ಸನ್ಮಾರ್ಗ ವಾರ್ತೆ
ಹುಣಸೂರು: ಗೋ ರಕ್ಷಣೆ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದ ಹಿಂದೂ ರಾಷ್ಟ್ರ ರಕ್ಷಣಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ 7 ಮಂದಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಈ ತಂಡವು ಜಾನುವಾರು ಸಾಗಾಟದ ವಾಹನಗಳನ್ನು ಅಡ್ಡಗಟ್ಟಿ, ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಬಂಧಿತರಲ್ಲಿ ಬೆಂಗಳೂರು ಉತ್ತರಹಳ್ಳಿಯ ರಾಮಕೃಷ್ಣ, ಶಿವಕುಮಾರ್, ಲಿಂಗರಾಜು, ಕಿಶೋರ್, ಪ್ರೇಮಕುಮಾರ್, ಪುಷ್ಪಲತಾ ಮತ್ತು ಕೆ.ಆರ್.ಪೇಟೆ ತಾಲೂಕಿನ ಮಾರಗೌಡನಹಳ್ಳಿಯ ಸ್ವಾಮಿ ಸೇರಿದ್ದಾರೆ. ಈ ಘಟನೆ ಹಯಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿಯಲ್ಲಿ ನಡೆದಿದೆ.
ಸಾಲಿಗ್ರಾಮದ ಕಿರಣ್ ಎಂಬುವವರು ಚುಂಚನಕಟ್ಟೆ ಸಂತೆಯಲ್ಲಿ ಮೂರು ಜಾನುವಾರುಗಳನ್ನು ಖರೀದಿ ಮಾಡಿ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿ, ಅಡ್ಡಗಟ್ಟಿ, ಕಸಾಯಿಖಾನೆಗೆ ಸಾಗಿಸುತ್ತಿದ್ದೀರಾ ಎಂದು ಆರೋಪಿಸಿ ₹25,000 ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ₹20,000 ಕೊಡದಿದ್ದರೆ ಪೊಲೀಸರಿಗೆ ಕೊಡುತ್ತೇವೆ ಎಂದು ಬೆದರಿಸಿದ್ದಿದ್ದಾರೆ.
ಘಟನೆಯ ವೇಳೆ ಜಾಗೃತರಾದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಆರೋಪಿಗಳ ವಿರುದ್ಧ ತಿರುಗಿ ಬಿದ್ದು ಹೊಡೆದಿದ್ದಾರೆ. ಬಳಿಕ ಪೊಲೀಸ್ ಸಹಾಯವಾಣಿ 112ಗೆ ಮಾಹಿತಿ ನೀಡಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದೇ ತಂಡವು ಕೆ.ಆರ್. ನಗರದಲ್ಲಿ ಗ್ಯಾಸ್ ಅಂಗಡಿಯ ಮಾಲಿಕನನ್ನೂ ಬೆದರಿಸಿ ₹20,000 ಪಡೆದಿದ್ದು, ಚಾಮರಾಜನಗರ ಹಾಗೂ ಬೆಂಗಳೂರು ಸೇರಿ ಹಲವೆಡೆ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತನಿಖೆಗಾಗಿ ಅಡಿಷನಲ್ ಎಸ್.ಪಿ ಮಲ್ಲಿಕ್, ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಮುನಿಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












