ಗಾಝಾದಲ್ಲಿ ಇನ್ನೂ ಏಕೆ ಯುದ್ಧವನ್ನು ಮುಂದುವರಿಸಿದ್ದೀರಿ? ಇಸ್ರೇಲ್ ವಿರೋಧ ಪಕ್ಷ ನಾಯಕನ ಪ್ರಶ್ನೆ

0
864

ಸನ್ಮಾರ್ಗ ವಾರ್ತೆ

ಗಾಝಾದ ಮೇಲೆ ಇಸ್ರೇಲ್ ಹೇರಿರುವ ಯುದ್ಧವನ್ನು ಕೊನೆಗೊಳಿಸುವ ಸಮಯ ಈಗಾಗಲೇ ಕಳೆದು ಹೋಗಿದೆ ಎಂದು ಇಸ್ರೇಲ್ ನ ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪ್ಪಿಡ್ ಹೇಳಿದ್ದಾರೆ. ಯುದ್ಧವನ್ನು ಮುಂದುವರಿಸುವುದರಿಂದ ಇನ್ನಾವ ಪ್ರಯೋಜನವೂ ಇಲ್ಲ. ಇದರಿಂದ ತೊಂದರೆಯಷ್ಟೇ ಆಗಲಿದೆ. ಗಾಝಾದಲ್ಲಿ ಒಂದು ಬದಲಿ ಸರಕಾರ ರಚನೆಯಾಗದ ಹೊರತು ಹಮಾಸ್ ಅನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವುದು ಮತ್ತು ಯುದ್ಧವನ್ನು ನಿಲ್ಲಿಸುವುದೇ ಈಗಿರುವ ದಾರಿ. ಯಾಕೆ ಈಗಲೂ ಯುದ್ಧವನ್ನು ಮುಂದುವರಿಸಲಾಗಿದೆ ಅನ್ನುವುದು ಗೊತ್ತಾಗುತ್ತಿಲ್ಲ. ಗಾಝಾದಲ್ಲಿ ಇಸ್ರೇಲಿ ಸೈನಿಕರನ್ನು ನಿಲ್ಲಿಸಬೇಕು ಮತ್ತು ಹಮಾಸನ್ನು ಹೊರ ಹಾಕಬೇಕು ಎಂದು ಅವರು ಹೇಳಿದ್ದಾರೆ.

ಪ್ರತಿದಿನವೂ ನಮ್ಮ ಸೈನಿಕರು ಹತ್ಯೆಯಾಗುತ್ತಿದ್ದಾರೆ. ಇದು ಯಾಕೆ ಬೇಕು? ಹಮಾಸವನ್ನು ನಿರ್ನಾಮ ಮಾಡಬೇಕು ಅನ್ನೋದಕ್ಕೆ ನನ್ನ ಸಹಮತವಿದೆ. ಆದರೆ ಒಂದು ಬದಲಿ ಸರಕಾರ ಗಾಝಾವನ್ನು ಪ್ರವೇಶಿಸದ ಹೊರತು ಹಮಾಸನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ಗಲ್ಫ್ ರಾಷ್ಟ್ರಗಳೊಂದಿಗೆ ಈಜಿಪ್ಟ್ ಅನ್ನು ಸೇರಿಸಿಕೊಂಡು ಒಂದು ಬದಲಿ ಸರಕಾರವನ್ನು ನಾವು ಈ ಮೊದಲೇ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.