ಮಣಿಪುರ ಬಿಟ್ಟು 42 ದೇಶಗಳಿಗೆ ಭೇಟಿ ನೀಡಿದ ಮೋದಿ, ಮಣಿಪುರವರು ಭಾರತೀಯರಲ್ಲವೇ?; ಖರ್ಗೆ ತೀವ್ರ ವಾಗ್ದಾಳಿ

0
7639

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿ ಅವರು 42 ದೇಶಗಳಿಗೆ ಭೇಟಿ ನೀಡಿದ್ದಾರೆ, ಆದರೆ ಮಣಿಪುರಕ್ಕೆ ಇನ್ನೂ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ತೆಲಂಗಾಣದ ಎಲ್‌ಬಿ ಕ್ರೀಡಾಂಗಣದಲ್ಲಿ ಗ್ರಾಮ ಘಟಕದ ನಾಯಕರಿಗೆ ಭಾಷಣ ನೀಡಿದ ಅವರು, ಮಣಿಪುರದಲ್ಲಿ ಜನರು “ಸಾಯುತ್ತಿದ್ದಾರೆ, ಅಳುತ್ತಿದ್ದಾರೆ, ಅತ್ಯಾಚಾರಗಳು ನಡೆಯುತ್ತಿವೆ” ಎಂಬಂತಹ ಸಂದರ್ಭದಲ್ಲಿಯೂ ಮೋದಿ ಮೌನವಿರುವುದು ಸ್ವೀಕಾರಾರ್ಹವಲ್ಲ. ಮಣಿಪುರದವರು ಭಾರತೀಯ ನಾಗರಿಕರಲ್ಲವೇ?” ಎಂದು ಅವರು ಪ್ರಶ್ನಿಸಿದರು.

ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಳಿಕ ರಾಹುಲ್ ಗಾಂಧಿ ಭೇಟಿ ನೀಡಿದ್ದರು ಎಂಬುದನ್ನು ಖರ್ಗೆ ಈ ಸಂದರ್ಭದಲ್ಲಿ ನೆನಪಿಸಿದರು. ಆದರೆ ಪ್ರಧಾನಿ ಮೋದಿ ಅವರು ದೇಶದ ಒಳಗಿನ ಈ ಸಂಕಷ್ಟದ ಕಡೆಗೆ ಗಮನ ಕೊಟ್ಟಿಲ್ಲ ಎಂದವರು ಆರೋಪಿಸಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತು ಧ್ವನಿ ಎತ್ತುವವರು, ಮಣಿಪುರದ ಬಗ್ಗೆ ಮೌನವಾಗಿರುವುದು ಸರಿಯಲ್ಲ ಎಂದರು.

ಪಹಲ್ಗಾಮ್ ದಾಳಿಯ ನಂತರ ನಡೆದ ಸರ್ವಪಕ್ಷ ಸಭೆಗೆ ಮೋದಿ ಗೈರುಹಾಜರಾಗಿದ್ದನ್ನು ಉಲ್ಲೇಖಿಸಿ, ಅವರು ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆಗೆ ತಯಾರಿಲ್ಲ ಎಂದು ಆರೋಪಿಸಿದರು. ಅಲ್ಲದೆ, ಭಾರತದ ನಿಲುವು ತಿಳಿಸಲು ವಿರೋಧ ಪಕ್ಷದ ನಾಯಕರನ್ನು ವಿದೇಶಕ್ಕೆ ಕಳಿಸಿರುವುದೂ ಸರಿಯಲ್ಲ ಎಂದರು.

ಇಂದಿರಾ ಗಾಂಧಿ ಪಾಕಿಸ್ತಾನವನ್ನು ವಿಭಜಿಸಿದ್ದರು, ಆದರೆ ಮೋದಿ ಅವರು ಕೇವಲ ಘೋಷಣೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು. “ಪಿಒಕೆ ವಶಪಡಿಸಿಕೊಳ್ಳುತ್ತೇನೆ ಎಂದಿದ್ದರೆ ಅದನ್ನು ಎಷ್ಟು ದಿನದಲ್ಲಿ ಸಾಧಿಸಬೇಕು?” ಎಂದು ಕೇಳಿದರು.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಅವರಿಗೆ ಕ್ಷಮೆ ಕೇಳುವುದು ಮಾತ್ರ ಗೊತ್ತು ಎಂದು ಖರ್ಗೆ ಆರೋಪಿಸಿದರು. “ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಮೋದಿ ಅವರು ಏನು ಮಾಡಿದ್ದಾರೆ?” ಎಂದು ಕೇಳಿದರು.

ಮೋದಿ ಸರ್ಕಾರದ ವಿದೇಶ ನೀತಿಯು ಭಾರತವನ್ನು ಶತ್ರು ರಾಷ್ಟ್ರಗಳಿಂದ ಸುತ್ತುವರಿದಂತೆ ಮಾಡಿದೆ. ಆರ್ಥಿಕ ಸ್ಥಿತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಖರ್ಗೆ ಹೇಳಿದರು.