತ್ತೀಚೆಗಿನವರೆಗೂ ಸಾಕಷ್ಟು ಶಾಂತಿ ಸಂತುಲಿತೆಯನ್ನು ಅಬಾಧಿತವಾಗಿ ಉಳಿಸಿ ಬೆಳೆಸಿದೆ.

ಬ್ರಿಟಿಷ್ ವಸಾಹತುಶಾಹಿಗಳಿಂದ ದೇಶವು ಸ್ವತಂತ್ರಗೊಂಡು ದೇಶೀಯ ಆಡಳಿತವನ್ನು ಹೊಂದಿದ ನಿಕಟಪೂರ್ವ ವರ್ಷಗಳಲ್ಲಿ ದೇಶದಲ್ಲಿ ಸಂತುಲಿತವಾದ ರಾಷ್ಟ್ರೀಯ ಭಾವನೆಗಳು ಗರಿಗೆದರಿದ್ದವು. ದೇಶದ ಸಮಾಜದಲ್ಲಿ ಹೆಚ್ಚಿನ ಜನರು ಸೆಕ್ಯುಲರ್ ಮನೋಗತಿಯನ್ನು ಹೊಂದಿದವರಾಗಿದ್ದರು. ವಿವಿಧ ಧರ್ಮೀಯರಿಗೂ ಅವರವರ ಧರ್ಮ ಶ್ರದ್ಧೆಗಳಂತೆ ಬದುಕುವ- ಆಚರಿಸುವ ಅವಕಾಶವಿತ್ತು. ಅಂತರ್ ಧರ್ಮೀಯ ವಿಚಾರಗಳನ್ನು ಪರಸ್ಪರ ಗೌರವ ಮತ್ತು ಸೌಹಾರ್ದದಿಂದ ಕಾಣುವ ಮನೋಗತಿಯು ಜನರಲ್ಲಿತ್ತು.

ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ ಲಾಲ್ ಅವರು ದೇಶದ ಜನರೊಳಗೆ ಸೆಕ್ಯುಲರ್ (ಜಾತ್ಯತೀತ) ಮನೋ ಪ್ರವೃತ್ತಿಯನ್ನು ತನ್ನ ಆಡಳಿತದುದ್ದಕ್ಕೂ ಕಾಯ್ದುಕೊಂಡಿದ್ದರು. ದೇಶದ ಅಲ್ಪಸಂಖ್ಯಾತರು ಹಿಂದುಳಿದವರ ಧಾರ್ಮಿಕ ಮತ್ತು ವೈಚಾರಿಕ ಸ್ವಾತಂತ್ರ್ಯವನ್ನು ಸಾಂವಿಧಾನಿಕವಾಗಿ ಎತ್ತಿ ಹಿಡಿಯಲಾಗಿತ್ತು. ಅದರಂತೆ ಜಾತ್ಯತೀತ ದೇಶದಲ್ಲಿ ಮುಸ್ಲಿಮ್ ಕೋಮುವಾದವು ಮುಸ್ಲಿಮರಿಗೆ ಮುಳುವಾಗಿಯೇ ಪರಿಣಮಿಸಬಹುದು. ಆದರೆ ಬಹುಸಂಖ್ಯಾತ(ಹಿಂದೂ)ರ ಕೋಮುವಾದವು ಇಡೀ ದೇಶವನ್ನೇ ಅನಾಹುತಗಳಿಗೆ ತಳ್ಳಿಹಾಕಬಹುದು. ಅದರಂತೆ ವಿವಿಧ ಧರ್ಮಗಳ ಶ್ರದ್ಧೆ ಮತ್ತು ಸಂವಿಧಾನ ಬದ್ಧ ಧಾರ್ಮಿಕ ಸ್ವಾತಂತ್ರ್ಯವನ್ನು ಅಂದಿನ ಕಾಂಗ್ರೆಸ್ ಸರಕಾರವು ಎತ್ತಿ ಹಿಡಿದಿತ್ತು. ಅಲ್ಲಲ್ಲಿ ಕೋಮುಗಲಭೆಗಳು ನಡೆಯುತ್ತಿದ್ದರೂ ಅದು ಸರಕಾರಿ ಪ್ರಾಯೋಜಿತವಾಗಿರಲಿಲ್ಲ.

ಆ ನಂತರದ ಶ್ರೀಮತಿ ಇಂದಿರಾ ಗಾಂಧಿ ಅವರ 18 ವರ್ಷಗಳ ಆಡಳಿತದ ಕೊನೆಯ ಕಾಲದಲ್ಲಿ ಕಾಂಗ್ರೆಸ್ ತನ್ನ ಸೆಕ್ಯುಲರ್ ನೀತಿಯನ್ನು ಸಡಿಲಿಸಿ `ಮೃದು ಹಿಂದುತ್ವ’ವೆಂಬ ನಿಘಂಟಿನಲ್ಲಿ ಎಲ್ಲೂ ಇಲ್ಲದ ನೀತಿಯನ್ನು ಆವಿಷ್ಕರಿಸಿತು.

1986ರಲ್ಲಿ ಇಂದಿರಾ ಗಾಂಧಿಯವರ ನಂತರ ಪ್ರಧಾನ ಮಂತ್ರಿಯಾದ ರಾಜೀವ್ ಗಾಂಧಿ ಬಾಬರಿ ಮಸೀದಿಯ ಬೀಗ ತೆರೆಯುವ ಮೂಲಕ ಕರೆಸೇವೆ ಮಾಡಲು ಅನುವು ಮಾಡಿಕೊಟ್ಟರು.

ಇಲ್ಲಿಂದ ಪ್ರಾರಂಭವಾದ ಬಾಬರಿ ಮಸೀದಿ ಕಬಳಿಕೆಯ ಆಂದೋಲನವು 1989ರಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಮೂಲಕ ತೀವ್ರಗೊಂಡಿತು. ಈ ಯಾತ್ರೆಯಲ್ಲಿ ಎರಡು ಉದ್ದೇಶಗಳಿದ್ದವು ಒಂದು ಕೋಮುವಾದಿ ಧ್ರುವೀಕರಣ ಮತ್ತು ಅಂದಿನ ಕೇಂದ್ರದ ವಿ.ಪಿ. ಸಿಂಗ್ ಸರಕಾರ ನೇಮಕಗೊಳಿಸಿದ ಮಂಡಲ್ ಆಯೋಗದ ವರದಿ. ವರದಿಯಲ್ಲಿ ಹಿಂದುಳಿದವರಿಗಾಗಿರುವ ಶಿಫಾರಸುಗಳನ್ನು ಭಾಜಪ ಒಪ್ಪಲು ಸಿದ್ಧವಿರಲಿಲ್ಲ.
ಈ ಎರಡು ಉದ್ದೇಶಗಳನ್ನಿಟ್ಟುಕೊಂಡು ಕೈಗೊಂಡ ಎಲ್.ಕೆ. ಅಡ್ವಾಣಿ ಯವರ ರಥಯಾತ್ರೆಯು ಕೋಮುವಾದಿ ಧ್ರುವೀಕರಣಕ್ಕೆ ಬಲಿಷ್ಠವಾದ ಅಡಿಪಾಯವನ್ನು ಹಾಕಿತು. ಅನ್ಯಥಾ ದೇಶದ ಒಟ್ಟು ಜನತೆಗೆ ಫಲಪ್ರದವಾಗುವ ಯಾವುದೇ ಪ್ರಕ್ರಿಯೆಗಳು ಸಾಕ್ಷಾತ್ಕಾರಗೊಂಡಿರುವುದಿಲ್ಲ.

1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಕಾಂಗ್ರೆಸ್ ಕೂಡಾ ಸೋಲಿನ ದವಡೆಗೆ ಸಿಲುಕಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಸೆಕ್ಯುಲರ್ ನೀತಿಯಂತೆ ದೇಶದಲ್ಲಿ ಶಾಂತಿ, ಸಂತುಲನೆಯನ್ನು ಕಾಯ್ದುಕೊಳ್ಳಬೇಕಾಗಿದ್ದ ಕಾಂಗ್ರೆಸ್ ಬಾಬರಿ ಮಸೀದಿ ಧ್ವಂಸದಲ್ಲಿ ತನ್ನ ಪಾಲು ಇದೆ ಎಂಬುದನ್ನು ಬಹಿರಂಗವಾಗಿ ಹೇಳಲು ಹಿಂಜರಿಯಲಿಲ್ಲ. ಎಷ್ಟರವರೆಗೆಂದರೆ ಹಿಂದೂ ಧರ್ಮದ ದಾರ್ಶನಿಕರಾದ ಪರಮಹಂಸ, ಸ್ವಾಮೀ ವಿವೇಕಾನಂದ, ನಾರಾಯಣಗುರು, ಸ್ವಾಮೀ ಅಗ್ನಿವೇಶರಂತಹವರು ಪ್ರತಿಪಾದಿಸಿದ ಸಹಿಷ್ಣತೆಯ ಹಿಂದೂ ಧರ್ಮವನ್ನು ಕೇವಲ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಿಟ್ಟು ಕೊಟ್ಟಿತು. ತನ್ಮೂಲಕ ಸುಭದ್ರವಾಗಿದ್ದ ಬಹುಜನ ಸೆಕ್ಯುಲರ್ ವೋಟು ಬ್ಯಾಂಕನ್ನು ಕಾಂಗ್ರೆಸ್ ತನ್ನ ಇಬ್ಬಂದಿತನದಿಂದ ನಾಶಗೊಳಿಸಿತು.

ಇದೀಗ ಒಂದೇ ಧರ್ಮ ಒಂದೇ ದೇಶವೆಂಬ ಹೊಸ ಸೋಗಿನಲ್ಲಿ ಮತೀಯ ಶಕ್ತಿಗಳು ರಂಗಕ್ಕಿಳಿದಿವೆ. ಇದರಲ್ಲಿ ಜನಾಂಗೀಯ ಸ್ವಾರ್ಥವೇ ಎದ್ದು ಕಾಣುತ್ತಿದೆ. ಮತೀಯ ವಿಕೇಂದ್ರಿಕರಣ ಮತ್ತು ಜನಾಂಗೀಯ ದ್ವೇಷವು ಇದರ ಮೂಲಭೂತ ಅಂಶವಾಗಿವೆ.