ಸನ್ಮಾರ್ಗ ವಾರ್ತೆ
ಮುಂಬೈ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ತಡವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ನಟ ಅಮೀರ್ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಭುಗಿಲೆದ್ದಿವೆ. ಟರ್ಕಿಶ್ ಅಧ್ಯಕ್ಷ ಎರ್ಡೋಗನ್ ಮತ್ತು ಅವರ ಪತ್ನಿಯೊಂದಿಗಿನ ಹಳೆಯ ಫೋಟೋ ಕೂಡ ಮತ್ತೆ ಹರಿದಾಡಿದ್ದು, ಅವರ ಮುಂಬರುವ ಸಿತಾರೆ ಜಮೀನ್ ಪರ್ ಎಂಬ ಸಿನೆಮಾವನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿಬಂದಿದೆ.
ಇದೀಗ, ಅಮೀರ್ ಖಾನ್ ತಮ್ಮ ಮೇಲಿನ ಎಲ್ಲಾ ಟೀಕೆಗಳಿಗೆ ಉತ್ತರಿಸಿದ್ದಾರೆ ಮತ್ತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದಕ ದಾಳಿ ಕ್ರೂರವಾಗಿತ್ತು. ನಮ್ಮ ದೇಶದೊಳಗೆ ನುಗ್ಗಿ ನಾಗರಿಕರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರ ಕೃತ್ಯವು ಹೇಡಿತನವಾಗಿದೆ. ಯಾವುದೇ ಧರ್ಮವು ಜನರನ್ನು ಕೊಲ್ಲಲು ಹೇಳುವುದಿಲ್ಲ. ಈ ಭಯೋತ್ಪಾದಕರನ್ನು ಮುಸ್ಲಿಮರೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಯಾವುದೇ ಮುಗ್ಧ ವ್ಯಕ್ತಿಯನ್ನು ಕೊಲ್ಲಬಾರದು ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡಬಾರದು ಎಂದು ಇಸ್ಲಾಂ ಹೇಳುತ್ತದೆ. ಹಾಗೆ ಮಾಡುವ ಮೂಲಕ ಅವರು ಧರ್ಮದ ವಿರುದ್ಧ ಹೋಗುತ್ತಿದ್ದಾರೆ” ಎಂದು ಅಮೀರ್ ಖಾನ್ ಇಂಡಿಯಾ ಟಿವಿಯ ಆಪ್ ಕಿ ಅದಾಲತ್ನಲ್ಲಿ ಹೇಳಿದರು.
2017 ಮತ್ತು 2020 ರಲ್ಲಿ ಟರ್ಕಿಶ್ ಆಡಳಿತಗಾರ ಎರ್ಡೋಗನ್ ಮತ್ತು ಅವರ ಪತ್ನಿಯೊಂದಿಗಿನ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಆಮಿರ್, ಅಂದು ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರನ್ನು ಭೇಟಿಯಾದಾಗ ಏಳು ವರ್ಷಗಳ ನಂತರ ಅವರು ಭಾರತದ ಮೇಲಿನ ದಾಳಿಯನ್ನು ಬೆಂಬಲಿಸುತ್ತಾರೆ ಎಂದು ಭಾವಿಸಿರಲಿಲ್ಲ. ಪಾಕಿಸ್ತಾನಕ್ಕೆ ಸಹಾಯ ಮಾಡುವ ಮೂಲಕ ಟರ್ಕಿ ದೊಡ್ಡ ತಪ್ಪು ಮಾಡಿದೆ. 2023 ರಲ್ಲಿ ಭೂಕಂಪ ಸಂಭವಿಸಿದಾಗ ಟರ್ಕಿಗೆ ಮೊದಲು ಸಹಾಯ ಮಾಡಿದ್ದೇ ಭಾರತ ಎಂದು ಆಮಿರ್ ಹೇಳಿದರು.
‘ಸಿತಾರೆ ಜಮೀನ್ ಪರ್’ ಚಿತ್ರದ ಟ್ರೇಲರ್ ಬಹಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ನಮ್ಮ ದೇಶದ ಮೇಲಿನ ದಾಳಿಯಿಂದಾಗಿ ನಾನು ಅದನ್ನು ರದ್ದುಗೊಳಿಸಿದೆ. ನನ್ನ ಚಿತ್ರ ಬಿಡುಗಡೆಯಾಗಲಿದೆ ಎಂಬ ಕಾರಣಕ್ಕಾಗಿ ಮೌನವಾಗಿರುವುದು ತಪ್ಪು ಎಂದು ತೋರುತ್ತದೆ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡಿದೆ ಎಂದವರು ಹೇಳಿದರು.












