ಸನ್ಮಾರ್ಗ ವಾರ್ತೆ
100 ಕೋಟಿ ಡಾಲರ್ ಮೊತ್ತದ ಟ್ರಂಪ್ ಪ್ಲಾಜಾ ಜಿದ್ದಾ ಯೋಜನೆಯು ಸೌದಿ ಅರೇಬಿಯಾದ ಜಿದ್ದಾದಲ್ಲಿ ಆರಂಭವಾಗಿದೆ. ಜಿದ್ದಾದಲ್ಲಿ ಟ್ರಂಪ್ ಅವರ ರಿಯಲ್ ಎಸ್ಟೇಟ್ ಕನಸಿನ ಎರಡನೇ ಯೋಜನೆ ಇದಾಗಿದ್ದು 2024 ಡಿಸೆಂಬರ್ನಲ್ಲಿ ಟ್ರಂಪ್ ಟವರ್ ಜಿದ್ದ ಆರಂಭವಾಗಿತ್ತು. ಜಿದ್ದಾದ ಹೃದಯ ಭಾಗದಲ್ಲಿರುವ ಕಿಂಗ್ ಅಬ್ದುಲ್ ಅಝೀ ಝ್ ರಸ್ತೆಯಲ್ಲಿ ಟ್ರಂಪ್ ಪ್ಲಾಜ ಜಿದ್ದ ನಿರ್ಮಾಣವಾಗುತ್ತಿದೆ.
ಉದ್ಯೋಗ ಮಾಡುವವರಿಗೆ, ಪ್ರವಾಸಿಗರಾಗಿ ಬಂದವರಿಗೆ ಮತ್ತು ಸ್ವಂತ ಮನೆಯನ್ನು ಪಡೆದು ಜೀವಿಸಲು ಬಯಸುವವರಿಗೆ ಸೂಕ್ತವಾದ ತಾಣವಾಗಿ ಈ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ. ಪ್ರೀಮಿಯಂ ರೆಸಿಡೆನ್ಸಿಗಳು, ಸರ್ವಿಸ್ ಅಪಾರ್ಟ್ಮೆಂಟ್ಗಳು, ಗ್ರೇಡ್ ಎ ಆಫೀಸ್ಗಳು, ಪ್ರತ್ಯೇಕ ಟೌನ್ ಹೌಸ್ಗಳು ಕೂಡ ಇದರಲ್ಲಿ ಇರಲಿವೆ.
ಈ ಯೋಜನೆಯು ನಮ್ಮ ವಿಶೇಷತೆಯ ಇನ್ನೊಂದು ಮೈಲಿಗಲ್ಲಾಗಲಿದೆ ಎಂದು ಟ್ರಂಪ್ ಆರ್ಗನೈಸೇಷನ್ ಹೇಳಿದೆ. ಸೌದಿಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ಈ ಮೂಲಕ ನಾವು ತೆರೆಯುತ್ತಿದ್ದೇವೆ ಎಂದು ಟ್ರಂಪ್ ಪ್ಲಾಝಾ ಜಿದ್ದಾದ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.












