ಸನ್ಮಾರ್ಗ ವಾರ್ತೆ
ಕೇಂದ್ರ ಸರಕಾರವು ವಕ್ಫ್ ತಿದ್ದುಪಡಿ ಮಸೂದೆಯನ್ನು ಎರಡೂ ಸದನಗಳಲ್ಲಿ ಅಂಗೀಕರಿಸಿರುವುದು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಹಾಗೂ ಆರಾಧನಾ ಕೇಂದ್ರಗಳ ಮೇಲಿನ ನೇರ ಆಕ್ರಮಣವಾಗಿದೆ ಮತ್ತು ಈ ಅನ್ಯಾಯವನ್ನು ಬಹಿರಂಗವಾಗಿಯೇ ವಿರೋಧಿಸುತ್ತೇವೆ ಎಂದು ಎಸ್ಐಒ ಹೇಳಿದೆ. ವಕ್ಫ್ ಗೆ ಅನುರೂಪವಾದ ಕಾನೂನು ಇತರ ಧರ್ಮಗಳಿಗೆ ಸಂಬಂಧಿಸಿ ಇದೆಯಾದರೂ ಅದನ್ನು ಸ್ಪರ್ಶಿಸದೆ ಕೇವಲ ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡಿರುವ ಈ ಮಸೂದೆಯು ನೂರಾರು ವರ್ಷಗಳಿಂದ ಮುಸ್ಲಿಂ ಸಮುದಾಯ ಅನುಭವಿಸುತ್ತಿರುವ ಹಕ್ಕುಗಳನ್ನು ನಾಶಪಡಿಸುವ ಉದ್ದೇಶವನ್ನಷ್ಟೇ ಹೊಂದಿದೆ ಎಂದು ಕಿಡಿ ಕಾರಿದೆ.
ಈ ಮಸೂದೆಯು ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯನ್ನು ಕಬಳಿಸುವ ಗುರಿಯನ್ನು ಹೊಂದಿದೆ. ಮಾತ್ರ ಅಲ್ಲ ಸಂವಿಧಾನದ 26ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಈ ಮಸೂದೆಯ ವಿರುದ್ಧ ಈ ದೇಶದ ಲಕ್ಷಾಂತರ ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಇವಾವನ್ನೂ ಪರಿಗಣಿಸದೆ ಸರ್ವಾಧಿಕಾರಿ ಸ್ವರೂಪದಲ್ಲಿ ಈ ಮಸೂದೆಯನ್ನು ತಯಾರಿಸಿದೆ ಮಾತ್ರ ಅಲ್ಲ ಎರಡೂ ಸದನಗಳಲ್ಲಿ ಮಂಡಿಸಿ ಅಂಗೀಕರಿಸಿಕೊಂಡಿದೆ. ಇದು ಮುಸ್ಲಿಮರ ಧಾರ್ಮಿಕ ಸಂಸ್ಥೆಗಳನ್ನು ನಿಧಾನಕ್ಕೆ ಸ್ವಾಹಾ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಎಸ್ಐಒ ಹೇಳಿದೆ.
ವಕ್ಫ್ ಆಸ್ತಿಯ ಪರಭಾರೆಯನ್ನು ತಡೆಯುವುದು, ಭ್ರಷ್ಟಾಚಾರವನ್ನು ನಿಲ್ಲಿಸುವುದು ಈ ಕಾಯ್ದೆಯ ಉದ್ದೇಶ ಎಂದು ಹೇಳಿಕೊಂಡು ಇಡೀ ವಕ್ಫ್ ಆಸ್ತಿಯ ಮೇಲೆ ಸರಕಾರದ ನಿಯಂತ್ರಣವನ್ನು ಪರೋಕ್ಷವಾಗಿ ಹೇರುವ ಪ್ರಯತ್ನವನ್ನು ಕೇಂದ್ರ ಸರಕಾರ ನಡೆಸಿದೆ. ಇದಕ್ಕೆ ಮುಸ್ಲಿಂ ಸಮುದಾಯ ಕ್ಷಮೆ ನೀಡಲ್ಲ. ಈ ದುರಾಲೋಚನೆಯ ವಿರುದ್ಧ ಮುಸ್ಲಿಂ ಸಮುದಾಯ ಎಲ್ಲಾ ಬಗೆಯ ಹೋರಾಟವನ್ನು ನಡೆಸಲಿದೆ ಎಂದು ಎಸ್ ಐ ರಾಷ್ಟ್ರಾಧ್ಯಕ್ಷರು ಹೇಳಿದ್ದಾರೆ.












