ಸನ್ಮಾರ್ಗ ವಾರ್ತೆ
ರಾಯ್ ಬರೇಲಿ: “ದೇಶದ ಎಲ್ಲಾ ದಲಿತರೂ ಅಂಬೇಡ್ಕರ್,” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಯ್ ಬರೇಲಿಯಲ್ಲಿ ದಲಿತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್ಚರಿಸಿದರು. ಸಂಸದರು ತಮ್ಮ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿಗೆ ಬಂದ ಸಂದರ್ಭದಲ್ಲಿ ಈ ಮಾತು ಹೇಳಿದ್ದಾರೆ
ಸಾವಿರಾರು ವರ್ಷಗಳಿಂದ ದಲಿತರು ತಾರತಮ್ಯ ಎದುರಿಸುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಈ ತಾರತಮ್ಯವನ್ನು ಗಮನದಲ್ಲಿಟ್ಟಿದ್ದರು. ಸಂವಿಧಾನದ ಮೂಲಕ ದಲಿತರಿಗೆ ಅಧಿಕಾರ ನೀಡಲಾಗಿದೆ. ಇದು ಭಾರತವು ಸಮಾಜದ ಎಲ್ಲಾ ವರ್ಗಗಳಿಗೂ ಸಮಾನ ಹಕ್ಕುಗಳನ್ನು ನೀಡುವ ಭರವಸೆ ನೀಡುವ ದಸ್ತಾವೇಜಾಗಿದೆ.
ಜನಸಂಖ್ಯೆಯಲ್ಲಿ 15% ದಲಿತರಿದ್ದಾರೆ, ಆದರೆ ದೇಶದ ಪ್ರಮುಖ ಕಂಪನಿಗಳ ಸಿಇಒಗಳು ಮತ್ತು ಉದ್ಯಮ ಮಾಲೀಕರು ಆ ಪ್ರಮಾಣದಲ್ಲಿ ಇಲ್ಲ. ಪ್ರತಿದಿನ ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ದಲಿತರಿಲ್ಲದಿದ್ದದೆ ಭಾರತದ ಸಂವಿಧಾನವೇ ಇರುತ್ತಿರಲಿಲ್ಲ ಎಂಬುದು ಖಚಿತ ಎಂದು ಅವರು ಹೇಳಿದರು.
ಸಂವಿಧಾನವನ್ನು ನಾಶಪಡಿಸಲು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ದಲಿತರು ಶಿಕ್ಷಣ ಪಡೆಯಬೇಕು, ಸಂಘಟಿತರಾಗಬೇಕು. ಅಂಬೇಡ್ಕರ್ ಅವರ ಕನಸು ನನಸಾಗಿಸಲು, ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದರು.












