ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಹಯಾತ್ನಗರ ಬಳಿ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗಿ ನಿರ್ಮಿಸಲಾದ ಮಸೀದಿ ಮತ್ತು ದೇವಾಲಯದ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ. ಇತ್ತೀಚೆಗೆ ನಡೆಸಿದ ಭೂ ಸಮೀಕ್ಷೆಯಲ್ಲಿ ಸಂಭಾಲ್-ಬೆಹಜೋಯ್ ರಸ್ತೆಯ ಪಕ್ಕದಲ್ಲಿರುವ ಲೋಕೋಪಯೋಗಿ ಇಲಾಖೆಯ ಭೂಮಿಯಲ್ಲಿ ಮಸೀದಿ ಹಾಗೂ ದೇವಾಲಯದ ಭಾಗಗಳು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಮಸೀದಿ ಹಾಗೂ ದೇವಾಲಯದ ವರಾಂಡಾ ಮತ್ತು ಬಾವಿಯ ಭಾಗಗಳು ಸಾರ್ವಜನಿಕ ರಸ್ತೆ ಪ್ರವೇಶಕ್ಕೆ ಅಡ್ಡಿಯಾಗಿದ್ದು, ಶೀಘ್ರದಲ್ಲೇ ಈ ರಚನೆಗಳನ್ನು ತೆರವುಗೊಳಿಸಲಾಗುವುದು ಎಂದು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಅವರು,
ಹೇಳಿದರು. ಸಾರ್ವಜನಿಕ ಮೂಲಸೌಕರ್ಯಕ್ಕೆ ಅಡ್ಡಿಯಾಗುವ ಯಾವುದೇ ರಚನೆ, ಅದು ಧಾರ್ಮಿಕವಾಗಿದ್ದರೂ ನಿಯಮದ ಪ್ರಕಾರ ತೆಗೆದುಹಾಕಲಾಗುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ಕಳೆದ ವರ್ಷ ನವೆಂಬರ್ 24ರಂದು ಶಾಹಿ ಜಾಮಾ ಮಸೀದಿಯ ನ್ಯಾಯಾಲಯದ ಆದೇಶದ ನಂತರದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ಸ್ಥಳೀಯ ಆಡಳಿತವು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ಅದೇ ಪ್ರದೇಶದಲ್ಲಿ ಇತರ ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ. ಒಬ್ಬ ವ್ಯಕ್ತಿ ಗ್ರಾಮ ಸಭೆಯ ಭೂಮಿಯಲ್ಲಿ ಅಕ್ರಮ ಅಂಗಡಿ ನಿರ್ಮಿಸಿದ್ದು, ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದಾರೆ. ಮದರಸಾ ನಿರ್ವಹಣೆಗೆ ಬಳಸಲಾಗುತ್ತಿದ್ದ ಶಾಲಾ ಭೂಮಿಯ ಕುರಿತು ತನಿಖೆ ಮುಂದುವರಿದಿದೆ.
ಈ ಕಟ್ಟಡಗಳು ಸುಮಾರು 25–30 ವರ್ಷಗಳಿಂದ ಅಸ್ತಿತ್ವದಲ್ಲಿರುವುದಾಗಿ ಸ್ಥಳೀಯರು ಹೇಳಿದರೂ, ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಅಡಚಣೆಯನ್ನೂ ಸಹಿಸಲಾಗದು ಎಂಬುದನ್ನು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.












