ಸಿಪಿಎಂ ರಾಷ್ಟ್ರೀಯ ಅಧಿವೇಶನದಲ್ಲಿ ಫೆಲಸ್ತೀನ್ ಪರ ಘೋಷಣೆ – ಕೆಫಿಯೆಹ್ ಧರಿಸಿ ಇಸ್ರೇಲ್ ವಿರುದ್ಧ ಒಗ್ಗಟ್ಟಿನ ಸಂದೇಶ

0
510

ಸನ್ಮಾರ್ಗ ವಾರ್ತೆ

ಮಧುರೈ: ಗಾಜಾದಲ್ಲಿ ಇಸ್ರೇಲ್ ಸರ್ಕಾರ ನಡೆಸುತ್ತಿರುವ ದಾಳಿ ಮತ್ತು ಫೆಲಸ್ತೀನ್ ನಾಗರಿಕರ ನರಮೇಧದ ವಿರುದ್ಧ, ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) ತನ್ನ ರಾಷ್ಟ್ರೀಯ ಅಧಿವೇಶನದ ವೇದಿಕೆಯಿಂದ ತೀವ್ರ ವಿರೋಧ ವ್ಯಕ್ತಪಡಿಸಿದೆ. ಫೆಲಸ್ತೀನ್ ಜನರೊಂದಿಗೆ ತಮ್ಮ ಒಗ್ಗಟ್ಟನ್ನು ತೋರಿಸಲು, ಪಕ್ಷದ ಎಲ್ಲಾ ಪ್ರತಿನಿಧಿಗಳು ಮತ್ತು ನಾಯಕರು ಫೆಲಸ್ತೀನಿನ ಪರಂಪರೆಯ ಸಂಕೇತವಾದ ಕೆಫಿಯೆಹ್ ಬಟ್ಟೆಯನ್ನು ಧರಿಸಿದ್ದರು.

ಅಧಿವೇಶನದಲ್ಲಿ “ಡೌನ್ ಡೌನ್ ಜಿಯೋನಿಸಂ” ಎಂಬ ಘೋಷಣೆಗಳನ್ನು ಎತ್ತುವ ಮೂಲಕ, ಇಸ್ರೇಲ್‌ನ ಆಕ್ರಮಣಶೀಲ ನೀತಿಯ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು. ಇದರೊಂದಿಗೆ ಫೆಲಸ್ತೀನ್‌ನ ಹಕ್ಕುಗಳ ಪರ ಸಿಪಿಎಂ ನಿಂತಿರುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಯಿತು.

ಅಧಿವೇಶನದಲ್ಲಿ ಫೆಲಸ್ತೀನ್ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಇಸ್ರೇಲ್ ದಾಳಿಗಳನ್ನು ಖಂಡಿಸುವ ನಿರ್ಣಯವನ್ನು ಪಾಸುಮಾಡಲಾಯಿತು. ಫೆಲಸ್ತೀನ್ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಮರೋಪಾದಿಯಲ್ಲಿ ಖಂಡಿಸಿ, ವಿಶ್ವ ಸಮುದಾಯ ಫೆಲಸ್ತೀನ್‌ಗೆ ಬೆಂಬಲ ನೀಡಬೇಕು ಎಂಬ ಹೋರಾಟಕ್ಕೆ ಸಿಪಿಎಂ ಹೊಸ ಬಲ ತುಂಬಿದೆ.