ರಾಮ ಮಂದಿರ ಪ್ರವೇಶಿಸಿದ ಕಾಂಗ್ರೆಸ್ ದಲಿತ ಮುಖಂಡ: ಗಂಗಾಜಲ ಸಿಂಪಡಿಸಿ ಮಂದಿರ ಶುದ್ಧೀಕರಿಸಿದ ಬಿಜೆಪಿ ಮುಖಂಡ

0
492

ಸನ್ಮಾರ್ಗ ವಾರ್ತೆ

ರಾಜಸ್ಥಾನದ ಅಲ್ವಾರನ ರಾಮ್ಘಡ್ ನಲ್ಲಿರುವ ರಾಮ ಮಂದಿರಕ್ಕೆ ಕಾಂಗ್ರೆಸ್ ನಾಯಕ ಟೀಕಾರಾಂ ಜೂಲಿ ಭೇಟಿ ನೀಡಿದ ಬಳಿಕ ಮಂದಿರವನ್ನು ಗಂಗಾಜಲ ಸಿಂಪಡಿಸಿ ಶುದ್ದಗೊಳಿಸಲಾಗಿದೆ ಎಂದು ತಿಳಿದು ಬಂದಿದ್ದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕ ಗ್ಯಾನ್ ದೇವ್ ಅಹುಜ ನೇತೃತ್ವದಲ್ಲಿ ಈ ಗಂಗಾಜಲ ಶುದ್ಧೀಕರಣ ನಡೆದಿದೆ.

ಮಂದಿರವನ್ನು ಶುದ್ಧೀಕರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಯಿತು. ಆ ಬಳಿಕ ಅವರು ತನ್ನ ಕೃತ್ಯವನ್ನ ಸಮರ್ಥಿಸಿಕೊಂಡರು. ಕೆಲವು ಅಶುದ್ಧರಾದ ವ್ಯಕ್ತಿಗಳು ಮಂದಿರ ಪ್ರವೇಶಿಸಿದ್ದರಿಂದ ಈ ಶುದ್ಧೀಕರಣ ಅಗತ್ಯವಾಗಿತ್ತು ಎಂದವರು ಹೇಳಿದ್ದರು.

ಯಾರ ಹೆಸರನ್ನು ಹೇಳಲು ನಾನು ಬಯಸುವುದಿಲ್ಲ. ಆದರೆ ಮಂದಿರದಲ್ಲಿ ಯಾರೆಲ್ಲ ಇದ್ದರು ಅನ್ನೋದು ನಮಗೆಲ್ಲರಿಗೂ ಗೊತ್ತಿದೆ ಎಂದವರು ಪರೋಕ್ಷವಾಗಿ ಕಾಂಗ್ರೆಸ್ ಮುಖಂಡರ ಕಡೆಗೆ ಬೊಟ್ಟು ಮಾಡಿದ್ದಾರೆ.

ಇದೇ ವೇಳೆ ಆಹುಜ ಅವರ ನಡೆಯು ಬಿಜೆಪಿಯ ಮನಸ್ಥಿತಿಯ ಕನ್ನಡಿ ಎಂದು ಜೂಲಿ ಹೇಳಿದ್ದಾರೆ. ನಾನು ದಲಿತನಾಗಿರುವುದೇ ಮಂದಿರ ಶುದ್ಧೀಕರಣಕ್ಕೆ ಕಾರಣವಾಗಿದೆ. ಇದು ನನ್ನ ನಂಬಿಕೆಗೆ ಮೇಲಿನ ಆಕ್ರಮಣ ಅಷ್ಟೇ ಅಲ್ಲ ಅಸ್ಪೃಶ್ಯತೆಯ ಆಧಾರದಲ್ಲಿ ನಡಕೊಳ್ಳುವುದಕ್ಕೆ ಜನರಿಗೆ ಪ್ರೇರಣೆಯೂ ನೀಡುತ್ತದೆ ಎಂದು ಅವರು ಹೇಳಿದ್ದಾರೆ.