ಲಕ್ನೋ ವಿಮಾನ ನಿಲ್ದಾಣದಲ್ಲಿ ಸೌದಿ ಏರ್‌ಲೈನ್ಸ್ ಹಜ್ ವಿಮಾನಕ್ಕೆ ಬೆಂಕಿ: 250 ಪ್ರಯಾಣಿಕರು ಸುರಕ್ಷಿತ

0
1085

ಸನ್ಮಾರ್ಗ ವಾರ್ತೆ

ಲಕ್ನೋ: ಹಜ್ ಯಾತ್ರೆಯಿಂದ ಭಾರತಕ್ಕೆ ಹಿಂದಿರುಗುತ್ತಿದ್ದ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಎಡ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಿಕ ಆತಂಕದ ಪರಿಸ್ಥಿತಿ ಉಂಟಾಯಿತು.

ಜಿದ್ದಾದಿಂದ ಬಂದ 250 ಪ್ರಯಾಣಿಕರಿದ್ದ SV 312 ನಂ. ವಿಮಾನವು ಶನಿವಾರ ಬೆಳಿಗ್ಗೆ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಈ ಘಟನೆ ಸಂಭವಿಸಿತು. ತಕ್ಷಣವೇ ರಕ್ಷಣಾ ಹಾಗೂ ಅಗ್ನಿಶಾಮಕ ದಳವನ್ನು ಕರೆಯಲಾಯಿತು. ತಾಂತ್ರಿಕ ತಂಡದ ಸಹಯೋಗದಿಂದ ಬೆಂಕಿಯನ್ನು ನಂದಿಸಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ಹಿನ್ನೆಲೆ ಹೈಡ್ರಾಲಿಕ್ ವ್ಯವಸ್ಥೆಯ ದೋಷವೇ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದ್ದು, ಅಧಿಕೃತ ತನಿಖೆ ಆರಂಭವಾಗಿದೆ.