ಸನ್ಮಾರ್ಗ ವಾರ್ತೆ
ರಮಝಾನ್ ಅವಧಿಯಲ್ಲಿ ಸರ್ಕಾರಿ ಮುಸ್ಲಿಂ ನೌಕರರಿಗೆ ಕೆಲಸದ ಅವಧಿಯಲ್ಲಿ ಒಂದು ಗಂಟೆ ರಿಯಾಯಿತಿ ಕೊಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಮತ್ತು ಅಂತದೊಂದು ಚರ್ಚೆ ನಡೆದಿಲ್ಲ ಎಂದು ರಾಜ್ಯ ಗ್ರಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸರ್ಕಾರಿ ಮುಸ್ಲಿಂ ನೌಕರರು ರಮಝಾನ್ ತಿಂಗಳಲ್ಲಿ ಬೇಗನೆ ಮನೆಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ಸಯ್ಯದ್ ಅಹ್ಮದ್ ಮತ್ತು ಹುಸೇನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿರುವುದರ ಕುರಿತಂತೆ ಕೇಳಲಾದ ಪ್ರಶ್ನೆಗೆ ಪರಮೇಶ್ವರ್ ಅವರು ಉತ್ತರಿಸುತ್ತಿದ್ದರು.
ಅವರು ಮನವಿ ಮಾಡಿಕೊಂಡಿರಬಹುದಾದರೂ ಅಂತದೊಂದು ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಸಚಿವ ಸಂಪುಟದಲ್ಲಾಗಲಿ ಇನ್ನೆಲ್ಲೇ ಆಗಲಿ ಇಂಥ ಪ್ರಸ್ತಾಪದ ಬಗ್ಗೆ ಚರ್ಚೆ ನಡೆದಿಲ್ಲ ಎಂದವರು ಹೇಳಿದ್ದಾರೆ.
ಇದೇ ವೇಳೆ ಇಂಥದ್ದೊಂದು ಪ್ರಸ್ತಾಪವು ಮುಸ್ಲಿಂ ಓಲೈಕೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.












