ಸನ್ಮಾರ್ಗ ವಾರ್ತೆ
ಗಾಜಾ: ಇಸ್ರೇಲ್ನ ದಿಗ್ಬಂಧನದಿಂದ ಗಾಝಾದಲ್ಲಿ ಹಸಿವಿನ ಭೀಕರತೆ ಹೆಚ್ಚಾಗಿದ್ದು, ಅಲ್ಲಿನ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಧ್ಯ ಗಾಝಾದ ದೇರ್ ಎಲ್-ಬಲಾಹ್ನಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ, 12 ವರ್ಷದ ಹುದಾ ಅಬು ನಜಾ ಎಂಬ ಬಾಲಕಿ ಅಸ್ಥಿಪಂಜರದಂತೆ ತೆಳುವಾಗಿದ್ದು, ಆಕೆಯ ಪಕ್ಕೆಲುಬುಗಳು ಚರ್ಮದ ಮೂಲಕ ಎದ್ದು ಕಾಣುತ್ತಿವೆ.
ಹುದಾ ಅವರ ತಾಯಿ ಸೋಮಿಯಾ ಅಬು ನಜಾ ಅವರ ಪ್ರಕಾರ, ಇಸ್ರೇಲ್ ಮಾರ್ಚ್ ತಿಂಗಳಿನಲ್ಲಿ ಗಾಝಾದ ಗಡಿಗಳನ್ನು ಮುಚ್ಚಿದಾಗಿನಿಂದ ಅವರ ಮಗಳು ಈ ಸ್ಥಿತಿಗೆ ತಲುಪಿದ್ದಾಳೆ. ಮೂರು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸುಧಾರಣೆಯಾಗಿಲ್ಲ. ಖಾನ್ ಯೂನಿಸ್ನಲ್ಲಿ ಐದು ಮಕ್ಕಳು ಹಸಿವಿನಿಂದ ಸಾವನ್ನಪ್ಪಿರುವುದನ್ನು ಕಂಡ ಸೋಮಿಯಾ, ಭಯದಿಂದ ತಮ್ಮ ಮಗಳನ್ನು ಮನೆಗೆ ಕರೆತಂದಿದ್ದಾರೆ. ಆಕೆಯ ತೂಕ 35 ಕಿಲೋ ಇದ್ದದ್ದು ಈಗ ಕೇವಲ 20ಕ್ಕೆ ಇಳಿದಿದೆ ಎಂದು ಅವರು ಹೇಳಿದ್ದಾರೆ.
ಸಾವಿನ ಸಂಖ್ಯೆ 280ಕ್ಕೆ ಏರಿಕೆ
ಗಾಝಾ ಆರೋಗ್ಯ ಸಚಿವಾಲಯದ ಪ್ರಕಾರ, ಹಸಿವಿನಿಂದಾಗಿ ಈಗಾಗಲೇ 110 ಮಕ್ಕಳು ಸೇರಿದಂತೆ 280ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ಬೆಂಬಲಿತ ಹಸಿವು ಮೇಲ್ವಿಚಾರಣಾ ಸಂಸ್ಥೆಯ (IPC) ಪ್ರಕಾರ, ಉತ್ತರ ಗಾಝಾದಲ್ಲಿ ಅರ್ಧ ಮಿಲಿಯನ್ಗಿಂತಲೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕ್ಷಾಮವನ್ನು ಅನುಭವಿಸುತ್ತಿದ್ದಾರೆ. ಸೆಪ್ಟೆಂಬರ್ ವೇಳೆಗೆ ಈ ಸ್ಥಿತಿ ದೇರ್ ಎಲ್-ಬಲಾಹ್ ಮತ್ತು ಖಾನ್ ಯೂನಿಸ್ಗಳಿಗೂ ಹರಡಬಹುದು ಎಂದು ಸಂಸ್ಥೆ ಎಚ್ಚರಿಸಿದೆ. ಇದರ ಪರಿಣಾಮವಾಗಿ, ಐದು ವರ್ಷದೊಳಗಿನ 132,000 ಮಕ್ಕಳು ಮುಂದಿನ ವರ್ಷ ಜೂನ್ ವೇಳೆಗೆ ತೀವ್ರ ಅಪೌಷ್ಟಿಕತೆಯಿಂದ ಸಾಯುವ ಅಪಾಯದಲ್ಲಿದ್ದಾರೆ ಎಂದು ಐಪಿಸಿ
ಅಂದಾಜಿಸಿದೆ.
ಆಸ್ಪತ್ರೆ, ವಿಶ್ವಸಂಸ್ಥೆಗಳ ಅಸಹಾಯಕತೆ
ಗಾಝಾದ ಆಸ್ಪತ್ರೆಗಳು ಅಪೌಷ್ಟಿಕ ಮಕ್ಕಳಿಂದ ತುಂಬಿ ತುಳುಕುತ್ತಿವೆ. 120 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಸಾವಿರಾರು ಮಕ್ಕಳು ಶಿಬಿರಗಳಲ್ಲಿ ಸಾಕಷ್ಟು ಆರೈಕೆಯಿಲ್ಲದೆ ಬಳಲುತ್ತಿದ್ದಾರೆ ಎಂದು ನಾಸರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಅಹ್ಮದ್ ಅಲ್-ಫರ್ರಾ ಹೇಳಿದ್ದಾರೆ. ಈ ಮಕ್ಕಳು ಜೀವನದುದ್ದಕ್ಕೂ ಇದರ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಗಾಝಾದಾದ್ಯಂತ 320,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ಅವರು ಅಂದಾಜಿಸಿದ್ದಾರೆ.
ಇಸ್ರೇಲ್ ಗಾಝಾದಲ್ಲಿ “ಯಾವುದೇ ಕ್ಷಾಮವಿಲ್ಲ” ಎಂಬ ಐಪಿಸಿಯ ವರದಿಯನ್ನು ತಿರಸ್ಕರಿಸಿದೆ. ಇಸ್ರೇಲ್ ಸೀಮಿತ ಪ್ರಮಾಣದ ನೆರವನ್ನು ಮಾತ್ರ ಅನುಮತಿಸಿದ್ದು, ಅದು ಅಗತ್ಯಕ್ಕೆ ಸಾಕಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ಮಾನವ ನಿರ್ಮಿತ ವಿಪತ್ತು
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಕ್ಷಾಮವನ್ನು “ಮಾನವ ನಿರ್ಮಿತ ವಿಪತ್ತು, ನೈತಿಕ ಅಧಪತನ ಮತ್ತು ಮಾನವೀಯತೆಯ ವೈಫಲ್ಯ ಎಂದು ಕರೆದಿದ್ದಾರೆ. ಇಸ್ರೇಲ್ನ ನಿಯಂತ್ರಣ ಇರುವ ಗಡಿಗಳಲ್ಲಿ ಸಹಾಯ ಸರಕುಗಳನ್ನು ಹೊತ್ತಿರುವ ಟ್ರಕ್ಗಳು ನಿಂತಿವೆ. ಆಹಾರದ ಕೆಲವು ನೂರು ಮೀಟರ್ಗಳ ಒಳಗೆ ಹಸಿವು ಹರಡುತ್ತಿದೆ ಎಂದು ವಿಶ್ವಸಂಸ್ಥೆಯ ನೆರವು ಮುಖ್ಯಸ್ಥ ಟಾಮ್ ಫ್ಲೆಚರ್ ಗಮನಸೆಳೆದಿದ್ದಾರೆ. ತಕ್ಷಣವೇ ಗಾಝಾಕ್ಕೆ ದೊಡ್ಡ ಪ್ರಮಾಣದಲ್ಲಿ ಆಹಾರ ಮತ್ತು ಔಷಧ ಕಳುಹಿಸಲು ಅನುಮತಿಸುವಂತೆ ಅವರು ಇಸ್ರೇಲ್ಗೆ ಒತ್ತಾಯಿಸಿದ್ದಾರೆ.












