ಬೆಳ್ತಂಗಡಿಯಲ್ಲಿ 346 ಅಸಹಜ ಸಾವಾಗಿದೆ- ನಟ ಚೇತನ್‌ ಅಹಿಂಸ ಸ್ಫೋಟಕ ಹೇಳಿಕೆ!

0
415

ಸನ್ಮಾರ್ಗ ವಾರ್ತೆ

ಧರ್ಮಸ್ಥಳದಲ್ಲಿ 14 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಇನ್ನೂ ನ್ಯಾಯ ದೊರಕಿಲ್ಲ ಎಂಬ ಕೂಗು ಪುನಃ ಎದ್ದಿದೆ. ಇತ್ತೀಚೆಗೆ ಯೂಟ್ಯೂಬರ್ ಸಮೀರ್ ಎಂಡಿ ಅವರ ‘ಧೂತ’ ಚಾನೆಲ್‌ನಲ್ಲಿ ‘ಊರಿಗೆ ದೊಡ್ಡವರಾದವರು ಕೊಲೆ ಮಾಡಿದರಾ?’ ಎಂಬ ಪ್ರಶ್ನೆಯೊಂದಿಗೆ ಪ್ರಕಟವಾದ ವೀಡಿಯೋ 12 ಮಿಲಿಯನ್ ವೀಕ್ಷಣೆ ಪಡೆದು, ಸೌಜನ್ಯ ಪ್ರಕರಣವನ್ನು ಮತ್ತೊಮ್ಮೆ ಗಮನಕ್ಕೆ ತರಿಸಿದೆ. ಈ ಬೆಳವಣಿಗೆಗಳ ನಡುವೆ ಕನ್ನಡ ಚಿತ್ರರಂಗದ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಹಂಚಿಕೆಯ ಮೂಲಕ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಚೇತನ್‌ ಅಹಿಂಸಾ ಅವರ ಅಭಿಪ್ರಾಯ ಪ್ರಕಾರ, ಈ ಪ್ರಕರಣವು ರಾಜಕೀಯ, ಹಣಕಾಸು ಮತ್ತು ಧಾರ್ಮಿಕ ಬಲದ ನೆರಳಿನಲ್ಲಿ ಉಳಿದು ಹೋಗಿದೆ. ಅವರು ತಮ್ಮ ಹೇಳಿಕೆಯಲ್ಲಿ, “ನಾನು ಸೌಜನ್ಯ ಅವರ ತಾಯಿಯೊಂದಿಗೆ ಮಾತನಾಡಿದ್ದೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಘಟನೆಗಳು ಪರೋಕ್ಷವಾಗಿ ಜೋಡಿಸಿಕೊಂಡಿವೆ. ನನಗೆ ಲಭಿಸಿದ ಮಾಹಿತಿಯ ಪ್ರಕಾರ, ಬೆಳ್ತಂಗಡಿಯಲ್ಲಿ 346 ಅಸಹಜ ಸಾವುಗಳು ದಾಖಲಾಗಿವೆ. ಈ ಸಾವಿನ ಪ್ರಕರಣಗಳು ಕುಹಕವಾಗಿ ಮುಚ್ಚಿ ಹೋಗಿರುವುದರ ಹಿಂದೆ ಗಂಭೀರ ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳು ಇದ್ದಂತೆ ಕಾಣುತ್ತಿದೆ,” ಎಂದು ಹೇಳಿದರು.

ಈ ಪ್ರಕರಣ ಸಂಬಂಧ ಚೇತನ್‌ ಅಹಿಂಸಾ ಅವರು ಹೇಳಿದ ಪ್ರಕಾರ, ಜನಶಕ್ತಿ, ಸಂವಿಧಾನ ಶಕ್ತಿ ಮತ್ತು ಕಾನೂನು ಶಕ್ತಿ ಇಂತಹ ರಾಜಕೀಯ ಮತ್ತು ಧಾರ್ಮಿಕ ಪ್ರಭಾವಿಗಳಿಗೆ ಎದುರಾಗಿ ನಿಲ್ಲಬೇಕು. “ಯಾರ ವಿರುದ್ಧ ಆರೋಪ ಬಂದಿದೆಯೋ, ಅವರಿಗೆ ಹಣಬಲ, ರಾಜಕೀಯ ಬಲ, ಧಾರ್ಮಿಕ ಮತ್ತು ಜಾತಿಯ ಬಲವಿದೆ. ಆದರೆ ಅವರ ವಿರುದ್ಧ ಹೋರಾಟ ನಡೆಸುವುದು ಈಗ ಅನಿವಾರ್ಯವಾಗಿದೆ. ನಮಗೆ ಈ ವ್ಯವಸ್ಥೆಯ ವಿರುದ್ಧ ನಿಂತು ನ್ಯಾಯಕ್ಕಾಗಿ ಹೋರಾಡುವ ಹಕ್ಕಿದೆ,” ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ, ಯೂಟ್ಯೂಬರ್ ಸಮೀರ್ ಎಂಡಿ ಅವರ ವಿರುದ್ಧ ಬಳ್ಳಾರಿ ಪೊಲೀಸರು ಸ್ವಯಂ ದೂರು ದಾಖಲಿಸಿದ್ದರು. ಆದರೆ ಹೈಕೋರ್ಟ್‌ ಈ ದೂರು ರದ್ದುಪಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳ್ಳೆಯ ಬೆಳವಣಿಗೆ ಎಂದು ಚೇತನ್‌ ಅಭಿಪ್ರಾಯಪಟ್ಟಿದ್ದಾರೆ. “ಆರ್ಟಿಕಲ್ 19 ಪ್ರಕಾರ ನಮ್ಮೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಇದು ಕಳೆದುಕೊಂಡಾಗಲೇ ನಮಗೆ ಇದರ ಮಹತ್ವ ಅರಿವಾಗುತ್ತದೆ. ಪ್ರಭಾವಿಗಳಿಗೆ ನ್ಯಾಯವ್ಯವಸ್ಥೆ ಹೇಗೆ ಬೆಂಬಲ ನೀಡುತ್ತದೆ ಎಂಬುದನ್ನು ಈ ಪ್ರಕರಣದಿಂದ ಸ್ಫಷ್ಟವಾಗಿ ತಿಳಿಯಬಹುದು. ಆದ್ದರಿಂದ ನಾವು ಈ ಪ್ರಕರಣಕ್ಕೆ ನ್ಯಾಯ ದೊರಕುವಂತೆ ಮಾಡಬೇಕು. ಹೋರಾಟ ಮುಂದುವರಿಯಬೇಕು, ಬೇಡಾದರೆ ಜೈಲಿಗೂ ಹೋಗಲು ಸಿದ್ಧರಿದ್ದೇವೆ,” ಎಂದು ಅವರು ದೃಢ ನಿಲುವು ವ್ಯಕ್ತಪಡಿಸಿದರು.

ಸಂವಿಧಾನವನ್ನು ಎತ್ತಿಹಿಡಿಯುವಂತೆ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ ಚೇತನ್, “ನೀವು ಬಸವ ತತ್ವ, ಸಂವಿಧಾನ ಧ್ವಜ ಹಾರಿಸುತ್ತಿದ್ದೀರಾ, ಆದರೆ ಆರ್ಟಿಕಲ್ 19ನ್ನು ನೀವು ಎತ್ತಿಹಿಡಿಯಲೇ ಬೇಕು. ಈ ದೇಶದ ಪೊಲೀಸ್‌ ವ್ಯವಸ್ಥೆಯಲ್ಲಿ ದೊಡ್ಡ ಸುಧಾರಣೆ ಅಗತ್ಯವಿದೆ. ನ್ಯಾಯದ ಪರ ಕೆಲಸ ಮಾಡಬೇಕು,” ಎಂದು ಕಿವಿಮಾತು ಹೇಳಿದರು.

ಈಗ ಸೌಜನ್ಯ ಪ್ರಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಚರ್ಚೆ ಹುಟ್ಟಿಕೊಂಡಿದ್ದು, ಜನಸಾಮಾನ್ಯರು, ಸಾಮಾಜಿಕ ಹೋರಾಟಗಾರರು ಹಾಗೂ ಯೂಟ್ಯೂಬರ್‌ಗಳು ಈ ಪ್ರಕರಣಕ್ಕೆ ನ್ಯಾಯ ದೊರಕುವಂತೆ ಒತ್ತಾಯಿಸುತ್ತಿದ್ದಾರೆ.